ಹೀರೋ ಉಪೇಂದ್ರ ಎದುರಾಳಿ ವಿಲನ್‌ಗಳೊಂದಿಗೆ ಗುದ್ದಾಡಿ ರಹಸ್ಯ ದಾಖಲೆಗಳಿರುವಬ್ರೀಫ್ಕೇಸ್ ಒಂದನ್ನುಕೈಯಲ್ಲಿ ಹಿಡಿದುಕೊಂಡು ದೊಡ್ಡ ಬಂಗಲೆಯೊಂದರಿಂದ ಹೊರಬರುತ್ತಾರೆ. ಮತ್ತೂಂದೆಡೆ, ಹೀರೋ ಕೈಯಲ್ಲಿ ಒದೆ ತಿಂದ ವಿಲನ್ ಗಳು ಬಂಗಲೆ ಮುಂದೆ ಒದ್ದಾಡುತ್ತಿರುತ್ತಾರೆ. ವಿಲನ್‌ಗಳಿಗೆ ವಾರ್ನಿಂಗ್ ಕೊಟ್ಟು ಹೀರೋ ಉಪೇಂದ್ರ ಬಂಗಲೆಯ ಆವರಣದಿಂದ ಹೊರಡುತ್ತಾರೆ. ಇದು “ಲಗಾಮ್’ ಚಿತ್ರದಲ್ಲಿ ಬರುವ ಒಂದು ಸನ್ನಿವೇಶ.
ಬೆಂಗಳೂರಿನ ಹೆಬ್ಟಾಳದ ಸಮೀಪದಲ್ಲಿರುವ ಭವ್ಯ ಬಂಗಲೆಯೊಂದರಲ್ಲಿ ನಡೆಯುತ್ತಿದ್ದ “ಲಗಾಮ್’ ಚಿತ್ರದ ಈ ಸನ್ನಿವೇಶಗಳನ್ನು ಸಾಹಸ ನಿರ್ದೇಶಕ ರವಿವರ್ಮ ಅವರ ಸಾಹಸ ಸಂಯೋಜನೆಯಲ್ಲಿ, ನಿರ್ದೇಶಕ ಕೆ. ಮಾದೇಶ್ ಅವರ ನಿರ್ದೇಶನದಲ್ಲಿ ಛಾಯಾಗ್ರಹಕ ರಾಜೇಶ್ ಕಾಟಾ ತಮ್ಮಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದರು. ನಾಯಕ ನಟ ಉಪೇಂದ್ರ, ನಟಿ ಹರಿಪ್ರಿಯಾ ಮತ್ತು ಸಹ ಕಲಾವಿದರು ಈ ವೇಳೆ ಪಾಲ್ಗೊಂಡಿದ್ದರು.
ಹೌದು, ರಿಯಲ್‌ಸ್ಟಾರ್ ಉಪೇಂದ್ರ ಮತ್ತು ಹರಿಪ್ರಿಯಾ ಅಭಿನಯದ “ಲಗಾಮ್’ ಚಿತ್ರ ಸೆಟ್ಟೇರುತ್ತಿದ್ದಂತೆ, ಕೋವಿಡ್ ಎರಡನೇ ಹಂತದ ಲಾಕ್‌ಡೌನ್ ನಿಂದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವುದರಿಂದ, ಜುಲೈ ಎರಡನೇ ವಾರದಿಂದ “ಲಗಾಮ್’ ಚಿತ್ರೀಕರಣ ಶುರುವಾಗಿದೆ. ಈ ವೇಳೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮಾಧ್ಯಮಗಳನ್ನು ಆಹ್ವಾನಿಸಿದ್ದ “ಲಗಾಮ್’ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
ಇದನ್ನೂ ಓದಿ:ವರ್ಕ್ ಮೂಡ್‌ಗೆ ಸ್ಟಾರ್ಸ್.. ಶೂಟಿಂಗ್ ನಲ್ಲಿ ಬಿಝಿ
