Advertisement

ವಿಪಕ್ಷಗಳನ್ನು ಒಗ್ಗೂಡಿಸುವ ಹೊಣೆ ವಹಿಸಲು ಸಿದ್ಧ: ಪವಾರ್‌

12:33 PM Jun 06, 2018 | Team Udayavani |

ಮುಂಬಯಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಎಲ್ಲ ಪ್ರತಿಪಕ್ಷಗಳು ಒಂದಾಗಬೇಕೆಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರಲ್ಲದೆ ತಾನು ಇದಕ್ಕಾಗಿ ಒಗ್ಗೂಡಿಸುವವನ ಪಾತ್ರ ವಹಿಸಲು ಸಿದ್ಧನೆಂದು ಹೇಳಿದ್ದಾರೆ. ವಿಪಕ್ಷಗಳೆಲ್ಲ ಒಗ್ಗೂಡಿದ್ದರಿಂದ ಇಂದಿರಾಗಾಂಧಿಯವರನ್ನು ಅಧಿಕಾರದಿಂದ ಕಿತ್ತೂಗೆಯಲು ಸಾಧ್ಯವಾಗಿದ್ದ 1977ರಂಥ ಪರಿಸ್ಥಿತಿ ಈಗಲೂ ಉದ್ಭವಿಸಿದೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

“ಹೆಚ್ಚಿನೆಲ್ಲ ಉಪಚುನಾವಣಾ ಫ‌ಲಿತಾಂಶಗಳು ಆಳುವ ಪಕ್ಷದ ವಿರುದ್ಧ ಬಂದಿವೆ. ಇದೊಂದು ಸಣ್ಣ ವಿಷಯವಲ್ಲ. ಈ ಹಿಂದೆ ಉಪಚುನಾವಣಾ ಸೋಲುಗಳು ಆಂದಿನ ಸರಕಾರದ ಸೋಲಿನಲ್ಲಿ ಪರ್ಯವಸಾನಗೊಂಡ ಕೆಲ ನಿದರ್ಶನಗಳು ಇವೆ’ ಎಂದವರು ಭಂಡಾರ-ಗೊಂಡಿಯಾ ಕ್ಷೇತ್ರದಿಂದ ಆಯ್ಕೆಯಾದ ಪಕ್ಷದ ನೂತನ ಲೋಕಸಭಾ ಸದಸ್ಯ ಮಧುಕರ್‌ ಕುಕಾಡೆ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಹೇಳಿದರು.

1977ರಲ್ಲಿ ಕೂಡ ಪ್ರತಿಪಕ್ಷಗಳ ಒಗ್ಗಟ್ಟು ಇಂದಿರಾ ಗಾಂಧಿ ನೇತೃತ್ವದ ಅಂದಿನ ಕಾಂಗ್ರೆಸ್‌ ಸರಕಾರದ ಸೋಲಿಗೆ ಕಾರಣವಾಗಿತ್ತು ಎಂದ ಅವರು, ಅಂಥದ್ದೇ ಪರಿಸ್ಥಿತಿ ಇಂದೂ ಇದೆ ಎಂದರು. “ಪ್ರಜಾಸತ್ತೆಯಲ್ಲಿ ನಂಬಿಕೆ ಹೊಂದಿರುವ ಮತ್ತು ಸಮಾನ ಕನಿಷ್ಠ ಕಾರ್ಯಕ್ರಮವನ್ನು ಹೊಂದಿರುವ ಪಕ್ಷಗಳು ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಒಗ್ಗೂಡಬೇಕು. ಎಲ್ಲ ಸಮಾನಮನಸ್ಕ ಪಕ್ಷಗಳನ್ನು ಒಗ್ಗೂಡಿಸುವ ಪ್ರಕ್ರಿಯೆಯ ಭಾಗವಾಗಲು ನಾನು ಸಂತೋಷಪಡುವೆ’ ಎಂದು 77ರ ಹರೆಯದ ನಾಯಕ ನುಡಿದರು.

ತಮ್ಮ ತಮ್ಮ ಪ್ರದೇಶದಲ್ಲಿ ಬಲವಾದ ನೆಲೆ ಹೊಂದಿರುವ ಎನ್‌ಡಿಯೇತರ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಒಗ್ಗೂಡುವ ಸಲುವಾಗಿ ತಿಳಿವಳಿಕೆಯೊಂದಕ್ಕೆ ಬರಬೇಕು. ಕೇರಳದಲ್ಲಿ ಎಡಪಕ್ಷಗಳು, ಕರ್ನಾಟಕದಲ್ಲಿ ಜೆಡಿಎಸ್‌, ಕರ್ನಾಟಕ, ಗುಜರಾತ್‌, ಮಧ್ಯಪ್ರದೇಶ, ಪಂಜಾಬ್‌, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್‌, ಆಂಧ್ರಪ್ರದೇಶದಲ್ಲಿ ಟಿಡಿಪಿ, ತೆಲಂಗಾಣದಲ್ಲಿ ಟಿಆರ್‌ಎಸ್‌, ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಹಾಗೂ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಬಲವಾದ ನೆಲೆಯನ್ನು ಹೊಂದಿದ್ದು ಅವು ಸಹಮತವೊಂದಕ್ಕೆ ಬರಬೇಕು ಎಂದು ಪವಾರ್‌ ಹೇಳಿದರು.

ಕಳೆದ ವಾರ ದೇಶದ ವಿವಿಧ ರಾಜ್ಯಗಳಲ್ಲಿ 14 ಲೋಕಸಭಾ ಹಾಗೂ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳಲ್ಲಿ ಪ್ರತಿಪಕ್ಷಗಳು 11 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ಬಲವಾದ ಹೊಡೆತ ನೀಡಿದ್ದವು. ಬಿಜೆಪಿ ಮತ್ತು ಮಿತ್ರಪಕ್ಷಗಳು ಕೇವಲ ಮೂರು ಸ್ಥಾನಗಳನ್ನು ಗೆಲ್ಲಲು ಶಕ್ತವಾಗಿದ್ದವು.

Advertisement

ಮಹಾರಾಷ್ಟ್ರದ ಪಾಲ^ರ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದರೂ ಬಿಜೆಪಿವಿರೊಧಿ ಮತಗಳು ಬಿಜೆಪಿ ಗಳಿಸಿದ ಮತಗಳಿಂದ ಅಧಿಕವಿದ್ದುವೆಂದು ಪವಾರ್‌ ಹೇಳಿದರು.

ಯಾವುದೇ ವೆಚ್ಚದಲ್ಲಾದರೂ ಮತ್ತು ಯಾವುದೇ ವಿಧಾನವನ್ನು ಬಳಸಿಯಾದರೂ ಉಪಚುನಾವಣೆಯಲ್ಲಿ ಗೆಲ್ಲುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ನೀಡಿದ್ದ ಹೇಳಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪವಾರ್‌, ಮುಖ್ಯಮಂತ್ರಿಯವರ ಸೂಚನೆಯನ್ನು ಕಾರ್ಯಗತಗೊಳಿಸಲಾಯಿತು ಎಂದರು. “ನಾನು ಅನೇಕ ಚುನಾವಣೆಗಳನ್ನು ನೋಡಿದ್ದೇನೆ. ಆದರೆ ಅಧಿಕಾರದ ಅಷ್ಟೊಂದು ದುರುಪಯೋಗವನ್ನು ಎಂದೂ ಕಂಡಿಲ್ಲ. ಭಂಡಾರ-ಗೊಂಡಿಯಾ ಕ್ಷೇತ್ರದಲ್ಲಿ ಮತದಾನಕ್ಕೆ ಮುಂಚಿತವಾಗಿ ಫ‌ಲಾನುಭವಿಗಳು ತಮ್ಮ ಖಾತೆಗಳಲ್ಲಿ ಹಣವನ್ನು ಪಡೆಯುವಂತಾಗಲು ಶನಿವಾರ ಮತ್ತು ರವಿವಾರಗಳಂದು ಬ್ಯಾಂಕ್‌ಗಳನ್ನು ತೆರೆದಿಡುವಂತೆ ಜಿಲ್ಲಾಡಳಿತ ಆದೇಶಿಸಿತು’ ಎಂದವರು ಹೇಳಿದರು.

ನಿರ್ಲಕ್ಷ್ಯದಿಂದಾಗಿ ಪ್ರತಿಭಟನೆ 
ರೈತರ ಮುಷ್ಕರ ಕುರಿತು ಪ್ರಸ್ತಾವಿಸಿದ ಅವರು, ಸರಕಾರದ ನಿರ್ಲಕ್ಷ್ಯದಿಂದಾಗಿ ಪ್ರತಿಭಟನೆ ತೋರುವ ಅನಿವಾರ್ಯತೆಗೆ ಒಳಗಾದ ರೈತರನ್ನು ಸಮಾಜದ ಎಲ್ಲ ವರ್ಗದವರು ಬೆಂಬಲಿಸಬೇಕು ಎಂದು ನುಡಿದರು.

“ಇದೊಂದು ರಾಜಕೀಯ ಚಳವಳಿಯಲ್ಲ. ಚಳವಳಿನಿರತ ರೈತರು ಹಾಲನ್ನು ರಸ್ತೆಗಳಿಗೆ ಸುರಿಯಬಾರದೆಂದು ನಾನು ಮನವಿ ಮಾಡುತ್ತೇನೆ. ಅವರು ತಾವು ಬೆಳೆದ ಬೆಳೆಗಳನ್ನು ನಾಶಪಡಿಸಬಾರದು. ಅದರ ಬದಲು ಬಡಜನರಿಗೆ ಅದನ್ನು ಹಂಚಲಿ’ ಎಂದು ಪವಾರ್‌ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next