Advertisement

ರಿಯಲ್‌ ಎಸ್ಟೇಟ್‌ ಕಾಯ್ದೆ ಜಾರಿ: ಒತ್ತಡದಲ್ಲಿ ಸರಕಾರ

03:00 AM Jul 01, 2017 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ರೇರಾ)ಗೆ ನಿಯಮಾವಳಿ ರೂಪಿಸುವ ವಿಚಾರದಲ್ಲಿ ರಾಜ್ಯ ಸರಕಾರ ಒತ್ತಡದಲ್ಲಿ ಸಿಲುಕಿದೆ. ಒಂದೆಡೆ, ರಾಜ್ಯದಲ್ಲೂ ಆದಷ್ಟು ಬೇಗ ಕಾಯ್ದೆ ಜಾರಿಗೊಳಿಸಲು ನಿಯಮಾವಳಿ ರೂಪಿಸಿ ಎಂದು ಖರೀದಿದಾರರ ಒಕ್ಕೂಟ ಒತ್ತಡ ಹಾಕುತ್ತಿದ್ದರೆ ಮತ್ತೂಂದೆಡೆ ಚಾಲ್ತಿಯಲ್ಲಿರುವ ಯೋಜನೆ ಪೂರ್ಣಗೊಳಿಸಿ ಸ್ವಾಧೀನ ಪತ್ರ ಪಡೆಯುವವರೆಗೂ ಕಾಯ್ದೆ ಜಾರಿ ಬೇಡ ಅಥವಾ ಚಾಲ್ತಿಯಲ್ಲಿರುವ ಯೋಜನೆ ಕಾಯ್ದೆಯ ಹೊರಗಿಟ್ಟು ಹೊಸ ಯೋಜನೆಗಳಿಗೆ ಅನ್ವಯವಾಗುವಂತೆ ಮಾಡಿ ಎಂದು ರಿಯಲ್‌ ಎಸ್ಟೇಟ್‌ ಕಂಪೆನಿಗಳು ಲಾಬಿ ಮಾಡುತ್ತಿವೆ.

Advertisement

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಖಾಸಗಿ ವಸತಿ ಸಮುಚ್ಚಯ ಯೋಜನೆಗಳಲ್ಲಿ ಶೇ. 90ರಷ್ಟು ಶಾಸಕರು – ಸಚಿವರು ಹಾಗೂ ಪಾಲಿಕೆ ಸದಸ್ಯರು, ಅವರ ಕುಟುಂಬ ಸದಸ್ಯರು, ಬೆಂಬಲಿಗರು ಪರೋಕ್ಷ ಮಾಲಕತ್ವ ಹೊಂದಿದ್ದಾರೆ. ಇದು ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ, ಎಲ್ಲ ಪಕ್ಷದವರೂ  ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ರಾಜ್ಯ ಸರಕಾರ ಅಷ್ಟು ಸುಲಭಕ್ಕೆ ನಿಯಮಾವಳಿ ರೂಪಿಸಲು ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಹತ್ತು ಸಾವಿರಕ್ಕೂ ಹೆಚ್ಚು ಚಾಲ್ತಿಯಲ್ಲಿರುವ ಯೋಜನೆಗಳಿದ್ದು, ಕಾಲಮಿತಿಯಲ್ಲಿ ಪೂರ್ಣಗೊಂಡಿಲ್ಲ. ಈಗ ಕಾಯ್ದೆ ಜಾರಿಗೆ ಬಂದರೆ ರಿಯಲ್‌ ಎಸ್ಟೇಟ್‌ ಕಂಪೆನಿಗಳು ಹಾಗೂ ಬಿಲ್ಡರ್‌ ಸಂಸ್ಥೆಗಳು ಗ್ರಾಹಕರಿಗೆ ದಂಡ ಕೊಡಬೇಕಾಗುತ್ತದೆ. ಹೀಗಾಗಿ, ಚಾಲ್ತಿಯಲ್ಲಿರುವ ಯೋಜನೆಗಳಿಗೆ ಸ್ವಾಧೀನಪತ್ರ ಪಡೆದ ಅನಂತರ ಜಾರಿಗೆ ಬರಲಿ ಎಂಬುದು ಅವರ  ಆಗ್ರಹ ಎನ್ನಲಾಗಿದೆ.

