Advertisement

ಶಬರಿಮಲೆ ಹಿಂದಿನ ಅಸಲಿ ಸತ್ಯ ಅಂದು V/S ಇಂದು; ಪ್ರತ್ಯಕ್ಷ ವರದಿ

03:41 PM Dec 07, 2018 | |

“ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಉದ್ಘೋಷಗಳು, ಎಲ್ಲಿ ನೋಡಿದರೂ ಅಲ್ಲಿ ಕಾಣಸಿಗುವ ಇರುಮುಡಿ ಹೊತ್ತ ವ್ರತಾಧಾರಿಗಳು, ಅಯ್ಯಪ್ಪ ಭಕ್ತರಿಂದ ತುಂಬಿ ತುಳುಕುತ್ತಿದ್ದ ಪಂಪಾ ನದಿ, ರೈಲ್ವೇ  ನಿಲ್ದಾಣಗಳು. ಇದು ಇಷ್ಟು ವರ್ಷದ ಶಬರಿಮಲೆಯ ಚಿತ್ರಣವಾದರೇ, ಈಗ ‘ಖಾಲಿ ಖಾಲಿಯಾಗಿರುವ ರೈಲ್ವೇ ನಿಲ್ದಾಣಗಳು, ಭಕ್ತರಿಗಾಗಿ ಕಾದು ನಿರಾಸೆ ಅನುಭವಿಸುತ್ತಿರುವ ಟ್ಯಾಕ್ಸಿ ಚಾಲಕರು, ಬರಿದಾಗಿರುವ ಪಂಪಾ ನದಿ’ಇದು ಇಂದಿನ ಶಬರಿಮಲೆ ಚಿತ್ರಣ. 

Advertisement

ಕಂಡು ಕೇಳರಿಯದ ಶತಮಾನದ ಭೀಕರ ಮಳೆ, ಪ್ರವಾಹಕ್ಕೆ ಸಾಕಷ್ಟು ನಷ್ಟ ಅನುಭವಿಸಿದ ಕೇರಳ ಇದೀಗ ಮತ್ತೊಂದು ಹೊಡೆತಕ್ಕೆ ಆಘಾತ ಅನುಭವಿಸುತ್ತಿದೆ. ಅದುವೇ ಐತಿಹಾಸಿಕ ಶಬರಿಮಲೆ ತೀರ್ಪು ಮತ್ತು ಅದರಿಂದ ಉಂಟಾದ ವಿವಾದಗಳು.
 
ಭಕ್ತ ಜನಸಾಗರವೇ ಹರಿದು ಬರುವ ಶಬರಿಮಲೆಯಲ್ಲಿ ಶಸ್ತ್ರ ಸಜ್ಜಿತ ಕಮಾಂಡೋಗಳ ಸರ್ಪಗಾವಲಿದೆ, ಕಟ್ಟುನಿಟ್ಟಿನ ಭದ್ರತಾ ತಪಾಸಣೆಯಿದೆ, ಮಲೆಗೆ ಹೋಗುವ ಭಕ್ತರಿಗೆ ತೊಂದರೆಗಳು ತಪ್ಪಿದ್ದಲ್ಲ ಎಂಬಿತ್ಯಾದಿ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಿರುವುದರಿಂದ ಈ ಬಾರಿ ಶಬರಿಮಲೆಗೆ ಹೋಗಲು ಭಕ್ತರು ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ಅಯ್ಯಪ್ಪನ ಸನ್ನಿಧಿಯಲ್ಲಿ ಈಗ ಪರಿಸ್ಥಿತಿ ಹೇಗಿದೆ ಎಂಬುದರ ಪ್ರತ್ಯಕ್ಷ ವರದಿ ಇಲ್ಲಿದೆ.


