ಹರ್ಯಾಣ: ಮಾಜಿ ಆಟಗಾರ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರನ್ನು ನಿಂದನಾತ್ಮಕ ಹೇಳಿಕೆ ಕಾರಣಕ್ಕೆ ಹರ್ಯಾಣ ಪೊಲೀಸರು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆದರೆ ಯುವಿ ಬಂಧನಕ್ಕೆ ಕಾರಣವಾಗಿದ್ದು ಯುಜುವೇಂದ್ರ ಚಾಹಲ್ ಅವರ ಟಿಕ್ ಟಾಕ್ ವಿಡಿಯೋಗಳು!
2020ರ ಜೂನ್ ನಲ್ಲಿ ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಯುವರಾಜ್ ಸಿಂಗ್ ಅವರು ರೋಹಿತ್ ಶರ್ಮಾ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಸಂಭಾಷಣೆ ನಡೆಸಿದ್ದರು. ಈ ವೇಳೆ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬಗ್ಗೆ ಮಾತು ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುವ ಯುಜಿ ಚಾಹಲ್ ರ ಟಿಕ್ ಟಾಕ್ ವಿಡಿಯೋಗಳಿಗೆ ಯುವಿ ಮತ್ತು ರೋಹಿತ್ ತಮಾಷೆ ಮಾಡಿದ್ದರು.
ಆದರೆ ಮಾತಿನ ಭರದಲ್ಲಿ ಯುವರಾಜ್ ಸಿಂಗ್ ಚಾಹಲ್ ಗೆ ಜಾತಿನಿಂದನೆ ಶಬ್ಧವನ್ನು ಬಳಸಿದ್ದರು. ಈ ಲೈವ್ ಕಾರ್ಯಕ್ರಮ ಮುಗಿದ ಬಳಿಕ ದಲಿತ ಹಕ್ಕು ಕಾರ್ಯಕರ್ತರು ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಇದು ವಿವಾದ ರೂಪ ಪಡೆದ ಬಳಿಕ ಯುವರಾಜ್ ಸಿಂಗ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. “ಇದು ನಾನು ಜಾತಿ, ಬಣ್ಣ, ಪಂಥ ಅಥವಾ ಲಿಂಗದ ಆಧಾರದ ಮೇಲೆ ಯಾವುದೇ ರೀತಿಯ ಅಸಮಾನತೆಯನ್ನು ನಂಬಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾನು ಜನರ ಕಲ್ಯಾಣಕ್ಕಾಗಿ ನನ್ನ ಜೀವನವನ್ನು ನೀಡಿದ್ದೇನೆ ಮತ್ತು ಖರ್ಚು ಮಾಡುತ್ತಿದ್ದೇನೆ. ನಾನು ಜೀವನದ ಘನತೆಯನ್ನು ನಂಬುತ್ತೇನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುತ್ತೇನೆ” ಎಂದು ಯುವಿ ಹೇಳಿದ್ದರು.
ಇದನ್ನೂ ಓದಿ:ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ
ಆದರೆ ಶನಿವಾರ ಯುವರಾಜ್ ಸಿಂಗ್ ಅವರನ್ನು ಬಂಧಿಸಲಾಗಿದೆ. “ನ್ಯಾಯಾಲಯದ ಆದೇಶದಂತೆ ಯುವರಾಜ್ ಸಿಂಗ್ ಅವರನ್ನು ಬಂಧಿಸಲಾಯಿತು ಮತ್ತು ನಂತರ ಶನಿವಾರ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು” ಎಂದು ಹರಿಯಾಣದ ಹನ್ಸಿಯ ಹಿರಿಯ ಪೊಲೀಸ್ ಅಧಿಕಾರಿ ನಿತಿಕಾ ಗಹ್ಲೌತ್ ತಿಳಿಸಿದರು.