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕೆ. ಮಾದೇಶ್, “ಇದೊಂದು ಸೋಶಿಯಲ್ ಎಲಿಮೆಂಟ್ ಇಟ್ಟುಕೊಂಡು ಮಾಡುತ್ತಿರುವ ಸಿನಿಮಾ. ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಎಲ್ಲ ಎಂಟರ್‌ಟೈನ್ಮೆಂಟ್ ಅಂಶಗಳೂ ಇದರಲ್ಲಿದೆ. ಉಪೇಂದ್ರ, ಹರಿಪ್ರಿಯಾ ಇಬ್ಬರಿಗೂ ಇಲ್ಲೊಂದು ಹೊಸಥರದ ಪಾತ್ರವಿದೆ. ಲಾಕ್‌ಡೌನ್ ಟೈಮಲ್ಲಿ ಸಿನಿಮಾದ ಸ್ಕ್ರಿಪ್ಟ್ನ ಇನ್ನಷ್ಟು ಇಂಪ್ರೂವ್ ಮಾಡಿದ್ದೇವೆ. ಈಗಾಗಲೇ ಸುಮಾರು 10 ದಿನಗಳಕಾಲ ಶೂಟಿಂಗ್ ಮಾಡಲಾಗಿದ್ದು, ಇನ್ನೂ 60 ದಿನ ಶೂಟಿಂಗ್ ಮಾಡಲಿದ್ದೇವೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ ಉಳಿದ ಭಾಗದ ಶೂಟಿಂಗ್ ನಡೆಯಲಿದೆ. ಕೋವಿಡ್ ಆತಂಕ ಕಡಿಮೆಯಾದರೆ ಕೆಲವು ಭಾಗವನ್ನು ವಿದೇಶಗಳಲ್ಲೂ ಶೂಟಿಂಗ್ ಮಾಡುವ ಪ್ಲಾನ್ ಇದೆ’ ಎಂದರು.
ಇನ್ನು “ಲಗಾಮ್’ ಚಿತ್ರದಲ್ಲಿ ಹರಿಪ್ರಿಯಾ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಸುಮಾರು ಮೂರು ತಿಂಗಳ ನಂತರ ಶೂಟಿಂಗ್‌ನತ್ತ ಮುಖ ಮಾಡಿದ ಖುಷಿಯಲ್ಲಿ ನಟಿ ಹರಿಪ್ರಿಯಾ, “ಮತ್ತೆ ಶೂಟಿಂಗ್ ಶುರು ಮಾಡಿರುವುದಕ್ಕೆ ಖುಷಿಯಾಗ್ತಿದೆ. ಮೊದಲ ಬಾರಿಗೆ ಈ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದೇನೆ. ಇಂಥದ್ದೊಂದು ಪಾತ್ರ ಮಾಡುತ್ತಿರುವುದಕ್ಕೆ ಖುಷಿಯಾಗ್ತಿದೆ. ಹಲವು ವರ್ಷಗಳಿಂದ, ಅನೇಕ ಜರ್ನಲಿಸ್ಟ್‌ಗಳನ್ನು ಹತ್ತಿರದಿಂದ ನೋಡಿದ್ದೇನೆ. ಜರ್ನಲಿಸ್ಟ್‌ಗಳದ್ದು ಒಂಥರಾ ಥ್ರಿಲ್ಲಿಂಗ್ ಜಾಬ್. ಜರ್ನಲಿಸ್ಟ್‌ಗಳ ಹಾವಭಾವ ಎಲ್ಲವನ್ನು ಗಮನಿಸಿದ್ದೇನೆ. ಅದೆಲ್ಲವನ್ನೂ ಈ ಪಾತ್ರದಲ್ಲಿ ಅಳವಡಿಸಿಕೊಂಡಿದ್ದೇನೆ’ ಎಂದರು.
ಸಾಹಸ ನಿರ್ದೇಶಕ ರವಿವರ್ಮ, ಕಾರ್ಯಕಾರಿ ನಿರ್ಮಾಪಕಕೇಶವ್ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರೀಕರಣದ ಅನುಭವ, ಮುಂದಿನ ಯೋಜನೆಗಳ ಬಗ್ಗೆ ಒಂದಷ್ಟು ವಿವರಣೆ ನೀಡಿದರು.