ಬೆಂಗಳೂರು: ಹಣಕಾಸಿನ ವಿಚಾರ ಹಾಗೂ ಹಳೇ ದ್ವೇಷಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣದಲ್ಲಿ ಬಾಣಸವಾಡಿ ಠಾಣೆ ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.
ಬಾಣಸವಾಡಿಯ ಧರ್ಮ, ಇಶಾಕ್, ಸುಲ್ತಾನ್, ಗೋಕುಲ್, ಬಸವರಾಜು, ಜಾನ್ ಡೇವಿಡ್, ಸೀನಾ, ಪವನ್ ಮತ್ತು ಅರಸು ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಮಂಜ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮೇ 7ರಂದು ಕಾರ್ತಿಕೇಯನ್ (40) ಎಂಬಾತನನ್ನು ಹತ್ಯೆಗೈದಿದ್ದರು.
ತಲೆಮರೆಸಿಕೊಂಡಿರುವ ಮಂಜುನಾಥ್ ಅಲಿಯಾಸ್ ಮಂಜು ಮತ್ತು ಇತರೆ ಬಂಧಿತ ಆರೋಪಿಗಳು ಹಾಗೂ ಕೊಲೆಯಾದ ಕಾರ್ತಿಕೇಯನ್ ನಡುವೆ ಹಣಕಾಸು ಹಾಗೂ ವೈಯಕ್ತಿಕ ವಿಚಾರಗಳಿಗೆ ಹಳೇ ದ್ವೇಷ ಇತ್ತು. ಹೀಗಾಗಿ ಕಾರ್ತಿಕೇಯನ್‌ನನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳ ಪೈಕಿ ಧರ್ಮ, ಜಾನ್ ಡೇವಿಡ್ ಮತ್ತು ಸೀನಾ ಬಾಣಸವಾಡಿ ಠಾಣೆಯ ರೌಡಿಶೀಟರ್ ಗಳಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಮೇ 7ರಂದು ರಾತ್ರಿ 7 ಗಂಟೆ ಸುಮಾರಿಗೆ ಕಾರ್ತಿಕೇಯನ್ ಮನೆ ಸಮೀಪದಲ್ಲಿ ವಾಯುವಿಹಾರ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ನಾಲ್ಕೈದು ಬೈಕ್‌ಗಳಲ್ಲಿ ಬಂದ ಹಂತಕರು ಕಾರ್ತಿಕೇಯನ್ ಮೇಲೆ ದಾಳಿ ನಡೆಸಿ, ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಕೊಲೆಯಾದ ಕಾರ್ತಿಕೇಯನ್ ವಿರುದ್ಧ ಈ ಹಿಂದೆ ಬಾಣಸವಾಡಿ ಮತ್ತು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ರೌಡಿಪಟ್ಟಿ ತೆರೆಯಲಾಗಿತ್ತು. 2 ವರ್ಷಗಳ ಹಿಂದೆ ಕೋರ್ಟ್ ಮೂಲಕ ಕಾರ್ತಿಕೇಯನ್ ಅದನ್ನು ರದ್ದು ಪಡಿಸಿಕೊಂಡಿದ್ದ. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಕೆಲ ವಿವಾದಿತ ಜಾಗಗಳಿಗೆ ಬೇಲಿ ಹಾಕಿಕೊಂಡಿದ್ದ ಕಾರ್ತಿಕೇಯನ್, ಆರೋಪಿ ಮಂಜು ಮತ್ತು ತಂಡದ ಜತೆ ಜಗಳ ಮಾಡಿ ಕೊಂಡಿದ್ದ. ಅಲ್ಲದೆ, ಗನ್ ತೋರಿಸಿ ಮಂಜುಗೆ ಬೆದರಿಕೆ ಹಾಕಿದ್ದ. ಹೀಗಾಗಿ ಕಾರ್ತಿಕೇಯನ್‌ನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಹೇಳಿದರು.