ಬೆಂಗಳೂರು : ಕೊರೊನಾ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ಕುಸಿತ ಹಾಗೂ ನೋಂದಣಿ ಮತ್ತು ಮುದ್ರಾಂಕ ಬಾಬ್ತುನಿಂದ ನಿರೀಕ್ಷಿತ ತೆರಿಗೆ ಸಂಗ್ರಹವಾಗದ ಹಿನ್ನೆಲೆಯಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಕಡಿಮೆ ಮಾಡಲು ಸರಕಾರ ತೀರ್ಮಾನಿಸಿದೆ.
ಆದರೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ವ್ಯಾಪ್ತಿಯ ಪ್ರದೇಶಗಳಿಗೆ ಇದು ಅನ್ವಯ ವಾಗುವುದಿಲ್ಲ. ಉಳಿದಂತೆ ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಮಾರ್ಗಸೂಚಿ ದರ ಡಿಸೆಂಬರ್ ವೇಳೆಗೆ ಕಡಿಮೆಯಾಗಲಿದೆ.
ಕಂದಾಯ ಸಚಿವ ಆರ್. ಅಶೋಕ್ ಈ ಸಂಬಂಧ ಶುಕ್ರವಾರ ಅಧಿಕಾರಿ ಸಭೆ ನಡೆಸಿ ಎಷ್ಟು ಕಡಿಮೆ ಮಾಡಬಹುದು ಎಂಬ ಬಗ್ಗೆ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ.
ಪ್ರಸ್ತುತ ಸ್ಥಿರಾಸ್ತಿ ನೊಂದಣಿ ಮುದ್ರಾಂಕ ಶುಲ್ಕ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಚರ್ಚಿಸ ಲಾಗಿದ್ದು, ವರದಿ ನೀಡುವಂತೆ ಸೂಚನೆ ನೀಡ ಲಾಗಿದೆ ಎಂದು ಅಶೋಕ್ ಹೇಳಿದರು.
ಸಂಪುಟ ಸಭೆಯಲ್ಲೂ ಚರ್ಚೆ
ಶನಿವಾರದ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಗುವುದು. ಸ್ಥಿರಾಸ್ತಿ ಮಾರ್ಗಸೂಚಿ ದರ ಕಡಿಮೆ ಮಾಡುವುದರಿಂದ ರಿಯಲ್ ಎಸ್ಟೇಟ್ ಉದ್ಯಮವೂ ಚೇತರಿಕೆ ಕಾಣಲಿದೆ ಎಂದರು.