ಭಕ್ತರಲ್ಲಿ ಇರುವ ಆತಂಕಗಳೇನು ?
ಶಬರಿಮಲೆಗೆ ಭೇಟಿ ನೀಡುವ ಭಕ್ತರು ಹಲವಾರು ವದಂತಿಗಳಿಂದ ಅಯ್ಯಪ್ಪಮಾಲೆ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ಕರ್ನಾಟಕ ಕರಾವಳಿಯ 150ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಅಯ್ಯಪ್ಪ ಭಕ್ತರ ತಂಡವೊಂದು ಈ ಬಾರಿ ಮಲೆಗೆ ಹೋಗುತ್ತಿಲ್ಲ ಎಂಬ ವಿಷಯ ಇಂತಹ ಸುದ್ದಿಗಳಿಗೆ ಪುಷ್ಠಿ ಕೊಡುತ್ತಿದೆ.   

ಈಗ ಶಬರಿಮಲೆ ಪರಿಸ್ಥಿತಿ ನಿಜಕ್ಕೂ ಹೇಗಿದೇ ?
ನಾವು ನೋಡಿದ, ಕೇಳಿದ ಸುದ್ದಿಗೂ ಪ್ರಸ್ತುತ ಶಬರಿಮಲೆಯಲ್ಲಿ ಇರುವ ವಾಸ್ತವಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಬೆಟ್ಟ ಹತ್ತುವ ಮೊದಲು ಸಿಗುವ ಪಂಪಾ ನದಿ ಕ್ಷೇತ್ರ ಮಾತ್ರ ಅಕ್ಷರಶಃ 10 ವರ್ಷದಷ್ಟು ಹಿಂದಕ್ಕೆ ಹೋಗಿದೆ.  ಕಾರಣ ಕಳೆದ ಆಗಸ್ಟ್ ನಲ್ಲಿ ಸುರಿದ ಮಹಾಮಳೆ. ಪ್ರವಾಹದಿಂದ ಉಂಟಾದ ಅನಾಹುತಕ್ಕೆ ಪಂಪಾ ನದಿಯ ಚಿತ್ರಣವೇ ಬದಲಾಗಿದೆ. ಪಂಪಾ ನದಿಯ ಸ್ನಾನಘಟ್ಟ ಸಂಪೂರ್ಣ ನಾಶವಾಗಿದೆ. ಅಲ್ಲಲ್ಲಿ ಒಂದೊಂದು ಅವಶೇಷದ ರೂಪದಲ್ಲಿ ಕಾಣಸಿಗುವ ಟೈಲ್ಸ್ ಗಳು ಹಳೆಯ ವೈಭವದ ಕುರುಹು ಎಂಬಂತೆ ಉಳಿದುಕೊಂಡಿದೆ. ಮೊದಲೆಲ್ಲಾ ಭಕ್ತರು ತಾವು ಹೊತ್ತು ತಂದ ಇರುಮುಡಿಯನ್ನು ನದಿ ಪಾತ್ರದಲ್ಲಿದ್ದ ವಿಶಾಲ ಸಭಾಂಗಣದಲ್ಲಿರಿಸಿ ಪಂಪಾ ನದಿಯಲ್ಲಿ ಸ್ನಾನ ಪೂರೈಸಿ ನಂತರ ಇರುಮುಡಿ ಪೂಜೆ ನಡೆಸಿ ಶಬರಿಗಿರಿವಾಸನ ದರ್ಶನಕ್ಕೆ ತೆರಳುತ್ತಿದ್ದರು. ಆದರೆ ಈಗ ಇರುಮುಡಿ ಇಡಲು ವಿಶಾಲ ಸಭಾಂಗಣವೇ ಇಲ್ಲ. ಬದಲಾಗಿ ಅಲ್ಲಿರುವುದು ಕೇವಲ ಪ್ರವಾಹ ಹೊತ್ತು ತಂದ ಮಣ್ಣಿನ ರಾಶಿ!


