ಶಿರಸಿ: ಮಳೆ ಹೆಚ್ಚಾಗಿ ಜಿಲ್ಲೆಯಾದ್ಯಂತ ಅನಾಹುತವಾಗಿದೆ. ಅಡಕೆ ಹಾಗೂ ಕಾಳುಮೆಣಸು ಸೇರಿದಂತೆ ಇತರ ಬೆಳೆಗಳು ಕೊಳೆಗೆ ಈಡಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಉಭಯ ಸರಕಾರಗಳು ರೈತರ ನೆರವಿಗೆ ಬರುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಸಚಿವ ಆರ್.ವಿ. ದೇಶಪಾಂಡೆ ಅವರ ಸಹಕಾರದಲ್ಲಿ ಅಡಕೆ ಬೆಳೆಗಾರರಿಗೆ ಪರಿಹಾರ ದೊರೆತಿದೆ. ಭತ್ತ, ಜೋಳ, ಕಾಳುಮೆಣಸು ಹೆಚ್ಚಿದ ಮಳೆಯಿಂದ ರೈತರ ಕೈಗೆ ಸಿಗುತ್ತಿಲ್ಲ. ಮೆಣಸಿನ ಬಳ್ಳಿ ಕೊಳೆಯತೊಡಗಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಸರಕಾರಗಳು ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ಅಗತ್ಯ ಬಿದ್ದರೆ ನಿಯೋಗ ಒಯ್ಯಲೂ ಸಿದ್ದ. ಜಿಲ್ಲೆಗೆ ಆಗಮಿಸುವ ಸಚಿವರ ಗಮನಕ್ಕೂ ಈ ವಿಷಯ ತಂದು ಮನವಿ ನೀಡುತ್ತೇವೆ. ಜಿಲ್ಲೆಯ ಅನೇಕ ಸಹಕಾರಿ ಸಂಘಗಳೂ ರೈತರ ನೋವನ್ನು ಉಲ್ಲೇಖೀಸಿ ಮನವಿ ನೀಡಿವೆ ಎಂದರು.
ಯಾವುದೇ ಸರ್ಕಾರ ನೊಂದ ರೈತರ ಅನುಕೂಲಕ್ಕೆ ಆಗಮಿಸಬೇಕು. ಕೇಂದ್ರ ಮಂತ್ರಿಗೂ ಮನವಿ ಮಾಡುತ್ತೇವೆ ಎಂದ ಅವರು, ಕಂದಾಯ ಸಚಿವರ ಗಮನಕ್ಕೆ ಜಿಲ್ಲೆಯ ರಸ್ತೆ ದುಸ್ಥಿತಿ ತಲುಪಿದ ಬಗ್ಗೆ ಮನವಿ ಮಾಡಲಾಗಿದೆ. ಹೊಂಡ ಬಿದ್ದ ರಸ್ತೆ ತುಂಬಲು ಸಾಧ್ಯವಿಲ್ಲ. ಮಳೆಗಾಲದ ನಂತರ ರಸ್ತೆ ಮಾಡುತ್ತೇವೆ ಎಂದಿದ್ದಾರೆ.
ನಾಳೆ ಬಿಡುಗಡೆ: ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಎಲ್ಲ ಕಡೆ ಸಮಿತಿಯಿಂದ ವರದಿ ಪಡೆದು ಸರ್ವ ಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಎಲ್ಲವಾರ್ಡ್ ನಲ್ಲೂ ಎಂಟತ್ತು ಆಕಾಂಕ್ಷಿತರು ಇದ್ದರು. ಬುಧವಾರ ಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆ ಆಗಲಿದೆ ಎಂದ ಅವರು, ಎಲ್ಲ ಕಡೆ ಅಧಿಕಾರಕ್ಕೆ ಕಾಂಗ್ರೆಸ್ ಬರಲಿದೆ.
ಟಿಕೆಟ್ ಆಕಾಂಕ್ಷಿಗಳಾಗಿ ಪ್ರತಿ ವಾರ್ಡ್‌ಗೆ 5-10 ಸ್ಪರ್ಧೆ ಇತ್ತು. ಹಳಬರಿಗೂ ಅವಕಾಶ ನೀಡಲಾಗಿದೆ. ಆಯ್ಕೆ ಸಮಿತಿ ತೀರ್ಮಾನ ಮಾಡುತ್ತಿದೆ. ಸರ್ವ ಸಮ್ಮತ ಅಭ್ಯರ್ಥಿ ಆಯ್ಕೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಸ್.ಕೆ. ಭಾಗವತ್, ಸೂರ್ಯಪ್ರಕಾಶ ಹೊನ್ನಾವರ, ಅಬ್ಟಾಸ ತೋನ್ಸೆ ಇದ್ದರು.
ಉಚ್ಛಾಟಿತರನ್ನು ಹೈಕಮಾಂಡ್ ಪಕ್ಷಕ್ಕೆ ಮರು ಸೇರ್ಪಡೆಗೊಳಿಸಿದೆ. ಅವರೂ ಕಾಂಗ್ರೆಸ್ಸಿಗರೇ. ಗೆಲ್ಲುವ ಅಭ್ಯರ್ಥಿ, ಸರ್ವ ಸಮ್ಮತ ಅಭ್ಯರ್ಥಿಗೆ ಟಿಕೆಟ್.
ಭೀಮಣ್ಣ ನಾಯ್ಕ, ಜಿಲ್ಲಾಧ್ಯಕ್ಷ