Advertisement

ಕುರುಪ್…35 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿರುವ ನಿಗೂಢ ವ್ಯಕ್ತಿಯ ಕಥೆ

03:11 PM Nov 16, 2021 | Team Udayavani |
ಸ್ಥಳಕ್ಕೆ ಬಂದ ಡಿಎಸ್ ಪಿ ಹರಿದಾಸ್ ಕೆಲವು ವಿಚಾರಗಳನ್ನು ಗಮನಿಸಿದ್ದರು. ಶವದ ಕೈಯಲ್ಲಿ ರಿಂಗ್ ಆಗಲಿ, ಕಾಲಿನಲ್ಲಿ ಕನಿಷ್ಠ ಸ್ಲಿಪ್ಪರ್ ಕೂಡಾ ಇರಲಿಲ್ಲ, ಒಬ್ಬ ಎನ್ ಆರ್ ಐ ಗೆ ಸ್ಲಿಪ್ಪರ್ ಹಾಕುವಷ್ಟೂ ಗತಿ ಇರ್ಲಿಲ್ವ.. ಹಾಗಾದರೆ ಅಲ್ಲಿ ಸತ್ತು ಹೋಗಿದ್ದು ಸುಕುಮಾರ್ ಕುರುಪ್ ಅಲ್ವಾ? ಅವನಲ್ಲದಿದ್ದರೆ ಮತ್ಯಾರು? ಇದು ಆಕಸ್ಮಿಕ ಘಟನೆಯೋ ಕೊಲೆಯೋ? ಪೊಲೀಸರಿಗೆ ಸುಳಿವು ನೀಡಿದ ಚಿಕನ್ ಸಾಂಬಾರ್ ನ ಕಥೆಯೇನು?
Now pay only for what you want!
This is Premium Content
Click to unlock
Pay with

ಕುರುಪ್.. ಗೋಪಾಲಕೃಷ್ಣ ಕುರುಪ್ ಉರುಫ್ ಸುಕುಮಾರ ಕುರುಪ್. ಕೆಲ ದಿನಗಳ ಹಿಂದೆ ತೆರೆ ಕಂಡ ದುಲ್ಕರ್ ಸಲ್ಮಾನ್ ಅಭಿನಯದ ಕುರುಪ್ ಚಿತ್ರವನ್ನು ನೋಡಿದವರಿಗೆ ಈ ಮೋಸ್ಟ್ ವಾಂಟೆಡ್ ಕ್ರಿಮಿನಲ್ ನ ಬಗ್ಗೆ ಗೊತ್ತಿರಬಹುದು. ಸುಮಾರು 35 ವರ್ಷಗಳಿಂದ ಒಮ್ಮೆಯೂ ಪೊಲೀಸರ ಕೈಗೆ ಸಿಗದ, ಈಗಲೂ ನಿಗೂಢವಾಗಿರುವ ಕುರುಪ್ ನ ಅಸಲಿ ಕಥೆಯನ್ನು ನಾವು ಹೇಳುತ್ತೇವೆ.

Advertisement

ಅಂದು 1984 ಜನವರಿ 22. ಮುಂಜಾನೆ ಸುಮಾರು 4 ಗಂಟೆ ಸಮಯ. ಜಗತ್ತು ಇನ್ನೂ ನಿದ್ದೆ ಕಣ್ಣಲ್ಲೇ ಇತ್ತು. ಆಗಲೇ ನಮ್ಮ ಪಕ್ಕದ ರಾಜ್ಯ ಕೇರಳದ ಮಾವಿಲಿಕರ ಪೊಲೀಸ್ ಠಾಣೆಯಲ್ಲಿ ಫೋನ್ ರಿಂಗಾಗಿತ್ತು. ನಿದ್ದೆ ಕಣ್ಣಲ್ಲೇ ಫೋನ್ ಎತ್ತಿಕೆೊಂಡ ಕಾನ್ಸಟೇಬಲ್ ಗೆ ಆ ಕಡೆಯ ಧ್ವನಿ ನಿದ್ದೆಯನ್ನೇ ಓಡಿಸಿತ್ತು, “ಸಾರ್. ಇಲ್ಲೊಂದು ಕಾರ್ ಹೊತ್ತಿ ಉರಿಯುತ್ತಿದೆ”ಎಂಬ ಧ್ವನಿಯದು… ಹೌದು, ಕುನ್ನಮ್ ನ ಕೊಲ್ಲಕಡವು ಸೇತುವೆಯ ಪಕ್ಕದ ಗದ್ದೆಯಲ್ಲಿ ಕೆಎಲ್ ಕ್ಯೂ 7831 ಸಂಖ್ಯೆಯ ಅಂಬಾಸಡರ್ ಕಾರೊಂದು ಹೊತ್ತಿ ಉರಿಯುತ್ತಿತ್ತು, ಅದರೊಳಗಿದ್ದ ವ್ಯಕ್ತಿಯೂ ಸತ್ತು ಹೋಗಿದ್ದ. ಆತನ ಮುಖ ಗುರುತು ಸಿಗದಂತೆ ಸುಟ್ಟು ಹೋಗಿತ್ತು. ಸ್ಥಳದಲ್ಲಾಗಲೇ ಜನ ಸೇರಿದ್ದರು.