ಪಂಪೆಯ ಹಳೆಯ ಸೌಂದರ್ಯವೇ ಹಾಳಾಗಿದೆ. ನದಿಯ ದಡದಲ್ಲಿದ್ದ ಹಲವಾರು ಕಟ್ಟಡಗಳು, ಸುಂದರ ನದಿ ಪಾತ್ರ ಎಲ್ಲವೂ ಪ್ರವಾಹದ ರಭಸಕ್ಕೆ ಸಿಕ್ಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ನದಿಯ ಒಂದು ಭಾಗದಲ್ಲಿ ಎತ್ತರದ ಪ್ರದೇಶವಿರುವುದರಿಂದ ಮಣ್ಣು ಕುಸಿತವಾಗಿದ್ದು ಮತ್ತಷ್ಟು ಕುಸಿಯದಂತೆ ಸಾವಿರ ಸಂಖ್ಯೆಯಲ್ಲಿ ಮರಳು ಚೀಲಗಳನ್ನು ಇರಿಸಲಾಗಿದೆ. ಇದರಿಂದಾಗಿ ಪಂಪಾ ನದಿ ಪ್ರದೇಶ ತನ್ನ ಪ್ರಾಕೃತಿಕ ಸೌಂದರ್ಯವನ್ನು ಕಳೆದುಕೊಂಡಿದೆ. ಭಕ್ತರಿಗಾಗಿ ನಿರ್ಮಿಸಲಾಗಿದ್ದ ಹಲವು ಬಹುಮಹಡಿ ಶೌಚಾಲಯಗಳು ಈಗ ನೆಲ ಸಮವಾಗಿದೆ. ಈಗ ಇರುವುದು ಕೇವಲ ಕೆಲವು ಶೌಚಾಲಯ ಮಾತ್ರ. ಭಕ್ತರು ಹೆಚ್ಚಾದಂತೆ ಈ ಮೂಲ ಸೌಕರ್ಯದ ಕೊರತೆ ಮತ್ತಷ್ಟು ಹೆಚ್ಚಾಗಬಹುದು.


ಕಳೆದ ವರ್ಷದವರೆಗೆ ಮಲೆಗೆ ಹೋಗುವ ಭಕ್ತರು ತಮ್ಮ ಖಾಸಗಿ ವಾಹನದಲ್ಲಿ ಪಂಪಾಗೆ ಹೋಗಿ ಮತ್ತೆ ನೀಲಕ್ಕಲ್ ನಲ್ಲಿ ವಾಹನ ಪಾರ್ಕಿಂಗ್ ಮಾಡಬೇಕಿತ್ತು. ಆದರೆ ಈಗ ಕೇರಳ ಸರಕಾರದ ವಾಹನ ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ವಾಹನಗಳಿಗೆ ಪಂಪಾಗೆ ಪ್ರವೇಶವಿಲ್ಲ. ನೇರವಾಗಿ ನೀಲಕ್ಕಲ್ ಗೆ ಹೋಗಿ ಅಲ್ಲಿಂದ ಸರಕಾರಿ ಬಸ್ ಮೂಲಕ ಪಂಪಾಗೆ ಪ್ರಯಾಣ ಬೆಳೆಸಬೇಕು. ಹಿಂದಿರುಗುವಾಗಲೂ ಅಷ್ಟೇ ಪಂಪಾದಿಂದ ಸರಕಾರಿ ಬಸ್ ಮೂಲಕವೇ ನೀಲಕ್ಕಲ್ ಗೆ ತೆರಳಿ ನಂತರ ತಮ್ಮ ವಾಹನ ಬಳಸಬಹುದಾಗಿದೆ.

