ಬೆಂಗಳೂರು: ನಗರದ ರೋಗಿಗಳ ಅಲೆದಾಟ ತಪ್ಪಿಸಲು ಆರೋಗ್ಯ ಬುಲೆಟಿನ್ ಮಾದರಿಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಮತ್ತು ಲಭ್ಯ ಇರುವ ಹಾಸಿಗೆಗಳ ಬಗ್ಗೆ “ರಿಯಲ್ ಟೈಮ್’ ಮಾಹಿತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಕೋವಿಡ್-19 ಮತ್ತು ಇತರ ರೋಗಿಗಳು ನಿತ್ಯ ಆಸ್ಪತ್ರೆಗಳಿಗಾಗಿ ಅಲೆದಾಡುತ್ತಿದ್ದಾರೆ.
ಹತ್ತಾರು ಆಸ್ಪತ್ರೆಗಳಿಗೆ ತಿರುಗಾಡಿದರೂ ಸಕಾಲದಲ್ಲಿ ಚಿಕಿತ್ಸೆ ಫಲಿಸದೆ ಕೆಲವರು ಸಾವಿಗೀಡಾಗಿರುವ ಘಟನೆಗಳೂ ವರದಿಯಾಗಿವೆ. ಇದೆಲ್ಲದಕ್ಕೂ ಮೂಲ ಕಾರಣ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಕೊರತೆ. ಈ ಹಿನ್ನೆಲೆಯಲ್ಲಿ ನಿತ್ಯ ಎರಡು ಹೊತ್ತು (ಬೆಳಗ್ಗೆ ಮತ್ತು ಸಂಜೆ) ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು, ಲಭ್ಯ ಇರುವ ಹಾಸಿಗೆಗಳು ಸೇರಿದಂತೆ ಸಮಗ್ರ ಮಾಹಿತಿ ನೀಡಲು ಸರ್ಕಾರ ಯೋಚಿಸುತ್ತಿದೆ.
ಆಯಾ ಆಸ್ಪತ್ರೆಗಳ ಒಟ್ಟಾರೆ ಹಾಸಿಗೆಗಳ ಸಾಮರ್ಥ್ಯ, ಕೋವಿಡ್-19 ಮತ್ತು ಕೋವಿಡ್ ಯೇತರರಿಗೆ ಮೀಸಲಿಟ್ಟ ಮತ್ತು ಈಗಾಗಲೇ ಬಳಕೆಯಲ್ಲಿರುವ ಹಾಸಿಗೆಗಳು, ವೆಂಟಿಲೇಟರ್, ಐಸಿಯು ವಾರ್ಡ್ ಮತ್ತಿತರ ಮಾಹಿತಿಗಳನ್ನು “ರಿಯಲ್ ಟೈಮ್’ ರೂಪದಲ್ಲಿ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಇದು ಸಾಧ್ಯವಾದರೆ, ರೋಗಿಗಳ ಅಲೆದಾಟ, ಸಮಯ ಉಳಿಯಲಿದೆ. ಸಕಾಲದಲ್ಲಿ ಚಿಕಿತ್ಸೆ ದೊರೆತು ರೋಗಿಗಳು ಬದುಕುವ ಸಾಧ್ಯತೆ ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚಿಂತನೆ ಇದೆ; ನಿರ್ಧಾರ ಆಗಿಲ್ಲ- ನಿರ್ದೇಶಕ: “ಕೋವಿಡ್-19 ನಿರ್ವಹಣೆಯಲ್ಲಿ ತೊಡಗಿದ್ದರಿಂದ ಇತರೆ ರೋಗಿಗಳಿಗೆ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಲ್ಲಿ ರಿಯಲ್ ಟೈಮ್ ಮಾಹಿತಿಯೂ ಒಂದಾಗಿದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳು, ವೆಂಟಿಲೇಟರ್ ಮತ್ತಿತರ ಅಂಶಗಳನ್ನು ಒಳಗೊಂಡ ರಿಯಲ್ ಟೈಮ್ ಮಾಹಿತಿ ನೀಡುವ ಚಿಂತನೆ ಇದೆ.
ಆದರೆ, ಇನ್ನೂ ನಿರ್ಧಾರ ಆಗಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಓಂ ಪ್ರಕಾಶ ಪಾಟೀಲ್ “ಉದಯವಾಣಿ’ಗೆ ತಿಳಿಸಿದರು. ವಿಕ್ಟೋರಿಯಾ ಸೇರಿದಂತೆ ಒಟ್ಟಾರೆ 17 ಸರ್ಕಾರಿ ಆಸ್ಪತ್ರೆಗಳು ಹಾಗೂ ನೂರಾರು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆ ಮೀಸಲಿಡಲಾಗಿದೆ.
ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ನಗರದಲ್ಲಿ ಆರು ಸಾವಿರಕ್ಕೂ ಅಧಿಕ ಕ್ಲಿನಿಕ್ ಮತ್ತು ಆಸ್ಪತ್ರೆಗಳಿವೆ. “ಅವುಗಳ ಸಮಗ್ರ ಮಾಹಿತಿ ನಿತ್ಯ ಸಂಬಂಧಪಟ್ಟ ಇಲಾಖೆಗೆ ನೀಡಲಾಗುತ್ತಿದೆ. ಆದರೆ, ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಆಯಾ ವಾರ್ಡ್ ಮಟ್ಟದ ಕಚೇರಿಗಳಲ್ಲಿ ಇದು ದೊರೆಯುವಂತಾಗಬೇಕು ಎಂದು ಬಿ.ಪ್ಯಾಕ್ (ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ) ಸದಸ್ಯ ಎನ್. ಹರೀಶ್ ಅಭಿಪ್ರಾಯಪಡುತ್ತಾರೆ.
ಆಸ್ಪತ್ರೆ ವಿವರ ನೀಡಲು ಆಗುವುದಿಲ್ಲವೇ; ತಜ್ಞರು: “ಸರ್ಕಾರ ಒಂದೆಡೆ ಹಾಸಿಗೆಗಳ ಕೊರತೆ ಇಲ್ಲ ಎಂದು ಹೇಳುತ್ತದೆ. ಆದರೆ, ಮತ್ತೂಂದೆಡೆ ಕೆಲ ಆಸ್ಪತ್ರೆಗಳು ರೋಗಿಗಳನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಹಾಗಿದ್ದರೆ, ಸಮಸ್ಯೆ ಇರುವುದು ಎಲ್ಲಿ? ಬೆಂಗಳೂರು ಐಟಿ ರಾಜಧಾನಿ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಸಾರ್ವಜನಿಕರಿಗೆ ಮೊಬೈಲ್‌ಗಳಲ್ಲೇ ಮಾಹಿತಿ ದೊರೆಯುವಂತೆ ಮಾಡಲು ಸಾಧ್ಯವೇ? ನಗರದಲ್ಲಿ ಕ್ಷಣ ಕ್ಷಣದ ಮಳೆ ಮಾಹಿತಿಯೇ ಸಿಗುತ್ತದೆ. ಗಂಭೀರ ಸಮಸ್ಯೆಯಾದ ಆಸ್ಪತ್ರೆಗಳ ವಿವರ ನೀಡಲು ಆಗುವುದಿಲ್ಲವೆಂದರೆ ಹೇಗೆ?’ ಎಂದು ತಜ್ಞರು ಪ್ರಶ್ನಿಸುತ್ತಾರೆ.
* ಜಯಪ್ರಕಾಶ್ ಬಿರಾದಾರ್