ಇದರ ನಡುವೆ ಬಡಾವಣೆ ರಚನೆಗೆ ಅನುಮತಿ, ನಕ್ಷೆ ಮಂಜೂರಾತಿ, ಸ್ವಾಧೀನಪತ್ರ ನೀಡಿರುವ ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳನ್ನೂ ಕಾಯ್ದೆಯ ನಿಯಮಾವಳಿ ಒಳಗೆ ತರಬೇಕು. ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಗ್ರಾಹಕರಿಗೆ ನೀಡುವ ವಿಚಾರದಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಪ್ರಾಧಿಕಾರದ ಪಾತ್ರವೂ ಹೆಚ್ಚಿರುತ್ತದೆ ಎಂಬುದು ರಿಯಲ್‌ ಎಸ್ಟೇಟ್‌ ಕಂಪೆನಿಗಳ ವಾದ.

ಆದರೆ, ರಾಜ್ಯ ಸರಕಾರದ ಕರಡು ನಿಯಮಾವಳಿಯಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಪ್ರಾಧಿಕಾರಗಳನ್ನು ಸೇರಿಸಿಲ್ಲ ಎಂದು ಹೇಳಲಾಗಿದೆ. ಒಂದೊಮ್ಮೆ ರಾಜ್ಯ ಸರಕಾರ ನಿಯಮಾವಳಿ ರೂಪಿಸಿ ಅಧಿಸೂಚನೆ ಹೊರಡಿಸಿದರೂ ಸ್ಥಳೀಯ ಸಂಸ್ಥೆ ಹಾಗೂ ಪ್ರಾಧಿಕಾರಿಗಳನ್ನು ಒಳಪಡಿಸದಿದ್ದರೆ ನ್ಯಾಯಾಲಯ ಮೊರೆ ಹೋಗಲು ರಿಯಲ್‌ ಎಸ್ಟೇಟ್‌ ಕಂಪೆನಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.

Advertisement

ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯ ಪರಿಮಿತಿಯೊಳಗೆ ರಾಜ್ಯ ಸರಕಾರ ತನ್ನ ವ್ಯಾಪ್ತಿಯಲ್ಲಿ ನಿಯಮಾವಳಿ ರೂಪಿಸಬೇಕಿದೆ. ಮಹಾರಾಷ್ಟ್ರದಲ್ಲಿ  ಈಗಾಗಲೇ ಆ ರೀತಿ ಮಾಡಲಾಗಿದೆ. ಜತೆಗೆ ಕಾಲಮಿತಿಯಲ್ಲಿ ದಂಡದ ಪ್ರಮಾಣ ಕೇಂದ್ರ ಸರಕಾರ ನಿಗದಿಪಡಿಸಿದ್ದಕ್ಕಿಂತ ರಾಜ್ಯ ಸರಕಾರ ಹೆಚ್ಚಾಗಿ ದಂಡ ವಿಧಿಸಿ ಖರೀದಿದಾರರು ಅಥವಾ ಗ್ರಾಹಕರಿಗೆ ಹೆಚ್ಚಿನ ಬಲ ತುಂಬಿದೆ. ಆದರೆ, ಕರ್ನಾಟಕದಲ್ಲಿ ಆ ರೀತಿ ಬೇಡ ಎಂಬ ಒತ್ತಡವೂ ಇದೆ ಎಂದು ತಿಳಿದು ಬಂದಿದೆ.

ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ
ವಿಪಕ್ಷಗಳು ಹಾಗೂ ಖರೀದಿದಾರರ ಒಕ್ಕೂಟದ ಒತ್ತಡದ ಹಿನ್ನೆಲೆಯಲ್ಲಿ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಗೆ ನಿಯಮಾವಳಿ ರೂಪಿಸುವ ಸಂಬಂಧದ ವಿಷಯ ಮುಂದಿನ ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ. ಆದರೆ, ರಾಜ್ಯ ಸರಕಾರದ ಉದ್ದೇಶಿತ ನಿಯಮಾವಳಿಗೆ ರಿಯಲ್‌ ಎಸ್ಟೇಟ್‌ ಕಂಪೆನಿಗಳ  ಆಕ್ಷೇಪಣೆ ಇರುವುದರಿಂದ ತತ್‌ಕ್ಷಣಕ್ಕೆ ಅದು ಜಾರಿಯಾಗುವುದು ಅನುಮಾನ. ಮತ್ತಷ್ಟು ವಿಳಂಬವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next