Advertisement

ಭವಿಷ್ಯದ ಬರ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿ: ರಮೇಶ್‌

03:07 PM Aug 21, 2017 | Team Udayavani |

ಹರಿಹರ: ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಮೂಲಕ ಮುಂಬರುವ ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಸಿದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಮಿನಿ ವಿಧಾನಸೌದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರಸಕ್ತ ವರ್ಷವೂ ಮಳೆಯಿಲ್ಲದೆ ಕುಡಿಯುವ ನೀರಿನ ಹಾಗೂ ದನಕರುಗಳ ಮೇವಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಅಧಿಕಾರಿಗಳು ಮುಂಬರುವ ಸಂಕಷ್ಟ ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ತಾಲೂಕಿನಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳಬಹುದಾದ ಜನವಸತಿ ಪ್ರದೇಶಗಳನ್ನು ಈಗಲೇ ಗುರುತಿಸಿ, ಪರ್ಯಾಯ 
ವ್ಯವಸ್ಥೆ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ನೀರಿನ ಸಮಸ್ಯೆ ಇರುವ ಜನವಸತಿ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ಸ್ಥಳೀಯ ನಗರಸಭೆ, ಪುರಸಭೆ, ಗ್ರಾಪಂ ವಿಳಂಬವಿಲ್ಲದೆ ಟ್ಯಾಂಕರ್‌ ಬಿಲ್‌ ಪಾವತಿಸಬೇಕು ಎಂದರು.

ನೀರಿನ ಮಿತ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಗುತ್ತೂರಿನಲ್ಲಿ ಈಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ದೂರು
ಬಂದಿದ್ದು, ಸಂಬಂಧಿಸಿದ ಗ್ರಾಮೀಣ ಕುಡಿಯುವ ನೀರು ಇಂಜಿನಿಯರ್‌ ಕೂಡಲೆ ಸ್ಥಳಕ್ಕೆ ತೆರಳಿ ಸಮಸ್ಯೆ ನಿವಾರಿಸಬೇಕು ಎಂದು ಸೂಚಿಸಿದರು. ಮಳೆಯಿಲ್ಲದೆ ತಾಲೂಕಿನ ಜಮೀನುಗಳು ಬೀಳಾಗಿದ್ದು, ಬರುವ ಬೇಸಿಗೆಯಲ್ಲಿ ದನಕರುಗಳಿಗೆ ಮೇವಿನ ಸಮಸ್ಯೆ ಬಿಗಡಾಯಿಸಬಹುದಾಗಿದೆ. ನಮ್ಮ ತಾಲೂಕಿನಿಂದ ಮೇವು ಬೇರೆ ಕಡೆಗೆ ಸಾಗಾಣಿಕೆ ಆಗದಂತೆ ಪಶು ಸಂಗೋಪನೆ ಹಾಗೂ ಕೃಷಿ ಇಲಾಖಾಧಿಕಾರಿಗಳು ಜಾಗ್ರತೆ ವಹಿಸಬೇಕು
ಎಂದರು.

ರೈತರು ಒಂದು ಬೆಳೆ ಬಿತ್ತನೆ ಮಾಡಿದ ನಂತರ ಬೀಜ ಬೆಳೆಯದಿದ್ದರೆ ಅದನ್ನು ಅಳಿಸಿ, ಮತ್ತೆ ಬಿತ್ತನೆ ನಡೆಸಿರುತ್ತಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ವಿಮೆ ಕೊಡಿಸಲು ಕಷ್ಟವಾಗುವುದರಿಂದ ಗ್ರಾಮ ಲೆಕ್ಕಾಧಿಕಾರಿಗಳು ಬಿತ್ತನೆ ಮಾಡಿದ ನಂತರ ಒಮ್ಮೆ ಹಾಗೂ 7-8 ದಿನಗಳಲ್ಲಿ ಬೀಜ ಮೊಳಕೆಯೊಡೆದಾಗ ಮತ್ತೂಮ್ಮೆ ಜಿಪಿಎಸ್‌ ಮಾಡಬೇಕು. ರೈತರು ವಿಮೆ ಪಡೆದುಕೊಳ್ಳುವಲ್ಲಿ ಯಾವುದೇ ಲೋಪವಾಗದಂತೆ ಗ್ರಾಮ ಲೆಕ್ಕಾಧಿಕಾರಿಗಳು ಎಚ್ಚರಿಕೆಯಿಂದ ಈ ಕಾರ್ಯ ನಿರ್ವಹಿಸಬೇಕು ಎಂದರು. ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರ ಹಾಗೂ ದಿನಗೂಲಿ ಕಾರ್ಮಿಕರ ಸಂಘದಿಂದ ಕಾರ್ಮಿಕ ಇಲಾಖೆಯ ಮಾರ್ಗಸೂಚಿಯಂತೆ ವೇತನ ಮತ್ತಿತರೆ ಸೌಕರ್ಯ ಒದಗಿಸಲು ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಲಾಯಿತು. 

ತಹಶೀಲ್ದಾರ್‌ ಜಿ.ನಳಿನಾ, ಪೌರಾಯುಕ್ತೆ ಎಸ್‌.ಲಕ್ಷ್ಮೀ, ಇಒ ನೀಲಗಿರಿಯಪ್ಪ, ಕೃಷ್ಣಪ್ಪ ಜಾಡರ್‌, ವೆಂಕಟಮ್ಮ, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. ನಂತರ ಶಾಸಕ ಎಚ್‌.ಎಸ್‌.ಶಿವಶಂಕರ್‌ ಜೊತೆ ನಗರದ ಒಳಚರಂಡಿ, ಹಳೆ ಪಿಬಿ ರಸ್ತೆ ಅಭಿವೃದ್ಧಿ ಮುಂ ತಾದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next