“ಈ ಟಾಪ್‌ಗೆ ನೀಲಿ ಜೀನ್ಸ್ ಹಾಕೋದಾ, ಕಪ್ಪು ಜೀನ್ಸಾ’, “ನೋಡೇ, ನನ್ ಹೇರ್‌ಸ್ಟೈಲ್ ಹೇಗಿದೆ’, “ನಾಳೆ ನಮ್ ಟೀಮ್ ಅವೆಲ್ಲಾ ಒಂದೇ ಕಲರ್ ಡ್ರೆಸ್
ಹಾಕ್ಕೊಂಡ್ ಹೋಗ್ಬೇಕು’… ಹೀಗೆಲ್ಲಾ ಖುಷಿ ಖುಷಿಯಿಂದ ಇದ್ದ ಹುಡುಗಿಯರಿಗೆ, ಇದ್ದಕ್ಕಿದ್ದ ಹಾಗೆ, ಪೈಜಾಮದಲ್ಲೇ ವಾರ ಕಳೆಯುವ ಪರಿಸ್ಥಿತಿ ಬಂದರೆ ಹೇಗಾಗಬೇಡ ಹೇಳಿ? ಈಗ ನಮ್ಮದೆಲ್ಲ ಅದೇ ಪರಿಸ್ಥಿತಿ. ಹದಿನೈದು ದಿನದಿಂದ ಮನೆಯೇ ಆಫಿಸ್ ಆಗಿ, “ಆಫಿಸ್‌ಗೆ ರೆಡಿಯಾಗುವುದು’ ಎಂಬ ಸಂಭ್ರಮಕ್ಕೆ ಬ್ರೇಕ್ ಬಿದ್ದು, ಏನೋ ಒಂಥರಾ ಜಡತ್ವ ಮನಸ್ಸನ್ನು ಆವರಿಸಿದೆ.
ನನ್ನ ಫ್ರೆಂಡ್ ಹೇಳುವ ಪ್ರಕಾರ, ಹುಡುಗಿಯರು ಎರಡು ಕಾರಣಕ್ಕೆ ಅಲಂಕಾರ ಮಾಡಿಕೊಳ್ಳುತ್ತಾರಂತೆ. (ಇದು ಅವಳ ಅಭಿಪ್ರಾಯ) ಒಂದು- ಹುಡುಗರನ್ನು
ಇಂಪ್ರಸ್ ಮಾಡಲು. ಮತ್ತೂಂದು, ಇತರೆ ಹುಡುಗಿಯರ ಹೊಟ್ಟೆ ಉರಿಸಲು. ಆದರೆ, ಲಾಕ್ ಡೌನ್ ಕಾರಣದಿಂದ, ಮೇಕ್‌ಅಪ್ ಮಾಡಿಕೊಳ್ಳೋಕೆ
ಕಾರಣವೇ ಇಲ್ಲದಂತಾಗಿದೆ. ದಿನಾ ಬೆಳಗ್ಗೆ ಏಳ್ಳೋದು, ಹಾಳು ಮುಖದಲ್ಲೇ ಲಾಗ್ ಇನ್ ಆಗಿ, ಬ್ರಷ್ ಮಾಡೋಕೆ ಓಡೋದು. ಯಾವಾಗಲಾದರೊಮ್ಮೆ
ಆಫಿಸ್‌ನ ವಿಡಿಯೋ ಕಾಲ್ ಇದ್ದಾಗ ತಲೆ ಬಾಚಿಕೊಂಡು ಕೂರುವುದು. (ಟೀಮ್‌ನವರ ಎದುರು ನಿಜ ಬಣ್ಣ ಬಯಲಾಗಬಾರದು ನೋಡಿ). ಆಮೇಲೆ,
ಲೇಟಾಗಿ ಎದ್ದಿದ್ದಕ್ಕೆ, “ನೀನು ಪಿ.ಜಿ.ಯಲ್ಲಿ ಇದ್ದು ಮಹಾ ಸೋಮಾರಿ ಆಗಿದ್ದೀಯಾ ಕಣೆ’ ಅಂತ ಅಮ್ಮನಿಂದ ಬೈಸಿಕೊಳ್ಳೋದು.
