ಹಾವೇರಿ: ರಾಜ್ಯ ಚುನಾವಣಾ ಆಯೋಗ ಜಿಪಂ,ತಾಪಂ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಫೆ.20ರಂದು ನಡೆಯುವ ಸಭೆಗೆ ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಹಾಗೂ ಸಿಬ್ಬಂದಿ ಹಾಜರಾಗುವಂತೆ ಸೂಚನೆ ನೀಡಿದೆ.
ರಾಜ್ಯ ಚುನಾವಣೆ ಆಯೋಗಕ್ಕೆ ಈಗಾಗಲೇ ಜಿಲ್ಲಾ ಚುನಾವಣಾ ವಿಭಾಗದಿಂದ ಗ್ರಾಮೀಣ ವಿಭಾಗದ ಜನಸಂಖ್ಯೆ ವಿವರಗಳು ಸಲ್ಲಿಕೆಯಾಗಿದ್ದು, ತಾಲೂಕುವಾರು ಜಿಪಂ ಹಾಗೂ ತಾಪಂ ಸದಸ್ಯ ಸ್ಥಾನಗಳನ್ನು ಆಯೋಗವೇ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಸ್ಥಾನಗಳ ಆಧಾರದಲ್ಲಿ ತಾಪಂ, ಜಿಪಂ ಕ್ಷೇತ್ರಗಳನ್ನು ಪುನರ್ ರಚಿಸುವ ಕೆಲಸ ಜಿಲ್ಲಾಡಳಿತದ ಮುಂದಿದೆ.
ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ, ಹಾನಗಲ್ಲತಾಲೂಕುಗಳಲ್ಲಿ ತಲಾ ಒಂದು ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಲು ಆಯೋಗ ಸೂಚಿಸಿದೆ. ಇದರಿಂದ ಈ ಬಾರಿ ನಾಲ್ಕು ತಾಲೂಕುಗಳಲ್ಲಿ ಜಿಪಂ ಕ್ಷೇತ್ರಗಳ ವ್ಯಾಪ್ತಿ ಬದಲಾಗಲಿದೆ. ಇನ್ನು ಹಿರೇಕೆರೂರು ತಾಲೂಕಿನಲ್ಲಿದ್ದ 6 ಕ್ಷೇತ್ರಗಳನ್ನು ಆ ತಾಲೂಕಿನಿಂದ ಬೇರ್ಪಟ್ಟಿರುವ ರಟ್ಟಿಹಳ್ಳಿಗೆ 3, ಹಿರೇಕೆರೂರಿಗೆ 3 ಹಂಚಿಕೆ ಮಾಡಲಾಗಿದೆ. ಅಲ್ಲದೇ ರಟ್ಟಿಹಳ್ಳಿ ಗ್ರಾಪಂನಿಂದ ಪಪಂಗೆ ಮೇಲ್ದರ್ಜೆಗೇರಿದೆ. ಹೀಗಾಗಿ ರಟ್ಟಿಹಳ್ಳಿ ಜಿಪಂ ಕ್ಷೇತ್ರ ವಿಂಗಡಣೆ ಮಾಡುವ ಅಗತ್ಯವಿದೆ. ರಟ್ಟಿಹಳ್ಳಿ ಬದಲಾಗಿ ಹೊಸ ಕ್ಷೇತ್ರ ಅಲ್ಲಿ ಸೃಷ್ಟಿಯಾಗಲಿದೆ. 24 ತಾಪಂ ಕ್ಷೇತ್ರ ಕಡಿತ: ಇತ್ತೀಚೆಗೆ ತಾಪಂ ರದ್ದುಗೊಳಿಸಿ ಜಿಪಂ ಹಾಗೂ ಗ್ರಾಪಂಗಳಷ್ಟೇ ಇರಬೇಕೆಂಬ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಏಕಾಏಕಿ ಜಿಲ್ಲೆಯ 24 ತಾಪಂ ಕ್ಷೇತ್ರಗಳು ಕಡಿತವಾಗಿರುವುದು ಸ್ಪರ್ಧಾಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.
ಈ ಬಾರಿ ರಟ್ಟಿಹಳ್ಳಿ ಹೊಸದಾಗಿ ತಾಪಂ ಆಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಕ್ಷೇತ್ರಗಳು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿತ್ತು. 2016ರಲ್ಲೇ 128 ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈಗ ಆಯೋಗದ ನಿರ್ದೇಶನದಂತೆ 24 ಕ್ಷೇತ್ರಗಳನ್ನು ಕಡಿತಗೊಳಿಸಬೇಕಿದೆ. ಸದ್ಯ ಯಾವ ಕ್ಷೇತ್ರಗಳನ್ನು ಕಡಿತಗೊಳಿಸಬೇಕೆಂಬುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ :“ಮುಖ್ಯ ವೇದಿಕೆ ಅಂತಿಮಗೊಳಿಸಿ”
ಫೆ.20ರಂದು ಸಭೆ ನಿಗದಿ: ತಾಪಂ, ಜಿಪಂ ಕ್ಷೇತ್ರಗಳನ್ನು ಪುನರ್ ರಚಿಸಲು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಪಂಗಳು, ಗ್ರಾಮಗಳು, ಪುರುಷ ಹಾಗೂ ಮಹಿಳಾ ಮತದಾರರೆಷ್ಟು, ಎಸ್‌ಸಿ, ಎಸ್‌ಟಿ ಮತದಾರರೆಷ್ಟು ಒಟ್ಟು ಮತದಾರರೆಷ್ಟು ಎಂಬ ವಿವರಗಳೊಂದಿಗೆ ಫೆ. 20ರಂದು ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಹಾಗೂ ಸಿಬ್ಬಂದಿ ಆಯೋಗಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಇದರ ಜತೆಗೆ ತಾಲೂಕುವಾರು ಹಾಗೂ ಪ್ರತಿ ಜಿಪಂ, ತಾಪಂ ಕ್ಷೇತ್ರದ ನಕ್ಷೆ ಸಿದ್ಧಪಡಿಸಿಕೊಂಡು ಬರಲು ಸೂಚಿಸಲಾಗಿದೆ.