ಕಾರನ್ನು ಪರಿಶೀಲಿಸಿದ ಪೊಲೀಸರು ಕಾರಿನ ಮಾಲಿಕನೇ ಸತ್ತು ಹೋಗಿದ್ದಾನೆ ಎಂದುಕೊಳ್ಳುತ್ತಾರೆ, ಹಾಗೆ ಎಫ್ ಐಆರ್ ಹಾಕಿ ಪ್ರೊಸೀಜರ್ ಮುಗಿಸಿ ಶವವನ್ನೂ ಆತನ ಕುಟುಂಬಿಕರಿಗೆ ಕೊಡುತ್ತಾರೆ. ಅಂದ ಹಾಗೆ ಅಂದು ಪೊಲೀಸ್ ಫೈಲ್ ನಲ್ಲಿ ಸತ್ತು ಹೋದವನೇ ಕುರುಪ್… ಸುಕುಮಾರ್ ಕುರುಪ್.

ಹಾಗಾದರೆ ಯಾರು ಈ ಕುರುಪ್. ಏನಿದು ಸತ್ತು ಬದುಕಿದವನ ಕಥೆ?

Advertisement

ಸುಕುಮಾರ್ ಕುರುಪ್ ಒಬ್ಬ ಫಾರಿನ್ ರಿಟನ್ಡ್ ಎನ್ ಆರ್ ಐ. ಅಬುಧಾಬಿಯಲ್ಲಿ ಮರೈನ್ ಆಪರೇಟಿಂಗ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಕುಮಾರ್ ತುಂಬಾನೇ ಐಷಾರಾಮಿ ಜೀವನ ನಡೆಸುತ್ತಿದ್ದ. ಊರಿಗೆ ಬಂದಾಗೆಲ್ಲಾ ಸ್ನೇಹಿತರು, ಕುಟುಂಬಿಕರಿಗೆ ಸಾಕಷ್ಟು ಖರ್ಚು ಮಾಡುತ್ತಿದ್ದ. ಹಣವನ್ನು ನೀರಿನಂತೆ ಪೋಲು ಮಾಡುತ್ತಿದ್ದ. ಈ ಕಾಲಕ್ಕೂ ಐಷಾರಾಮಿ ಎನ್ನಬಹುದಾದ ಮನೆಯನ್ನು ಆ ಕಾಲದಲ್ಲೇ ಕಟ್ಟಲು ಹೊರಟಿದ್ದ ಸುಕುಮಾರ್.

ಸುಕುಮಾರ್ ಬಹಳ ಧೈರ್ಯವಂತ, ಅದಕ್ಕೊಂದು ಉದಾಹರಣೆ ಆತನ ಮದುವೆ. ಕುರುಪ್ ನದ್ದು ಲವ್ ಮ್ಯಾರೇಜ್. ಆಕೆಯ ಹೆಸರು ಸರಸಮ್ಮ. ಕುರುಪ್ ನ ಚೆರಿಯನಾಡ್ ನ ಮನೆಗೆಲಸದ ಮಹಿಳೆಯ ಮಗಳಾಕೆ. ಮುಂಬೈನಲ್ಲಿ ನರ್ಸಿಂಗ್ ಕಲಿಯುತ್ತಿದ್ದಳು. ಅಲ್ಲೊಮ್ಮೆ ಆಕೆಯನ್ನು ನೋಡಿದ್ದ ಸುಕುಮಾರ್ ಪ್ರೀತಿಯ ಬಲೆಗೆ ಬಿದ್ದಿದ್ದ. ಆದರೆ ಇವರ ಪ್ರೀತಿಯ ಬಗ್ಗೆ ಕುರುಪ್ ಮನೆಯವರಿಗೆ ಹೇಗೋ ತಿಳಿದಿತ್ತು. ಕೂಡಲೇ ತಮ್ಮ ಮಗನಿಂದ ದೂರ ಇರುವಂತೆ ಅವರು ಸರಸಮ್ಮಗೆ ಪತ್ರ ಬರೆದಿದ್ದರು. ಇದರಿಂದ ಕೆರಳಿದ ಕುರುಪ್ ಅದನ್ನು ಧಿಕ್ಕರಿಸಿ ಮನೆಯವರಿಗೆ ತಿಳಿಯದಂತೆ ಮಾಟುಂಗದ ದೇವಸ್ಥಾವವೊಂದರಲ್ಲಿ ಗುಟ್ಟಾಗಿ ವಿವಾಹವಾಗಿದ್ದ!

ಓದುಗರೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೆಂದರೆ ಈ ಕುರುಪ್ ನ ಅಸಲಿ ಹೆಸರು ಸುಕಮಾರ್ ಅಲ್ಲವೇ ಅಲ್ಲ, ಈ ನಿಗೂಢ ವ್ಯಕ್ತಿಯ ನಿಜವಾದ ಹೆಸರು ಗೋಪಾಲಕೃಷ್ಣ ಕುರುಪ್. ಕೇರಳದ ಚೆರಿಯನಾಡ್ ನ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಹುಟ್ಟಿದ್ದ ಕುರುಪ್ ಗೆ ಆರಂಭದಿಂದಲೂ ಭಂಡ ಧೈರ್ಯ. ಮುಂಬೈನಲ್ಲಿ ಭಾರತೀಯ ವಾಯು ಸೇನೆಯಲ್ಲಿ ಏರ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ.

ಒಮ್ಮೆ ರಜೆಯಲ್ಲಿ ಊರಿಗೆ ಬಂದ ಗೋಪಾಲಕೃಷ್ಣ ಮತ್ತೆ ಹೋಗಲೇ ಇಲ್ಲ. ಅಶಿಸ್ತಿನ ವರ್ತನೆಗಾಗಿ ಕುರುಪ್ ಹೆಸರನ್ನು ಸೇನೆ ಬ್ಲಾಕ್ ಲಿಸ್ಟ್ ಗೆ ಸೇರಿಸಿತ್ತು. ಇದರಿಂದ ಕುರುಪ್ ಗೆ ಸರ್ಕಾರಿ ಉದ್ಯೋಗವಾಗಲಿ, ವಿದೇಶ ಪ್ರಯಾಣವಾಗಲಿ ಅಸಾಧ್ಯವಾಗಿತ್ತು. ಆಗಲೇ ನೋಡಿ ಕುರುಪ್ ನ ಬುದ್ದಿ ಮೊದಲ ಬಾರಿ ವಕ್ರ ದಾರಿಯಲ್ಲಿ ಸಾಗಿದ್ದು. ಪೊಲೀಸೊಬ್ಬನಿಗೆ ಲಂಚ ನೀಡಿ ‘ಗೋಪಾಲಕೃಷ್ಣ ಕುರುಪ್’ಸತ್ತು ಹೋದ ಎಂಬ ಡೆತ್ ಸರ್ಟಿಫಿಕೇಟ್ ತಯಾರಿಸಿ ತಾನೇ ಸೇನೆಗೆ ಕಳುಹಿಸಿದ್ದ. ಹೀಗಾಗಿ ಆತನ ಹೆಸರು ಬ್ಲಾಕ್ ಲಿಸ್ಟ್ ನಿಂದ ತೆಗೆಯಲಾಗಿತ್ತು. ಇದೇ ಕಾರಣಕ್ಕೆ ಗೋಪಾಲಕೃಷ್ಣ ಕುರುಪ್, ಸುಕುಮಾರ್ ಕುರುಪ್ ಆಗಿ ಬದಲಾಗಿದ್ದ. ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಅಬುಧಾಬಿಗೆ ಹೋಗಿದ್ದ.

