ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಕ್ಕೆ ಶಾಪವಾಗಿ ಪರಿಣಮಿಸಿದ್ದ ಕೋವಿಡ್ ಸೋಂಕು ಹಾವಳಿಯೇ ಈಗ “ವರ’ವಾಗಿ ಪರಿಣಮಿಸುತ್ತಿದೆ! ಈ ಮೊದಲು ಕೇವಲ ಮೇಲ್ಮಧ್ಯಮ ವರ್ಗ ರಿಯಲ್ ಎಸ್ಟೇಟ್‌ನ ಪ್ರಮುಖ ಗ್ರಾಹಕರಾಗಿದ್ದರು. ಆ ಬೇಡಿಕೆಗೆ ಅನುಗುಣವಾಗಿ ಅಪಾರ್ಟ್‌ಮೆಂಟ್‌ಗಳು ತಲೆಯೆತ್ತುತ್ತಿದ್ದವು. ಆದರೆ, ಕೋವಿಡ್-19ರ ನಂತರ ಗ್ರಾಹಕ ವರ್ಗದಲ್ಲಿ ಪಲ್ಲಟ ಕಂಡುಬಂದಿದ್ದು, ಕೆಳ ಮಧ್ಯಮ ವರ್ಗ ಅಂದರೆ ಆಟೋ, ಟ್ಯಾಕ್ಸಿ ಚಾಲಕರು, ಪೆಟ್ಟಿ ಅಂಗಡಿ ವ್ಯಾಪಾರಿಗಳಂತಹ ಕಡಿಮೆ ಆದಾಯ ಹೊಂದಿರುವವರು ಕೈಗೆಟಕುವ ಮನೆಗಳತ್ತ ಮುಖಮಾಡುತ್ತಿರುವುದು ಕಂಡುಬರುತ್ತಿದೆ.
ಕ್ರೆಡಾಯ್ ಅಂಕಿ-ಅಂಶಗಳ ಪ್ರಕಾರ ಶೇ. 30-35ರಷ್ಟು ಕೈಗೆಟಕುವ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್ ಹಾವಳಿ ನಂತರ ಕೈಗೆಟಕುವ ಮನೆಗಳಿಗೆ ಬೇಡಿಕೆ ಕೇಳಿಬರುತ್ತಿದೆ. ಈ ವರ್ಗವನ್ನು ಸೆಳೆಯಲು ಬಿಲ್ಡರ್‌ಗಳು ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ಈಗಾಗಲೇ ಇರುವ ಕೈಗೆಟಕುವ ಮನೆಗಳ ಮರುವಿನ್ಯಾಸಕ್ಕೆ ಕೈಹಾಕಿದ್ದಾರೆ. ಇನ್ನು ಕೆಲವು ಈಗಾಗಲೇ ಪ್ರಗತಿಯಲ್ಲಿರುವ ಯೋಜನೆಗಳನ್ನು ಕೆಳ ಮಧ್ಯಮ ವರ್ಗದ ಪೂರಕವಾಗಿರುವಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ನೆಲಕಚ್ಚಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಚೇತರಿಕೆ ನೀಡಲಿದೆ ಎಂದು ಉದ್ಯಮಿಗಳು ವಿಶ್ಲೇಷಿಸುತ್ತಾರೆ.
ಕ್ರೆಡಾಯ್ ಸಮೀಕ್ಷೆಯಲ್ಲಿ ಬಹಿರಂಗ: “ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಘಗಳ ಒಕ್ಕೂಟ (ಕ್ರೆಡಾಯ್) ಈಚೆಗೆ ಸಮೀಕ್ಷೆಯೊಂದನ್ನು ನಡೆಸಿದೆ. ಅದರಂತೆ ಕೋವಿಡ್ ನಂತರ ಬಿಲ್ಡರ್‌ಗಳಲ್ಲಿ ಬರುವ ಗ್ರಾಹಕ ವರ್ಗದಲ್ಲಿ ಬದಲಾವಣೆ ಕಂಡುಬಂದಿದೆ. ಅದರಂತೆ ಈ ಹಿಂದೆ ಬರೀ ಮೇಲ್ಮಧ್ಯಮ ವರ್ಗ ಹೆಚ್ಚಾಗಿ ನಮ್ಮ ಬಳಿ ಬರುತ್ತಿತ್ತು. ಈಚೆಗೆ ಕೆಳ ಮಧ್ಯಮ ವರ್ಗವೂ ಕೈಗೆಟಕುವ ಫ್ಲ್ಯಾಟ್‌ಗಳನ್ನು ಕೇಳಿಕೊಂಡು ಬರುತ್ತಿದೆ. ಕೋವಿಡ್ ಹಾವಳಿ ಸಮಯದಲ್ಲಿ ಮನೆ ಮಾಲಿಕರಿಂದಾದ ಕಿರುಕುಳ, ಸೋಂಕು ಕಂಡುಬಂದಾಗ ಅನುಭವಿಸಿದ ಅಪಮಾನ, ಮನೆಗಳಿಗಾಗಿ ಅಲೆದಾಟ ಇದೆಲ್ಲವೂ ಅವರಲ್ಲಿ ಸ್ವಂತ ಮನೆ ಹೊಂದುವ ಆಸೆ ಇಮ್ಮಡಿಯಾಗುವಂತೆ ಮಾಡಿದೆ’ ಎಂದು ಕ್ರೆಡಾಯ್ ಕರ್ನಾಟಕ ಘಟಕದ ಉಪಾಧ್ಯಕ್ಷ ಪ್ರದೀಪ್ ರಾಯ್ಕರ್ ತಿಳಿಸಿದರು. “ಸಾಮಾನ್ಯವಾಗಿ 650 ಚದರಡಿಯಲ್ಲಿ ಕೈಗೆಟಕುವ ಮನೆಗಳನ್ನು ನಿರ್ಮಿಸಲಾಗುತ್ತದೆ. ಈಗ ಅದನ್ನು ಕೇವಲ 400-450 ಚದರಡಿ (ಮನೆ ಒಳಾಂಗಣ) ಯಲ್ಲಿ ವಿನ್ಯಾಸ ರೂಪಿಸಿ ನಿರ್ಮಿಸಲಾಗುತ್ತದೆ ಹಾಗಂತ, ಗುಣಮಟ್ಟದಲ್ಲಿ ಯಾವುದೇ ರಾಜೀ ಇರುವುದಿಲ್ಲ. ಅಷ್ಟೇ ಅಲ್ಲ, ಸೌಲಭ್ಯಗಳು, ಜಾಗದ ಲಭ್ಯತೆ ಎಲ್ಲವೂ ಉಳಿದ ಅಪಾರ್ಟ್‌ಮೆಂಟ್ ಗಳಂತೆಯೇ ಇರುತ್ತವೆ. ಈಗಾಗಲೇ ನಗರದ ಹೊಸೂರು, ಎಲೆಕ್ಟ್ರಾನಿಕ್ ಸಿಟಿ, ಉತ್ತರಹಳ್ಳಿ, ಯಲಹಂಕ ಮತ್ತಿತರ ಕಡೆ ಇವುಗಳನ್ನು ಕಾಣಬಹುದು. ಅಲ್ಲದೆ, ಬೆಳಗಾವಿ, ಹುಬ್ಬಳ್ಳಿಯಂತಹ ಎರಡನೇ ಹಂತದ ನಗರಗಳಲ್ಲೂ ಬೇಡಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಮನೆಗಳು ಕೇವಲ 20 ಲಕ್ಷ ರೂ. ಒಳಗೆ ಇವೆ. ಹಾಗಾಗಿ, ಹೆಚ್ಚು ಕಡಿಮೆ ತಿಂಗಳ ಬಾಡಿಗೆಯಷ್ಟೇ ಇಲ್ಲಿ ಕಂತುಗಳನ್ನು ಪಾವತಿಸಲು ಸಾಧ್ಯವಿದೆ’ ಎಂದೂ ಪ್ರದೀಪ್ ರಾಯ್ಕರ್ ಹೇಳಿದರು.
“ಹೊಸೂರು, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತಿತ್ತರ ಕಡೆಗಳಲ್ಲಿ ಈಗಾಗಲೇ ಇಂತಹ ಅಗ್ಗದ ದರದಲ್ಲಿ ಕೈಗೆಟಕುವ ಮನೆಗಳು ಹಸ್ತಾಂತರ ಆಗಿದೆ. ಬಾಡಿಗೆ ಪಾವತಿಸುವ ಹಣ ಇಲ್ಲಿ ಕಂತುಗಳ ರೂಪದಲ್ಲಿ ಪಾವತಿ ಆಗುತ್ತಿದೆ. ಹಬ್ಬದ ಸೀಜನ್ ಈಗ ಶುರುವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಕಂಡುಬರುವ ಸಾಧ್ಯತೆ ಇದೆ’ ಎಂದೂ ಪ್ರದೀಪ್ ರಾಯ್ಕರ್ ಮಾಹಿತಿ ನೀಡಿದರು.
ನೆರವಾದ ಕೇಂದ್ರದ ಯೋಜನೆ : ” ಕೋವಿಡ್ ದಿಂದ ವ್ಯಾಪಾರ ಇಲ್ಲದೆ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲೂ ಕೈಗೆಟಕುವ ಮನೆಗಳತ್ತ ಮುಖಮಾಡುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದೆ. ಕೆಳ ಮಧ್ಯಮ ವರ್ಗಕ್ಕೆ ಮನೆಗಳ ಅವಶ್ಯಕತೆ ಎಷ್ಟರಮಟ್ಟಿಗೆ ತುರ್ತು ಇದೆ ಎಂಬುದನ್ನು ತೋರಿಸುತ್ತದೆ. ಇದಕ್ಕೆ ಪೂರಕವಾಗಿ ಕೇಂದ್ರದ ಪ್ರಧಾನಮಂತ್ರಿ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿ ನೆರವು ಹಾಗೂ ಬ್ಯಾಂಕ್‌ಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಿರುವುದು. ಇದೆಲ್ಲವೂ ಈ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಆದರೆ, ಬೇಡಿಕೆಯಲ್ಲಿ ಎಷ್ಟು ಪ್ರಮಾಣ ಏರಿಕೆ ಕಂಡುಬಂದಿದೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ’ ಎಂದು ಕ್ರೆಡಾಯ್ ಬೆಂಗಳೂರು ಘಟಕದ ಅಧ್ಯಕ್ಷ ಸುರೇಶ್ ಹರಿ ಸ್ಪಷ್ಟಪಡಿಸುತ್ತಾರೆ.
– ವಿಜಯಕುಮಾರ್ ಚಂದರಗಿ