ಹುಬ್ಬಳ್ಳಿ: ಕಾಶ್ಮೀರದಲ್ಲಿ ನಡೆದಿರುವ ನೈಜ ಘಟನೆಗಳನ್ನು ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ತೋರಿಸಿದ್ದು, ಅಂತಹ ಘಟನೆಗಳು ಮರುಕಳಿಸಬಾರದೆಂದು ಮೂರು ಸಾವಿರ ಮಠದ ಜಗದ್ಗುರು ಡಾ|ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಸ್ಟೇಶನ್ ರಸ್ತೆಯ ರೂಪಂ ಚಿತ್ರಮಂದಿರದಲ್ಲಿ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಾರ್ವಜನಿಕರಿಗೆ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಇದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕಾಶ್ಮೀರ ಎಂದರೆ ದೇಶದ ಕಳಸ ಆಗಿದೆ. ಅಲ್ಲಿನ ಪಂಡಿತರಿಗೆ ನೀಡಿರುವ ಚಿತ್ರಹಿಂಸೆ, ಅವರ ಮೇಲೆ ಮಾಡಿರುವ ದೌರ್ಜನ್ಯಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಸಚಿವ ಪ್ರಹ್ಲಾದ ಜೋಶಿ ಅವರ ಕಾರ್ಯ ಶ್ಲಾಘನೀಯ ಎಂದರು.
ಮುಖಂಡ ಗೋವಿಂದ ಜೋಶಿ ಮಾತನಾಡಿ, ಚಿತ್ರದಲ್ಲಿ ಅಂದಿನ ಕಾಶ್ಮೀರದ ನೈಜ ಘಟನೆಯನ್ನು ಸವಿವರವಾಗಿ ತೋರಿಸಲಾಗಿದ್ದು, ಎಲ್ಲರೂ ನೋಡಲಿ ಎಂದರು. ಮುಖಂಡ ಜಯತೀರ್ಥ ಕಟ್ಟಿ ವಂದೇ ಮಾತರಂ ಗೀತೆ ಪ್ರಸ್ತುತ ಪಡಿಸಿದರು. ಚಿತ್ರಮಂದಿರದ ಹೊರಭಾಗದಲ್ಲಿ ಇರಿಸಿದ್ದ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.
ಸಂಚಾರ ಅಸ್ತವ್ಯಸ್ತ: ಕಾಶ್ಮಿರ ಫೈಲ್ ಚಿತ್ರ ವೀಕ್ಷಣೆ ಉಚಿತ ಎಂದು ತಿಳಿದ ನೂರಾರು ಜನರು ಚಿತ್ರಮಂದಿರದತ್ತ ಆಗಮಿಸಿದ್ದರಿಂದ ಚಿತ್ರಮಂದಿರದ ಸುತ್ತ ಸಂಚಾರ ಅಸ್ತವ್ಯಸ್ತವಾಗಿದ್ದು ಕಂಡು ಬಂತು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲುºರ್ಗಿ, ಸಂತೋಷ ಚವ್ಹಾಣ, ಮಹೇಂದ್ರ ಕೌತಾಳ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ ಇನ್ನಿತರಿದ್ದರು.
ಚಿತ್ರಮಂದಿರದಲ್ಲಿ ನೂಕುನುಗ್ಗಲು: ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗೆ ಟಿಕೆಟ್ ತೋರಿಸಿದವರಿಗೆ ಮಾತ್ರ ಒಳಗಡೆ ಬಿಡುತ್ತಿದ್ದರು. ಈ ಸಮಯದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಟಿಕೆಟ್ ಇಲ್ಲದೇ ಇರುವವರಿಗೆ ಅವಕಾಶ ನೀಡದ್ದರಿಂದ ಗೊಂದಲ ಉಂಟಾಗಿತ್ತು.