ಮತ್ತೆ ಆ ಸುಟ್ಟ ಕಾರಿನ ಕಥೆಗೆ ಬರೋಣ. ಅಂದು ಸ್ಥಳಕ್ಕೆ ಬಂದ ಡಿಎಸ್ ಪಿ ಹರಿದಾಸ್ ಕೆಲವು ವಿಚಾರಗಳನ್ನು ಗಮನಿಸಿದ್ದರು. ಒಂದು ಜೊತೆ ಗ್ಲೌಸ್, ಮತ್ತು ಖಾಲಿ ಪೆಟ್ರೋಲ್ ಕ್ಯಾನ್ ಅಲ್ಲಿ ಬಿದ್ದಿತ್ತು. ಅಷ್ಟೇ ಅಲ್ಲದೆ ಶವದ ಕೈಯಲ್ಲಿ ರಿಂಗ್ ಆಗಲಿ, ಕಾಲಿನಲ್ಲಿ ಕನಿಷ್ಠ ಸ್ಲಿಪ್ಪರ್ ಕೂಡಾ ಇರಲಿಲ್ಲ, ಒಬ್ಬ ಎನ್ ಆರ್ ಐ ಗೆ ಸ್ಲಿಪ್ಪರ್ ಹಾಕುವಷ್ಟೂ ಗತಿ ಇರ್ಲಿಲ್ವ. ಹಾಗಾದರೆ ಅಲ್ಲಿ ಸತ್ತು ಹೋಗಿದ್ದು ಸುಕುಮಾರ್ ಕುರುಪ್ ಅಲ್ವಾ? ಅವನಲ್ಲದಿದ್ದರೆ ಮತ್ಯಾರು?

ತನಿಖೆಗೆ ಬಂದ ಡಿಸಿಪಿ ಹರಿದಾಸ್ ಗೆ ಅಲ್ಲಿ ಸುಟ್ಟು ಹೋಗಿರುವುದು ಕುರುಪ್ ಎನ್ನುವ ಬಗ್ಗೆಯೇ ಅನುಮಾನವಿತ್ತು. ಅದಕ್ಕೆ ಕಾರಣ ಅಂಬಾಸಡರ್ ಕಾರು ಹೊಂದಿದ್ದ ಎನ್ಆರ್ ಐ ಕಾಲಿನಲ್ಲಿ ಕನಿಷ್ಟ ಚಪ್ಪಲಿಯೂ ಇಲ್ಲದಿರುವುದು. ಗದ್ದೆಯಲ್ಲೂ ಓಡಿಹೋದ ಕೆಲವು ಹೆಜ್ಜೆ ಗುರುತುಗಳು ಪತ್ತೆಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಪೋಸ್ಟ್ ಮಾರ್ಟಮ್ ಮಾಡಿದ್ದ ವೈದ್ಯರೂ ಕೆಲವು ವಿಚಾರಗಳನ್ನು ಹೇಳಿದ್ದರು. ವ್ಯಕ್ತಿ ಹೊಗೆ ಕುಡಿದು ಸತ್ತಿಲ್ಲ, ಆತನನ್ನು ಮೊದಲೇ ಕೊಂದು ನಂತರ ಸುಡಲಾಗಿದೆ, ಸಾವಿಗೂ ಮೊದಲು ಆತ ಮದ್ಯ ಸೇವಿಸಿದ್ದ ಎಂದು ವೈದ್ಯ ಉಮಾದತ್ತನ್ ಮಾಹಿತಿ ನೀಡಿದ್ದರು. ಇದರ ನಡುವೆ ಕುರುಪ್ ನ ಸೋದರ ಮಾವ ಭಾಸ್ಕರ ಪಿಳ್ಳೈ ಪೊಲೀಸ್ ಠಾಣೆಗೆ ಬಂದು ಕುರುಪ್ ನ ಅಬುಧಾಬಿಯ ಶತ್ರುಗಳ್ಯಾರೋ ಈ ಕೊಲೆ ಮಾಡಿದ್ದಾರೆ ಎಂದು ತನ್ನದೊಂದು ವಿವರ ನೀಡಿದ್ದ. ಆದರೆ ಪೊಲೀಸರಿಗೆ ಮಾತ್ರ ಈತ ತನ್ನ ಕೈಯಲ್ಲಿ ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಅನುಮಾನ ಬಂದಿತ್ತು. ಪಿಳ್ಳೈ ಶರ್ಟಿನ ತೋಳನ್ನು ಮಡಚಿದಾಗ ಆತನ ಕೈಯಲ್ಲಿ ಸುಟ್ಟ ಗಾಯಗಳಾಗಿತ್ತು. ಪೊಲೀಸರ ಲಾಠಿ ಪಿಳ್ಳೈನ ಬೆನ್ನ ಮೇಲೆ ಸ್ವಲ್ಪ ಕೆಲಸ ಮಾಡುತ್ತಿದ್ದಂತೆ ತಾನೇ ಕುರುಪ್ ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ ಪಿಳ್ಳೈ!  “ಕುರುಪ್ ನನಗೆ ಹಣ ಕೊಡಬೇಕಿತ್ತು, ಆದರೆ ಕೊಡದೆ ಮೋಸ ಮಾಡಿದ್ದ. ಅದಕ್ಕೆ ಕೊಂದು ಸುಟ್ಟು ಬಿಟ್ಟೆ” ಎಂದು ವಿವರ ನೀಡಿದ್ದ ಭಾಸ್ಕರ ಪಿಳ್ಳೈ.