ಮೊದಲೆಲ್ಲಾ ಹೀಗಿರಲಿಲ್ಲ. ಸಂಜೆ ಆಫಿಸಿಂದ ಬಂದವಳೇ, ನಾಳೆ ಯಾವ ಡ್ರೆಸ್ ಹಾಕಲಿ ಅಂತ ಕಪ್‌ಬೋರ್ಡ್ ತೆಗೆದು, ಹತ್ತು ನಿಮಿಷ ತಡಕಾಡುತ್ತಿದ್ದೆ. ಆಮೇಲೆ, ಅದಕ್ಕೆ ಚೆನ್ನಾಗಿ ಇಸ್ತ್ರೀ ಹಾಕಿ, ಅದಕ್ಕೊಪ್ಪುವ ಜೀನ್/ ಲೆಗ್ಗಿನ್, ಜುಮುಕಿ ತೆಗೆದು ಒಪ್ಪವಾಗಿ ಜೋಡಿಸಿ ಇಡುತ್ತಿದ್ದೆ. ಕೆಲವೊಮ್ಮೆ ಡ್ರೆಸ್‌ಗೆ ತಕ್ಕಂತೆ ಬ್ಯಾಗ್, ಸ್ಲಿಪ್ಪರ್ ಕೂಡ ಬದಲಿಸುತ್ತಿದ್ದೆ. ಹೊಸ ಟಾಪ್ ಅಥವಾ ಡ್ರೆಸ್ ಆದರಂತೂ, ನೆಕ್ ಡೀಪ್ ಆಯ್ತಾ, ತೋಳು ಗಿಡ್ಡ ಆಯ್ತಾ, ಈ ಬಟ್ಟೆ ಪಡ್ಡೆ ಹುಡುಗರ ಕಾಕದೃಷ್ಟಿಗೆ ಬೀಳುವ ಅಪಾಯ ಇದೆಯಾ ಅಂತೆಲ್ಲ ಪಿ.ಜಿ. ಹುಡುಗಿಯರ ಎದುರು ರಿಯಾಲಿಟಿ ಚೆಕ್ ನಡೆಸಬೇಕಿತ್ತು.
ಬೆಳಗ್ಗೆ ಎಂಟು ಗಂಟೆಗೆಲ್ಲಾ ಪಿ.ಜಿ. ಮುಂದೆ ಬಂದು ನಿಲ್ಲುತ್ತಿದ್ದ ಆಫಿಸ್ ಕ್ಯಾಬ್ ಮಿಸ್ ಆಗಬಾರದು ಅಂತಿದ್ರೆ, ಹಿಂದಿನ ದಿನ ಇಷ್ಟೆಲ್ಲಾ ತಯಾರಿ ಮಾಡಿಕೊಳ್ಳಬೇಕು. ಆದರೂ ಕಣ್ಣಿಗೆ ಕಾಡಿಗೆ ಹಚ್ಚಿ ಕೊಳ್ಳುವಾಗಲೇ, ಗೇಟ್ ಬಳಿ ಕ್ಯಾಬ್ ಹಾರ್ನ್ ಸದ್ದು! ಆಫಿಸ್ ಅಲ್ಲಿ ಎದುರು ಸಿಕ್ಕಿದ ಯಾರಾದರೂ, “ಹೇ ನೈಸ್ ಡ್ರೆಸ್’ ಅಂತಲೋ, “ಲುಕಿಂಗ್ ಪ್ರಿಟಿ’ ಅಂತ ಹೇಳಿದರೆ, ಆ ದಿನವೆಲ್ಲ ಏನೋ ಒಂಥರಾ ಉತ್ಸಾಹ ಮೀಟಿಂಗ್‌ನಲ್ಲಿ ಮಾತಾಡುವಾಗ ಹೊಸ ಬಗೆಯ ಆತ್ಮವಿಶ್ವಾಸ. ಆಗೆಲ್ಲ ಅನ್ನಿಸುವುದು, ಅಲಂಕಾರ ಬೇರೆಯವರನ್ನು ಮೆಚ್ಚಿಸುವುದಕ್ಕೆ ಅಲ್ಲ, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅಂತ. ಅಯ್ಯೋ ಬಿಡಿ, ಇದೆಲ್ಲ ಯಾವುದೋ ಓಬಿರಾಯನ ಕಾಲದಲ್ಲಿ ನಡೆದಿದ್ದು ಅಂತ ಅನ್ನಿಸುತ್ತಿದೆ ಈಗ.
ಇನ್ನೆಷ್ಟು ದಿನ ಹೀಗೆ ಬಣ್ಣಗೆಟ್ಟು ಕಾಲ ಕಳೆಯಬೇಕೋ ಗೊತ್ತಿಲ್ಲ. ದೇವರೇ, ನನಗೋಸ್ಕರ ಅಲ್ಲದಿದ್ದರೂ ನನ್ನ ಬಟ್ಟೆಗಳಿಗೋಸ್ಕರ ಕೊರೊನಾವನ್ನು ದೂರ ಡು.
ಕಪ್ ಬೋರ್ಡ್‌ನಲ್ಲಿರುವ ನನ್ನ ಬಣ್ಣ ಬಣ್ಣದ ಚೂಡಿ, ಮಿಡಿ, ಜೀನ್ಸ್, ಟಾಪ್ ಇತ್ಯಾದಿಗಳಿಗೆ ಆದಷ್ಟು ಬೇಗ ಹೊರ ಜಗತ್ತನ್ನು ನೋಡುವ ಭಾಗ್ಯ ಸಿಗುವಂತೆ
ಮಾಡು..!
– ಸಾಗರಿಕ