ಮ್ಯಾಡ್ರಿಡ್: ಸರ್ಗಿಯೊ ರಮೋಸ್ ನಾಯಕತ್ವದ ರಿಯಲ್ ಮ್ಯಾಡ್ರಿಡ್ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ “ಲಾ ಲೀಗಾ’ ಫುಟ್‌ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗುರುವಾರ ರಾತ್ರಿಯ ತವರಿನ ಮುಖಾಮುಖಿಯಲ್ಲಿ ಅದು ವಿಲ್ಲಾರಿಯಲ್ ವಿರುದ್ಧ 2-1 ಗೋಲುಗಳಿಂದ ಗೆದ್ದು ಬಂದಿತು. ಇದರೊಂದಿಗೆ ರಿಯಲ್ ಮ್ಯಾಡ್ರಿಡ್ ತನ್ನ ಪ್ರಶಸ್ತಿ ದಾಖಲೆಯನ್ನು 34ಕ್ಕೆ ವಿಸ್ತರಿಸಿತು. ಕರೀಂ ಬೆಂಝೆಮ ಹೀರೋ ಫ್ರೆಂಚ್ ಫಾರ್ವರ್ಡ್ ಆಟಗಾರ ಕರೀಂ ಬೆಂಝೆಮ ಅವಳಿ ಗೋಲು ಸಿಡಿಸಿ ಮ್ಯಾಡ್ರಿಡ್ ತಂಡದ ಗೆಲುವಿನ ರೂವಾರಿ ಎನಿಸಿದರು. ಅವರು 29ನೇ ಹಾಗೂ 77ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಈ ಕೂಟದಲ್ಲಿ ಬೆಂಝೆಮ ಬಾರಿಸಿದ ಗೋಲುಗಳ ಸಂಖ್ಯೆ 21ಕ್ಕೆ ಏರಿತು.
ಈ ಜಯದೊಂದಿಗೆ ರಿಯಲ್ ಮ್ಯಾಡ್ರಿಡ್ 37 ಪಂದ್ಯಗಳಿಂದ 86 ಅಂಕ ಗಳಿಸಿತು. ಬಾರ್ಸಿಲೋನಾ ದ್ವಿತೀಯ (79), ಎಟಿಎಲ್ ಮ್ಯಾಡ್ರಿಡ್ ತೃತೀಯ (69) ಸ್ಥಾನದಲ್ಲಿವೆ. ಇನ್ನೊಂದು ಮುಖಾ ಮುಖೀಯಲ್ಲಿ ಬಾರ್ಸಿಲೋನಾ ತವರಿನಲ್ಲೇ ಒಸಾಸುನ ವಿರುದ್ಧ 1-2 ಗೋಲುಗಳಿಂದ ಶರಣಾಯಿತು.
ಇದು ಜಿನೆದಿನ್ ಜಿದಾನೆ ತರಬೇತಿ ಅವಧಿಯಲ್ಲಿ ರಿಯಲ್ ಮ್ಯಾಡ್ರಿಡ್‌ತಂಡಕ್ಕೆ ಒಲಿದ ಮೊದಲ ಕಿರೀಟ. ಕೊರೊನಾದಿಂದಾಗಿ ಈ ಕೂಟವನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್‌ನಲ್ಲಿ ಪುನರಾ ರಂಭವಾದ ಬಳಿಕ ಆಡಿದ ಎಲ್ಲ 10 ಪಂದ್ಯಗಳಲ್ಲಿ ರಿಯಲ್ ಮ್ಯಾಡ್ರಿಡ್ ಜಯ ಸಾಧಿಸಿ ಪಾರಮ್ಯ ಮೆರೆಯಿತು.
ರೋಹಿತ್ ಅಭಿನಂದನೆ
ರಿಯಲ್ ಮ್ಯಾಡ್ರಿಡ್‌ನ ಕಟ್ಟಾ ಅಭಿಮಾನಿಯಾಗಿರುವ ರೋಹಿತ್ ಶರ್ಮ, ತಂಡದ 34ನೇ ಲಾ ಲೀಗಾ ಪ್ರಶಸ್ತಿ ಗೆಲುವಿಗೆ ಅಭಿನಂದಿಸಿದ್ದಾರೆ. “ಅಭಿನಂದನೆಗಳು! ನಿಮ್ಮ ಚೀಲದಲ್ಲಿ ಮತ್ತೂಂದು ಪ್ರಶಸ್ತಿ ಸೇರಿಕೊಂಡಿದೆ. ಇಂಥ ಕಠಿನ ಸನ್ನಿವೇಶದಲ್ಲಿ ರಿಯಲ್ ಮ್ಯಾಡ್ರಿಡ್ ಒಂದು ತಂಡವಾಗಿ ಹೋರಾಟ ಸಂಘಟಿಸಿ ಚಾಂಪಿಯನ್ ಎನಿಸಿದೆ. ಕೊನೆಗೂ ಈ ವರ್ಷದ ಸಿಹಿ ಸುದ್ದಿಯೊಂದನ್ನು ಕೇಳುವಂತಾಯಿತು’ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ರೋಹಿತ್ ಶರ್ಮ ಮತ್ತು ಪತ್ನಿ ರಿಯಲ್ ಮ್ಯಾಡ್ರಿಡ್ ತವರು ಅಂಗಳಕ್ಕೆ ಭೇಟಿ ನೀಡಿದ್ದರು.