ಆದರೆ ಡಿಸಿಪಿ ಹರಿದಾಸ್ ಇದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ, ಯಾಕಂದರೆ ಅವರಿಗೆ ಕೊಲೆಯಾಗಿರುವುದು ಕುರುಪ್ ಅಲ್ಲವೇ ಅಲ್ಲ ಎಂಬ ನಂಬಿಕೆ. ಘಟನೆ ನಡೆದು ಒಂದೆರಡು ದಿನ ಆಗಿರಬಹುದು, ಪೊಲೀಸರು ಮಫ್ತಿಯಲ್ಲಿ ಕುರುಪ್ ಮನೆಗೆ ಹೋಗಿದ್ದರು, ಆದರೆ ಅಲ್ಲಿ ಕಂಡ ದೃಶ್ಯ ಮಾತ್ರ ಪೊಲೀಸರನ್ನೇ ದಂಗು ಬಡಿಸಿತ್ತು. ಸೂತಕದ ಮನೆಯಲ್ಲಿ ಚಿಕನ್ ಸಾಂಬಾರ್ ಊಟ ನಡೆಯುತ್ತಿತ್ತು! ಪೊಲೀಸರ ಅನುಮಾನ ಈಗ ದಟ್ಟವಾಗಿತ್ತು.

ಕುರುಪ್ ಸ್ನೇಹಿತನೊಬ್ಬ ಕಾರ್ ಡ್ರೈವರ್ ಆಗಿದ್ದ, ಆತನೇ ಪೊನ್ನಪ್ಪನ್ ಪೊಲೀಸರು ವಿಚಾರಿಸಿದಾಗ ಆತ ಬೇರೆಯದೇ ಕಥೆ ಹೇಳಿದ್ದ. ನಾನು -ಕುರುಪ್ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬ ಕಾರಿಗೆ ಢಿಕ್ಕಿಯಾಗಿ ಸತ್ತ, ನಾವು ಭಯದಿಂದ ಆತನನ್ನು ಕಾರಿನಲ್ಲಿಟ್ಟು ಸುಟ್ಟೆವು ಎಂದು ಕಥೆ ಕಟ್ಟಿದ್ದ. ಆದರೆ ಪೊಲೀಸರು ಈ ಕಾಗಕ್ಕ ಗುಬ್ಬಕ್ಕನ ಕತೆಯನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಆಗಲೇ ಕುರುಪ್ ಗೆ ಹೋಲುವ ವ್ಯಕ್ತಿಯೊಬ್ಬ ಆಲುವದ ಲಾಡ್ಜ್ ನಲ್ಲಿದ್ದಾನೆ ಎಂಬ ಸುದ್ದಿ ಪೊಲೀಸರಿಗೆ ಬಂದಿತ್ತು, ಆದರೆ ಪೊಲೀಸರು ಅಲ್ಲಿ ಹೋಗುವಷ್ಟರಲ್ಲಿ ಆತ ತಪ್ಪಿಸಿಕೊಂಡಿದ್ದ, ಆ ಲಾಡ್ಜ್ ನ ಕೆಲಸಗಾರರು ಕುರುಪ್ ನ ಫೋಟೊ ನೋಡಿ ಕೆಲ ಹೊತ್ತಿನ ಹಿಂದೆ ಈತ ಇಲ್ಲಿ ಬಂದಿದ್ದ ಎಂದು ಹೇಳಿದ್ದರು. ಅಲ್ಲಿಗೆ ಕುರುಪ್ ಬದುಕಿದ್ದಾನೆ ಎನ್ನುವುದು ಪೊಲೀಸರಿಗೆ ಮನದಟ್ಟಾಗಿತ್ತು.

