Advertisement

ಅಕ್ಕಮಹಾದೇವಿ ವಿವಿಯಲ್ಲಿ ಚಾನಲ್‌ ಆರಂಭಕ್ಕೆ ಸಿದ್ಧತೆ

07:15 AM Jul 24, 2017 | Team Udayavani |

ವಿಜಯಪುರ: ರಾಜ್ಯದಲ್ಲಿ ಈಗಾಗಲೇ ಸರ್ಕಾರಿ, ಖಾಸಗಿ ಸುದ್ದಿ ವಾಹಿನಿಗಳ ಪೈಪೋಟಿ ಮಧ್ಯೆ ರಾಜ್ಯದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವೆಬ್‌ ಚಾನಲ್‌ ಆರಂಭಿಸಲು ಸದ್ದಿಲ್ಲದೇ ಸಿದ್ಧತೆ ನಡೆಸಿದೆ.

Advertisement

ಈ ಮೂಲಕ ದೇಶದಲ್ಲೇ ಮಹಿಳಾ ವಿಶ್ವವಿದ್ಯಾಲಯದ ಮೊದಲ ನ್ಯೂಸ್‌ ಚಾನಲ್‌ ಆರಂಭಿಸಿದ ಹಿರಿಮೆ ಮಹಿಳಾ ವಿಶ್ವವಿದ್ಯಾಲಯಕ್ಕೆ ಲಭ್ಯವಾಗಲಿದೆ. ರಾಜ್ಯದಲ್ಲಿ ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್‌ ಮೀಡಿಯಾ ವಿಭಾಗ ನ್ಯೂಸ್‌ ವೆಬ್‌ ಚಾನಲ್‌ ಆರಂಭಿಸಿದೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಇದೇ ಸಾಹಸಕ್ಕೆ ಕೈ ಹಾಕಿದೆ. ದೇಶದಲ್ಲಿರುವ 8 ವಿವಿಗಳಲ್ಲಿ ಇಂಥ ಸಾಹಸ ಮಾಡುತ್ತಿರುವ ಮೊದಲ ಮಹಿಳಾ ವಿಶ್ವವಿದ್ಯಾಲಯ ಎಂಬ ಹಿರಿಮೆ ಪಡೆಯಲಿದೆ.

ಈಗಾಗಲೇ ಖಾಸಗಿ ಪ್ರಸಾರಕ್ಕಾಗಿ ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಪತ್ರಿಕೆ ಪ್ರಸಾರದ ಅಧ್ಯಯನಕ್ಕಾಗಿ 
“ಮಹಿಳಾ ಧ್ವನಿ’ ಪಾಕ್ಷಿಕ ಪತ್ರಿಕೆ ಆರಂಭಿಸಿದೆ. ಕಳೆದ ಶೈಕ್ಷಣಿಕ ವರ್ಷದಿಂದ ಈ ಪತ್ರಿಕೆ ಹೊರಬರುತ್ತಿದ್ದು, ವರ್ಷದಲ್ಲಿ 175 ಸಂಚಿಕೆ ಮುದ್ರಣ ಕಂಡಿದೆ. ಇದೇ ಉತ್ಸಾಹದಿಂದ ನೂತನ ಪ್ರಯೋಗಕ್ಕೆ ವಿವಿ ಮುಂದಾಗಿದೆ.

ಅರ್ಧ ಗಂಟೆ ಪ್ರಸಾರ: ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂಹನ ವಿಭಾಗದಿಂದ ನಿತ್ಯವೂ ಅರ್ಧ ಗಂಟೆ ಅಂತರ್ಜಾಲ ಚಾನಲ್‌ ಮೂಲಕ ಸುದ್ದಿ ಪ್ರಸಾರ ಮಾಡಲಾಗುವುದು.

ಸುದ್ದಿ ವೆಬ್‌ ಚಾನಲ್‌ ಹೇಗಿರಬೇಕು, ಏನೇನು ಇರಬೇಕು ಎಂಬುದು ಈಗಾಗಲೇ ಬಹುತೇಕ ನಿರ್ಧಾರವಾಗಿದೆ. ಅರ್ಧ ಗಂಟೆ ಸುದ್ದಿಯಲ್ಲಿ ವಿಜಯಪುರದಲ್ಲಿ ನಿತ್ಯ ನಡೆಯುವ ಸುದ್ದಿಗಳ ಪ್ರಸಾರಕ್ಕೆ 15 ನಿಮಿಷ ಮೀಸಲಾಗಿದ್ದರೆ, ಉಳಿದ
15 ನಿಮಿಷಗಳಲ್ಲಿ ಸಾಧಕರ ಸಂದರ್ಶನ, ಅಭಿವೃದ್ಧಿ ಸಂಗತಿಗಳು, ಪ್ರಸ್ತುತ ಸಂಗತಿಗಳ ಚರ್ಚೆ, ಅನುಭವಿಗಳೊಂದಿಗೆ ಚರ್ಚೆ ಹೀಗೆ ಸಮಯ ಮೀಸಲಿರಿಸಲು ಯೋಜನೆ ರೂಪುಗೊಂಡಿದೆ.