Advertisement

ನೀಲಿಮಲೆ ಏರಿದಾಕ್ಷಣ ಶಸ್ತ್ರ ಸಜ್ಜಿತ ಕಮಾಂಡೋಗಳು ಎದುರುಗೊಳ್ಳುತ್ತಾರೆ, ಅವರ ರಕ್ಷಣೆಯಲ್ಲೇ ತೆರಳಬೇಕು ಎಂಬ ವದಂತಿಗಳನ್ನು ಸತ್ಯವನ್ನಾಗಿಸುವ ಯಾವುದೇ ಅಂಶ ಅಲ್ಲಿ ಕಾಣಸಿಗುವುದಿಲ್ಲ. ಈ ಹಿಂದೆ ಇದ್ದಂತೆ ಪೊಲೀಸರು, ಕಮಾಂಡೋಗಳು ಅಯ್ಯಪ್ಪ ದೇವಸ್ಥಾನದ ಹತ್ತಿರ ಈಗಲೂ ಇದ್ದಾರೆ. ಆದರೆ ಹೆಚ್ಚುವರಿಯೇನಿಲ್ಲ. ಆದುದರಿಂದ ಭಕ್ತರು ಆತಂಕ ಪಡಬೇಕಾದ ಅಗತ್ಯವೇನಿಲ್ಲ. ಅಯ್ಯಪ್ಪನ ಸನ್ನಿಧಾನದಲ್ಲಿ ಶರಣು ಕೂಗಿದವರನ್ನು ಬಂಧಿಸುವ ಯಾವ ಪ್ರಯತ್ನಗಳು ಕೂಡಾ ಈಗ ಆಗುತ್ತಿಲ್ಲ. ಭಕ್ತನೋರ್ವ ನಿರಾತಂಕವಾಗಿ ಅಯ್ಯಪ್ಪನ ದರ್ಶನ ಮುಗಿಸಿ ಹಿಂದೆ ಬರಲು ಯಾರು ಕೂಡಾ ತಡೆಯುವ ಪ್ರಯತ್ನ ಮಾಡುವುದಿಲ್ಲ. 

ವ್ಯಾಪಾರ ವಹಿವಾಟು ಈಗ ಹೇಗಿದೆ?


ಮಂಡಲಪೂಜೆಗೆ ಅಯ್ಯಪ್ಪನ ದೇವಳದ ಬಾಗಿಲು ತೆರೆದಿದೆ ಎಂದರೆ ಬೆಟ್ಟದ ದಾರಿಯ ಮತ್ತು ಬೆಟ್ಟದ ಮೇಲಿನ ವ್ಯಾಪಾರಿಗಳಿಗೆ ಹಬ್ಬದ ವಾತಾವರಣ. ಒಂದು ಕ್ಷಣವು ಕೂಡಾ ವಿರಾಮವಿಲ್ಲದಷ್ಟು ವ್ಯಾಪಾರ, ಆದರೆ ಈಗ ಹಾಗಿಲ್ಲ. ಬೆಟ್ಟದ ದಾರಿಯಲ್ಲಿದ್ದ ಹೋಟೇಲುಗಳ ಸಂಖ್ಯೆ ಇಳಿಮುಖವಾಗಿದೆ. ಕ್ಷೇತ್ರಕ್ಕೆ ಭಕ್ತರ ಹರಿವು ಕಡಿಮೆಯಾಗಿದ್ದರಿಂದ ವ್ಯಾಪಾರ ಕೂಡಾ ಗಣನೀಯವಾಗಿ ಇಳಿಮುಖವಾಗಿದೆ. ‘ರಾಜಕಾರಣಿಗಳ ರಾಜಕೀಯದಾಟದಿಂದಾಗಿ ಭಕ್ತರು ಬರಲು ಹೆದರುತ್ತಿದ್ದಾರೆ. ಇದರಿಂದಾಗಿ ನಮ್ಮ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 60ರಷ್ಟು ವ್ಯಾಪಾರ ಇಳಿಮುಖವಾಗಿದೆ ಎನ್ನುತ್ತಾರೆ ಬೆಟ್ಟದ ಮೇಲಿನ ಹೋಟೇಲು ವ್ಯಾಪಾರಿಯೊಬ್ಬರು. 
 
ಯಾವುದೇ ಆತಂಕ ಬೇಡ
ಶಬರಿಮಲೆ ಅಯ್ಯಪ್ಪನ ಸನ್ನಿಧಾನಕ್ಕೆ ಹೋಗುವ ಭಕ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸುಗಮ ಸುಲಲಿತ ಪ್ರಯಾಣಕ್ಕೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಅಲ್ಲಿ ಮಾಡಿಕೊಡಲಾಗಿದೆ. ಹರಿದಾಡುತ್ತಿರುವ ಸುಳ್ಳು ವಂದಂತಿಗಳಿಗೆ ಭಕ್ತರು ಕಿವಿಗೊಡದೆ ನಿರಾತಂಕವಾಗಿ ಶಬರಿಮಲೆ ಯಾತ್ರೆ ಕೈಗೊಳ್ಳಬಹುದು. 

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next