ಮತ್ತೆ ಸ್ಟೇಷನ್ ಗೆ ಬಂದ ಪೊಲೀಸರು ಭಾಸ್ಕರ್ ಪಿಳ್ಳೈಗೆ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದರು.  ಆಗ ಹೊರಬಂತು ನೋಡಿ ಸ್ಪೋಟಕ ಸತ್ಯ.

ಅಬುಧಾಬಿಯಿಂದ ರಜೆಗೆಂದು ಬಂದಿದ್ದ ಕುರುಪ್ ಊರಲ್ಲಿ ಸಾಕಷ್ಟು ಖರ್ಚು ಮಾಡಿದ್ದ, ಮನೆ ಕಟ್ಟಿಸಲೂ ಆರಂಭಿಸಿದ್ದ. ದುಂದು ವೆಚ್ಚದ ಕುರುಪ್ ನ ಕಿಸೆ ದಿನದಿಂದ ದಿನಕ್ಕೆ ಖಾಲಿಯಾಗುತ್ತಿತ್ತು. ಅದೇ ಸಮಯದಲ್ಲಿ ಗಲ್ಫ್ ನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚುವ ವಾರ್ತೆಯೂ ಕುರುಪ್ ಕಿವಿಗೆ ಬಿದ್ದಿತ್ತು. ಇತ್ತ ಹಣವೂ ಇಲ್ಲ ಕೆಲಸವೂ ಇಲ್ಲ, ಖರ್ಚು ಮಾತ್ರ ದಿನದಿಂದ ದಿನಕ್ಕೆ ಏರುತ್ತಿತ್ತು. ಅಂದಹಾಗೆ ಸುಕುಮಾರ್ ಕುರುಪ್ ಗೆ ಮ್ಯಾಗಜಿನ್ ಓದುವ ಅಭ್ಯಾಸವಿತ್ತು. ಒಂದು ದಿನ ಜರ್ಮನಿಯಲ್ಲಿ ನಡೆದ ಇನ್ಶುರೆನ್ಸ್ ವಂಚನೆ ಬಗ್ಗೆ ಕುರುಪ್ ಓದಿದ್ದ. ವ್ಯಕ್ತಿಯೊಬ್ಬ ತಾನು ಸತ್ತಿದ್ದೇನೆಂದು ನಕಲಿ ದಾಖಲೆಗಳನ್ನು ಇನ್ಶುರೆನ್ಸ್ ಕಂಪನಿಗೆ ನೀಡಿ ಮೋಸದಿಂದ ಲಕ್ಷಾಂತರ ರೂ ಪಡೆದಿದ್ದ ಘಟನೆಯದು. ಇದನ್ನು ಓದಿದ ಕುರುಪ್ ಗೆ ತನ್ನ ಅಬುಧಾಬಿ ಕಂಪನಿಯ ಇನ್ಶುರೆನ್ಸ್ ಪಾಲಿಸಿ ನೆನಪಾಗಿತ್ತು.

