ಮುಂಬೈ: ಭಾರತೀಯ ಸಿನಿಮಾರಂಗದ ಮಾಸ್ಟರ್ ಪೀಸ್ “ಶೋಲೆ” ಸಿನಿಮಾ ಬಿಡುಗಡೆಯಾಗಿದ್ದು 1975ರಲ್ಲಿ. ನಂತರ ಈ ಸಿನಿಮಾ ಸಾರ್ವಕಾಲಿಕ ದಾಖಲೆ ಬರೆದಿದ್ದು ಇಂದಿಗೂ ಇತಿಹಾಸವಾಗಿದೆ. ಬಾಲಿವುಡ್ ನ ಶೋಲೆ ಚಿತ್ರವನ್ನು ರಮೇಶ್ ಸಿಪ್ಪಿ ನಿರ್ದೇಶಿಸಿದ್ದು, ಅವರ ತಂದೆ ಜಿಪಿ ಸಿಪ್ಪಿ ಸಿನಿಮಾ ನಿರ್ಮಾಪಕರಾಗಿದ್ದರು. ಸಲೀಂ-ಜಾವೇದ್ ಚಿತ್ರಕಥೆ ಬರೆದಿದ್ದರು. ಸಿನಿಮಾ ಬಿಡುಗಡೆಯಾಗಿ 49 ವರ್ಷ ಕಳೆದಿದ್ದರೂ ಕೂಡಾ ಇಂದು ಸಾಮಾಜಿಕ ಜಾಲತಾಣದಲ್ಲಿ ನಿಜವಾದ ಕ್ಲೈಮ್ಯಾಕ್ಸ್ ಬಗ್ಗೆ ಚರ್ಚೆ ನಡೆಯುವ ಮೂಲಕ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:Iran; ರೈಸಿ ಅಂತ್ಯಕ್ರಿಯೆಯಲ್ಲಿ ಹಮಾಸ್, ಹೌತಿ, ತಾಲಿಬಾನ್ ನಾಯಕರು ಭಾಗಿ
49 ವರ್ಷಗಳ ಹಿಂದೆ ಬಿಡುಗಡೆಯಾಗಿ ದಾಖಲೆ ನಿರ್ಮಿಸಿದ್ದ ಶೋಲೆ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಠಾಕೂರ್ ಸಾಬ್…ಕ್ರಿಮಿನಲ್ ಗಬ್ಬರನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸಿನಿಮಾ ಕೊನೆಗೊಳ್ಳುತ್ತದೆ. ಆದರೆ ನಿರ್ದೇಶಕ ಸಿಪ್ಪಿ ಅವರು ಗಬ್ಬರ್ ನನ್ನು ಠಾಕೂರ್ ಅವರು ಕೊಲ್ಲುವ ದೃಶ್ಯವನ್ನು ಕ್ಲೈಮ್ಯಾಕ್ಸ್ ನಲ್ಲಿ ಚಿತ್ರೀಕರಿಸಿದ್ದರು. ಕೊನೆಗೆ ಆ ದೃಶ್ಯವನ್ನು ಬದಲಾಯಿಸಿದ್ದು ಯಾಕೆ ಎಂಬುದು ತಿಳಿದಿದೆಯಾ?
ಶೋಲೆ ಸಿನಿಮಾದಲ್ಲಿನ ಒರಿಜಿನಲ್ ಕ್ಲೈಮ್ಯಾಕ್ಸ್ ಅನ್ನು ಬದಲಾಯಿಸಿದ್ದೇಕೆ?
2018ರಲ್ಲಿ ಪುಣೆಯ ಅಂತಾರಾಷ್ಟ್ರೀಯ ಸಿನಿಮಾ ಚಿತ್ರೋತ್ಸವ(PIFF)ದಲ್ಲಿ ಪಾಲ್ಗೊಂಡಿದ್ದ ನಿರ್ದೇಶಕ ರಮೇಶ್ ಸಿಪ್ಪಿ ಅವರು ಶೋಲೆ ಸಿನಿಮಾದಲ್ಲಿನ ಗಬ್ಬರ್ ಸಿಂಗ್ ಅಂತ್ಯ ಹೇಗಾಯಿತು ಎಂಬುದನ್ನು ಬಹಿರಂಗಪಡಿಸಿದ್ದರು. “ ನಾನು ಶೋಲೆ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಗಬ್ಬರ್ ನನ್ನು ಠಾಕೂರ್ ಕೊಂದು ಬಿಡುವ ದೃಶ್ಯ ಚಿತ್ರೀಕರಿಸಿದ್ದೆ. ಆದರೆ ಸೆನ್ಸಾರ್ ಮಂಡಳಿ ಅಂದು ನಮಗೆ ಅದಕ್ಕೆ ಅನುಮತಿ ನೀಡಿರಲಿಲ್ಲ. ಎರಡೂ ಕೈಗಳಿಲ್ಲದ ಠಾಕೂರ್, ಕಾಲಿನಿಂದಲೇ ಒದ್ದು ಗಬ್ಬರ್ ನನ್ನು ಕೊಲ್ಲುವ ದೃಶ್ಯ ಸೆನ್ಸಾರ್ ಮಂಡಳಿಗೆ ಒಪ್ಪಿಗೆಯಾಗಿಲ್ಲವಾಗಿತ್ತು. ಆದರೂ ನಾನು ಠಾಕೂರ್ ಕೈಯಲ್ಲಿ ಗಬ್ಬರ್ ನನ್ನು ಕೊಲ್ಲಿಸುವುದು ಹೇಗೆ ಎಂಬ ಬಗ್ಗೆ ಚಿಂತಿಸಿದ್ದೆ. ಠಾಕೂರ್ ಕೈಗೆ ಗನ್ ಕೊಟ್ಟು ಸಾಯಿಸುವುದು ಅಸಾಧ್ಯವಾಗಿತ್ತು…ಯಾಕೆಂದರೆ ಠಾಕೂರ್ ಎರಡೂ ಕೈ ಕಳೆದುಕೊಂಡಿದ್ದರು. ಗನ್ ಬಳಸಿ ಹಿಂಸಾಚಾರಕ್ಕೆ ಒತ್ತು ಕೊಡುವ ಬಗ್ಗೆಯೂ ಸೆನ್ಸಾರ್ ಮಂಡಳಿ ಅಸಮಾಧಾನಗೊಂಡಿತ್ತು. ಕೊನೆಗೆ ಕ್ಲೈಮ್ಯಾಕ್ಸ್ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿತ್ತು. ಆ ಬಗ್ಗೆ ನಾನು ಖುಷಿಗೊಂಡಿರಲಿಲ್ಲ. ಅಂತೂ ಕ್ಲೈಮ್ಯಾಕ್ಸ್ ಬದಲಾಯಿಸಿದ್ದೆ ಎಂದು ತಿಳಿಸಿದ್ದರು. ಇದೀಗ ಶೋಲೆ ಸಿನಿಮಾದ ರಿಯಲ್ ಕ್ಲೈಮ್ಯಾಕ್ಸ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
ಶೋಲೆ ಸಿನಿಮಾದಲ್ಲಿ ಧರ್ಮೇಂದ್ರ, ಅಮಿತಾಬ್ ಬಚ್ಚನ್, ಸಂಜೀವ್ ಕುಮಾರ್, ಅಮ್ಜದ್ ಖಾನ್, ಹೇಮಾ ಮಾಲಿನಿ ಹಾಗೂ ಜಯಾ ಬಚ್ಚನ್ ಸೇರಿದಂತೆ ಸ್ಟಾರ್ ನಟರು ನಟಿಸಿದ್ದರು.