Advertisement

ಸ್ಥಾನಿಕ ಕೇಬಲ್‌ನಲ್ಲೂ ಲಭ್ಯ: ಆರಂಭದಲ್ಲಿ ವಾರಕ್ಕೊಮ್ಮೆ ಪ್ರಸಾರ ಮಾಡಲು ನಿರ್ಧರಿಸಿದ್ದು, ವಿದ್ಯಾರ್ಥಿನಿಯರಲ್ಲಿ ಸುದ್ದಿ ತಯಾರಿಕೆ ಸಾಮರ್ಥ್ಯ ವೃದ್ಧಿಯ ಬಳಿಕ ನಿತ್ಯವೂ ಪ್ರಸಾರ ಮಾಡಲು ಯೋಜಿಸಲಾಗಿದೆ. ಈ ವೆಬ್‌ನ್ಯೂಸ್‌ ಚಾನಲ್‌ ಸುದ್ದಿ ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ಮೂಲಕ ಅಂತರ್ಜಾಲಕ್ಕೆ ಸಂಪರ್ಕಿಸಲಾಗುವುದು. ಜೊತೆಗೆ ಸ್ಥಾನಿಕ ಕೇಬಲ್‌ನಲ್ಲಿ ಸುದ್ದಿ ಪ್ರಸಾರಕ್ಕೂ ತಯಾರಿ ನಡೆದಿದೆ. ಇದಕ್ಕಾಗಿ ಈಗಾಗಲೇ ಸ್ಥಳೀಯ ಚಾನಲ್‌ ಜೊತೆ ಒಪ್ಪಂದಕ್ಕೂ ಮುಂದಾಗಿದೆ.

ವಿಶ್ವವಿದ್ಯಾಲಯದ ವೆಬ್‌ ನ್ಯೂಸ್‌ ಚಾನಲ್‌ ಲೋಗೋ ಅಂತಿಮಗೊಳಿಸುವ ಕೆಲಸ ನಡೆಯುತ್ತಿದ್ದು, ಚಾನಲ್‌ ವಿನ್ಯಾಸ, ಗ್ರಾಫಿಕ್‌ ಕೆಲಸ ಭರದಿಂದ ನಡೆದಿದೆ. ಬರುವ ಸೆಪ್ಟೆಂಬರ್‌ ವೇಳೆಗೆ ಈ ವೆಬ್‌ ನ್ಯೂಸ್‌ ಚಾನಲ್‌ ಆರಂಭಿಸಲು
ಸಿದ್ಧತೆ ನಡೆದಿದೆ.

ಕೋಟಿ ವೆಚ್ಚದ ಸ್ಟುಡಿಯೋ: ಇದಕ್ಕಾಗಿ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ, ಪಂಗಡ ಘಟಕದಿಂದ 78 ಲಕ್ಷ ರೂ. ಹಾಗೂ ರೂಸೋ ಸಂಸ್ಥೆಯಿಂದ 28 ಲಕ್ಷ ರೂ. ಸೇರಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪತ್ರಿಕೋದ್ಯಮ-ಸಮೂಹ ಸಂಹನ ವಿಭಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಟುಡಿಯೋ ಸಿದ್ಧವಾಗುತ್ತಿದೆ.

ಸಾಫ್ಟ್ವೇರ್‌ ಸಹಿತ ಆರು ಆ್ಯಪಲ್‌ ಕಂಪ್ಯೂಟರ್‌, ಹೈಎಂಡ್‌ ನೂತನ ಸುಧಾರಿತ ತಾಂತ್ರಿಕತೆ ಹೊಂದಿರುವ 6 ಕ್ಯಾಮರಾ, ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಗಳ ನೇರ ಪ್ರಸಾರದ ಮಾದರಿಯಲ್ಲಿ ಸುದ್ದಿಗಳನ್ನು ತ್ವರಿತವಾಗಿ
ಪ್ರಸಾರಗೊಳಿಸಲು ಎರಡು ಅತ್ಯಾಧುನಿಕ ಐಪಾಡ್‌ ತರಿಸಲಾಗಿದೆ. ಭವಿಷ್ಯದಲ್ಲಿ ವಿಶ್ವವಿದ್ಯಾಲಯದಿಂದ ಸಾಕ್ಷéಚಿತ್ರ, ಕಿರುಚಿತ್ರ, ಗಂಭೀರ ವಿಷಯಗಳ ಚರ್ಚೆ, ಸಂವಾದ, ಸಂದರ್ಶನಗಳನ್ನು ದಾಖಲೀಕರಣಕ್ಕೂ
ಯೋಜಿಸಲಾಗಿದೆ.

– ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next