ಹೌದು, ಕುರುಪ್ ಕೆಲಸ ಮಾಡುತ್ತಿದ್ದ ಕಂಪನಿ ಕಡೆಯಿಂದ ವಿಮೆ ಮಾಡಿಸಲಾಗಿತ್ತು. ಬರೋಬ್ಬರಿ 8 ಲಕ್ಷ ರೂಪಾಯಿಗಳ ಇನ್ಶುರೆನ್ಸ್ ಅದು. ಆ ಕಾಲಕ್ಕೆ ಎಂಟು ಲಕ್ಷ ರೂಪಾಯಿ ಎಷ್ಟು ದೊಡ್ಡ ಮೊತ್ತ ನೀವೇ ಲೆಕ್ಕ ಹಾಕಿ. ಹಿಂದೊಮ್ಮೆ ನಕಲಿ ಡೆತ್ ಸರ್ಟಿಫಿಕೇಟ್ ಮಾಡಿ ಅಭ್ಯಾಸವಾಗಿದ್ದ ಕುರುಪ್ ಈ ಬಾರಿ ದೊಡ್ಡದೊಂದು ಪ್ಲಾನ್ ಮಾಡಿದ್ದ. ಯಾವುದೋ ಶವವನ್ನು ತೋರಿಸುದು, ಮತ್ತೆ ನಕಲಿ ಡೆತ್ ಸರ್ಟಿಫಿಕೇಟ್ ಮಾಡಿಸಿ ಇನ್ಶುರೆನ್ಸ್ ಹಣ ಪಡೆಯುವ ಪ್ಲಾನ್ ಕುರುಪ್ ನದ್ದು. ಇದಕ್ಕೆ ತನ್ನ ಮಾವ ಭಾಸ್ಕರ್ ಪಿಳ್ಳೈ, ಪೊನ್ನಪ್ಪನ್, ಸಾಹು ಎಂಬವರ ಜತೆ ಸೇರಿ ಕೆಲಸ ಆರಂಭಿಸಿದ್ದ. ಸ್ಥಳೀಯ ಶವಾಗಾರದಿಂದ ಹೆಣವನ್ನು ಕದಿಯುವ ಪ್ರಯತ್ನವನ್ನೂ ಮಾಡಿದ್ದರು ಈ ಕಿರಾತಕರು. ಆದರೆ ಆ ಪ್ಲ್ಯಾನ್ ಯಶಸ್ವಿಯಾಗಲಿಲ್ಲ. ಹೀಗಾಗಿ ತನ್ನ ಚಹರೆಯನ್ನು ಹೋಲುವ ವ್ಯಕ್ತಿಯನ್ನು ಕೊಲ್ಲಲು ಕುರುಪ್ ಪ್ಲ್ಯಾನ್ ಮಾಡಿದ್ದ!

ತನ್ನಷ್ಟೇ ಎತ್ತರದ ಗಾತ್ರದ ವ್ಯಕ್ತಿಯನ್ನು ಈ ನಾಲ್ವರು ಕೆಲವು ದಿನ ಹುಡುಕಾಡಿದ್ದರು. ಆದ್ರೆ ಸಿಕ್ಕಿರಲಿಲ್ಲ, ಅಂದು 1984ರ ಜನವರಿ 21. ರಾತ್ರಿ ಈ ನಾಲ್ವರು ಕಾರಿನಲ್ಲಿ ಬರುತ್ತಿದ್ದಾಗ ಕರುವಟ್ಟದ ಹರಿ ಥಿಯೇಟರ್ ಬಳಿ ಒಬ್ಬ ಡ್ರಾಪ್ ಕೇಳಿದ್ದ.  ಆತನ ವಿಧಿ.. ಪಾಪ! ಆತನ ಕುರುಪ್ ನನ್ನೇ ಹೋಲುತ್ತಿದ್ದ.  ಮಿಕ ಬಂದು ಹುಲಿಯ ಗುಹೆ ಹೊಕ್ಕಿದಂತಾಗಿತ್ತು. ಈ ಕಿರಾತಕರಿಗೋ ಗೆಲುವಿನ ಆನಂದ. ಬಂದು ಕುಳಿತ ವ್ಯಕ್ತಿಗೆ ಕುಡಿಯಲು ಮದ್ಯ ನೀಡಿದ್ದರು. ನಂತರ ಆತನನ್ನು ಬಟ್ಟೆಯಿಂದ ಬಿಗಿದು ಕೊಂದು ಹಾಕಿದ್ದರು. ನಂತರ ಕುರುಪ್ ಮನೆಗೆ ಹೋಗುವ ರಸ್ತೆಯಲ್ಲಿ ಕಾರು ಚಲಾಯಿಸಿ ಆತನ ಬಟ್ಟೆಯನ್ನು ಬದಲಾಯಿಸಿದ್ದರು. ಕುರುಪ್ ಉಟ್ಟಿದ್ದ ಬಟ್ಟೆಯನ್ನು ಆತನಿಗೆ ತೊಡಿಸಿ ಶವವನ್ನು ಡ್ರೈವರ್ ಸೀಟಿನಲ್ಲಿಟ್ಟು ಕಾರಿಗೆ ಬೆಂಕಿ ಹಚ್ಚಿದ್ದರು. ನಂತರ ಭಾಸ್ಕರ ಪಿಳ್ಳೈ ಸೇರಿ ಉಳಿದವರು ತಮ್ಮ ಮನೆಗೆ ಹೋದರೆ, ಕುರುಪ್ ಮಾತ್ರ ಪೊನ್ನಪ್ಪನ್ ಜೊತೆ ಅಲುವಗೆ ಹೋಗಿದ್ದ. ನಂತರ ಅಲ್ಲಿಂದ ತಪ್ಪಿಸಿಕೊಂಡಿದ್ದ.

