ಮಸ್ಕಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಹಿನ್ನೆಲೆಯಲ್ಲಿ ಮಸ್ಕಿಯಲ್ಲೂ ರಾಜಕೀಯ ಚಟುವಟಿಕೆ ರಂಗು ಪಡೆದಿವೆ. ರಾಜ್ಯ ಬಿಜೆಪಿ ಕೈಗೊಂಡ ವಿಜಯ ಸಂಕಲ್ಪ ಯಾತ್ರೆ ಮಾ.11ರಂದು ಮಸ್ಕಿಗೆ ಆಗಮಿಸುತ್ತಿದ್ದು, ಬೃಹತ್ ಶಕ್ತಿ ಪ್ರದರ್ಶನಕ್ಕೆ ಇಲ್ಲಿನ ಕೇಸರಿ ಪಡೆ ಸಜ್ಜಾಗಿದೆ. 2008ರ ಕ್ಷೇತ್ರ ಮರುವಿಂಗಣೆಯಿಂದಾಗಿ ಅಸ್ತಿತ್ವಕ್ಕೆ ಬಂದ ಮಸ್ಕಿ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರ ಒಂದು ಉಪಚುನಾವಣೆ ಸೇರಿ ಇದುವರೆಗೆ ಒಟ್ಟು ನಾಲ್ಕು ಚುನಾವಣೆಗಳನ್ನು ಕಂಡಿದೆ. ಈ ಬಾರಿ ಐದನೇ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಚುನಾವಣೆಗೆ ಸ್ಪರ್ಧೆ ಬಯಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ
ಆಕಾಂಕ್ಷಿಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರ ಪರ್ಯಟನೆಯಲ್ಲಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಚುನಾವಣೆ ರಣಕಹಳೆ ಮೊಳಗಿಸಲು ಸಜ್ಜಾಗಿದೆ.
ಭರದ ಸಿದ್ಧತೆ
ಮಾ.11ರಂದು ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ನೇತೃತ್ವದ ತಂಡ ಮಸ್ಕಿ ಪಟ್ಟಣಕ್ಕೆ ಆಗಮಿಸಲಿದೆ. ಕೇಂದ್ರ ಸಚಿ ಭಗವಂತ ಕೂಬಾ, ರಾಜ್ಯ ಸಚಿವರಾದ ಬಿ. ಶ್ರೀರಾಮುಲು, ಆನಂದಸಿಂಗ್, ಹಾಲಪ್ಪ ಆಚಾರ ಸೇರಿ ಹಲವು ಮುಖಂಡರ ದಂಡೇ ಮಸ್ಕಿಗೆ ಆಗಮಿಸಲಿದೆ. ಇದಕ್ಕಾಗಿ ಲೀಡರ್‌ಗಳ ಎದುರಲ್ಲೇ ಬೃಹತ್ ಶಕ್ತಿ ಪ್ರದರ್ಶನಕ್ಕೆ ಇಲ್ಲಿನ ಬಿಜೆಪಿ ಮುಖಂಡರು ಅಣಿಯಾಗಿದ್ದಾರೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ನೇತೃತ್ವದಲ್ಲಿ ಸರಣಿ ಸಭೆ ನಡೆದಿದ್ದು, ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ವಿಶಾಲ ಖಾಲಿ ಜಾಗವನ್ನು ಸ್ವತ್ಛಗೊಳಿಸಲಾಗತ್ತಿದೆ. 30 ಸಾವಿರ ಜನಸಂಖ್ಯೆ ಸೇರುವ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗುತ್ತಿದೆ. 30-50 ಜನ ಕೂರುವ ವೇದಿಕೆಯನ್ನೂ ಮಾಡಲಾಗುತ್ತಿದ್ದು, ಜನದಟ್ಟಣೆ ನಿಯಂತ್ರಣಕ್ಕೆ ಅಲ್ಲಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
ಜನ ಸೇರಿಸಲು ಕಸರತ್ತು
ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಮೂಲಕ ಮಸ್ಕಿಯಲ್ಲಿ ಬಿಜೆಪಿ ಚುನಾವಣೆ ಪ್ರಚಾರದ ಕಹಳೆ ಮೊಳಗಿಸಲು ರೆಡಿಯಾಗಿದೆ. ಇದಕ್ಕಾಗಿ ಕ್ಷೇತ್ರದ ಪ್ರತಿ ಹಳ್ಳಿಗೂ ಹೊರಟಿರುವ ಬಿಜೆಪಿ ಪಡೆ ಜನರನ್ನು ಸೇರಿಸಲು ಎಲ್ಲಿಲ್ಲದ ಕಸರತ್ತು ನಡೆದಿದೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಅವರ ಪುತ್ರರಾದ ಪ್ರಸನ್ನ ಪಾಟೀಲ್, ಚೇತನ್ ಪಾಟೀಲ್, ಅಳಿಯ ರವಿಗೌಡ, ಮಂಡಲ ಅಧ್ಯಕ್ಷ ಶಿವಪುತ್ರ ಅರಳಹಳ್ಳಿ ಸೇರಿ ಹಲವರು ಹಳ್ಳಿ-ಹಳ್ಳಿಗೂ ತೆರಳಿ ಕಾರ್ಯಕ್ರಮಕ್ಕೆ ಬರುವಂತೆ ಜನರನ್ನು ಆಹ್ವಾನಿಸುತ್ತಿರುವುದು ಕಂಡು ಬರುತ್ತಿದೆ.
ಉಪಚುನಾವಣೆಯೇ ಬೇರೆ, ಸಾರ್ವತ್ರಿಕ ಚುನಾವಣೆಯೇ ಬೇರೆ. ಎರಡು ವರ್ಷದಲ್ಲಿ ಈಗಿನ ಶಾಸಕರ ಆಡಳಿತಕ್ಕೆ ಜನರು ಬೇಸತ್ತಿದ್ದಾರೆ. ಪುನಃ ಬದಲಾವಣೆ ಬಯಸಿದ್ದಾರೆ. ಇದಕ್ಕೆ ಪೂರಕವಾಗಿ ಬಿಜೆಪಿ ಸರಕಾರದಿಂದ ಕ್ಷೇತ್ರಕ್ಕೆ ಆದ ಲಾಭಗಳ ಕುರಿತು ಜನರ ಮನವರಿಕೆ ಮಾಡಲಾಗುತ್ತಿದೆ. ಮಾ.11ರಂದು
ನಡೆಯುವ ಕಾರ್ಯಕ್ರಮಕ್ಕೆ 30 ಸಾವಿರ ಜನರು ಸೇರುವ ನಿರೀಕ್ಷೆ ಇದೆ.
ಪ್ರತಾಪಗೌಡ ಪಾಟೀಲ್ ಮಾಜಿ ಶಾಸಕರು, ಮಸ್ಕಿ
ಸಂದೇಶ ರವಾನೆ
ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬರೋಬ್ಬರಿ ಮೂರು ಬಾರಿಯೂ ಪ್ರತಾಪಗೌಡ ಪಾಟೀಲ್‌ರೇ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ 2018ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ್, ಬಿಜೆಪಿ ಸರಕಾರ ರಚನೆಗೆ ನೆರವಾಗಲು ಆಪರೇಷನ್ ಕಮಲಕ್ಕೆ ಬಲಿಯಾಗಿ ರಾಜೀನಾಮೆ ನೀಡಿದ್ದರು. ಇದರ ಫಲವಾಗಿ ನಡೆದ ಉಪಚುನಾವಣೆಯಲ್ಲಿ ಸೋತು ಮಾಜಿಯಾಗಿದ್ದಾರೆ. ಈಗ ಪುನಃ ಸಾರ್ವತ್ರಿಕ ಚುನಾವಣೆಯಲ್ಲಿ ಅದೃಷ್ಠ ಪರೀಕ್ಷೆಗೆ ರೆಡಿಯಾಗಿದ್ದಾರೆ. ಉಪಚುನಾವಣೆಯಲ್ಲಿನ ಸೋಲಿನ ಕಹಿ ಮರೆತು ಪುನಃ ಗೆಲುವಿನ ನಗೆ ಬೀರಲು ಬೇಕಾದ ಎಲ್ಲ ಅಸ್ತ್ರಗಳನ್ನು ಬಳಸಿಕೊಳ್ಳಲು ಆರಂಭಿಸಿದ್ದಾರೆ.
ಮಲ್ಲಿಕಾರ್ಜುನ ಚಿಲ್ಕರಾಗಿ