ಪಿಳ್ಳೈ ಎಲ್ಲಾ ಸತ್ಯಾಂಶವನ್ನು ಪೊಲೀಸರ ಮುಂದೆ ಹೇಳಿದ್ದ. ಪೊನ್ನಪ್ಪನ್, ಸಾಹುನನ್ನು ಪೊಲೀಸರು ಹಿಡಿದಿದ್ದರು. ಆದರೆ ಸುಕುಮಾರ ಕುರುಪ್ ಮಾತ್ರ ಪತ್ತೆಯಾಗಿರಲಿಲ್ಲ.

ಕಾರಿನಲ್ಲಿ ಸುಟ್ಟು ಹೋದವ ಕುರುಪ್ ಅಲ್ಲ ಎಂಬ ಸತ್ಯ ಪೊಲೀಸರಿಗೆ ಗೊತ್ತಾಗಿತ್ತು. ಆದರೆ ಅಲ್ಲಿ ನಿಜವಾಗಿ ಸತ್ತವ ಯಾರು ಎಂಬ ಕೌತುಕ ಹಾಗೆ ಇತ್ತು. ಆತ ಯಾರು ಎಂದು ಪಿಳ್ಳೈಗೂ ಗೊತ್ತಿರ್ಲಿಲ್ಲ. ಇದೇ ವೇಳೆ ಹರಿಪಾದ್ ಪೊಲೀಸ್ ಠಾಣೆಯಲ್ಲಿ ಥೋಮಸ್ ಎಂಬಾತ ತನ್ನ ಸಹೋದರ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದ. ಕಾಣೆಯಾದಾತನ ಹೆಸರು ಚಾಕೋ. ಆತ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ. ಡಿಸಿಪಿ ಹರಿದಾಸ್ ಗೆ ಈ ಕಾರಿನಲ್ಲಿ ಸುಟ್ಟು ಹೋದಾತನ ಮೇಲೆ ಅನುಮಾನ ಬರುತ್ತೆ. ಆದರೆ ಶವದ ಮುಖ ಗುರುತಿಸಲೂ ಸಾಧ್ಯವಿರಲಿಲ್ಲ. ಅರೆ ಬರೆ ಸಿಕ್ಕ ಬಟ್ಟೆಯೂ ಬದಲಾಗಿತ್ತು. ಆದರೆ ಕುರುಪ್ ಮತ್ತು ಪಿಳ್ಳೈ ಬಟ್ಟೆ ಬದಲಾಯಿಸುವಾಗ ಪ್ಯಾಂಟ್ ಶರ್ಟ್ ಬದಲಾಯಿಸಿದ್ದರೆ ಹೊರತು, ಒಳ ಉಡುಪು ಬದಲಾಯಿಸರಲಿಲ್ಲ.  ಇದನ್ನು ಚಾಕೋ ಪತ್ನಿ ಗುರುತಿಸಿದ್ದಳು. ಅಲ್ಲಿಗೆ ಈ ಕೇಸು ಒಂದು ಹಂತದ ಅಂತ್ಯ ಕಂಡಿತ್ತು. ಆದರೆ ಪ್ರಮುಖ ಆರೋಪಿಯ ಪತ್ತೆ ಇರಲಿಲ್ಲ.

ಘಟನೆ ನಡೆದು ಇಷ್ಟು ವರ್ಷಗಳಾದರೂ ಇನ್ನೂ ಸುಕುಮಾರ್ ಕುರುಪ್ ಪತ್ತೆಯಾಗಿಲ್ಲ, ಅಲ್ಲಿದ್ದಾನೆ ಇಲ್ಲಿದ್ದಾನೆ ಎಂಬ ಸುಳಿವು ಸಿಕ್ಕರೂ ಪೊಲೀಸರ ಕೈಗೆ ಸಿಗಲೇ ಇಲ್ಲ ಈ ಕುರುಪ್. ಈ ನಿಗೂಢ ವ್ಯಕ್ತಿ ಬದುಕಿದ್ದಾನೋ ಇಲ್ಲವೋ ಎನ್ನುವುದೂ ಗೊತ್ತಿಲ್ಲ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.