ಪುನೀತ್ ರಾಜಕುಮಾರ್ ಅಭಿನಯದ “ರಾಜಕುಮಾರ’ ಚಿತ್ರದ ಬಿಡುಗಡೆಗೆ ವೇದಿಕೆ ಸಜ್ಜಾಗಿದೆ. ಚಿತ್ರ ನಾಳೆ ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೆ ಈಗಾಗಲೇ ಅಭಿಮಾನಿಗಳು ಕಾದು ಕುಳಿತಿದ್ದು, ನಾಳೆಯ ಪ್ರದರ್ಶನದ ಟಿಕೇಟುಗಳು ಈಗಾಗಲೇ ಹಲವು ಕಡೆ ಮಾರಾಟವಾಗಿದೆ.
ಈ ಹಿಂದೆ ಪುನೀತ್ ಅಭಿನಯದ ಕೆಲವು ಚಿತ್ರಗಳು, ಬೆಳಿಗ್ಗೆ ಬಹಳ ಬೇಗ ಪ್ರದರ್ಶನ ಕಂಡಿದ್ದವು. “ರಾಜಕುಮಾರ’ ಚಿತ್ರದ ವಿಷಯದಲ್ಲೂ ಅದು ಮುಂದುವರೆದಿದೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಚಿತ್ರವು, ಬೆಳಿಗ್ಗೆ 7ಕ್ಕೆ ಪ್ರದರ್ಶನ ಕಾಣುತ್ತಿದೆ. ಇನ್ನು ಬೆಂಗಳೂರಿನ ಗೌಡನಪಾಳ್ಯದಲ್ಲಿರುವ
ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಿಗ್ಗೆ ಐದಕ್ಕೆ ಮೊದಲ ಪ್ರದರ್ಶನ ಶುರುವಾದರೆ, ತಾವರೆಕೆರೆಯ ಬಾಲಾಜಿ ಚಿತ್ರಮಂದಿರದಲ್ಲಿ ಬೆಳಿಗ್ಗೆ ಐದು ಮುಕ್ಕಾಲಿಗೆ ಮೊದಲ ಪ್ರದರ್ಶನ ಶುರುವಾಗಲಿದೆಯಂತೆ. ಇನ್ನೂ ಒಂದು ವಿಶೇಷವೆಂದರೆ, ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲೂ ಪ್ರದರ್ಶನಗಳ ಸಂಖ್ಯೆಯನ್ನು ಏರಿಸಿರುವುದು.
ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ 9 ಪ್ರದರ್ಶನಗಳನ್ನು ಮೊದಲು ನೀಡಲಾಗಿತ್ತಂತೆ. ಅವೆಲ್ಲಾ ಹೌಸ್‌ಫುಲ್ ಆದ ಕಾರಣ ಇನ್ನೊಂದು ಶೋ ನೀಡಲಾಗಿದೆ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಆನಂದ್‌ರಾಮ್. ಇನ್ನು ಮಾಲ್ ಆಫ್ ಮೈಸೂರುನಲ್ಲಿ ಐದು ಪ್ರದರ್ಶನಗಳನ್ನು ನೀಡಲಾಗಿತ್ತಂತೆ. ಅವೆಲ್ಲಾ ಹೌಸ್‌ಫುಲ್ ಆದ ಕಾರಣ, ಇನ್ನೂ ಐದು ಪ್ರದರ್ಶನಗಳನ್ನು ಹೆಚ್ಚಿಗೆ ನೀಡಲಾಗಿರುವುದು ವಿಶೇಷ.
ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜೊತೆಗೆ ಮುಂದಿನ ವಾರದಿಂದ ಮುಂಬೈ, ಪೂನಾ, ಚೆನ್ನೈಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆಯಂತೆ. ರಾಜಾಸ್ಥಾನದಲ್ಲಿ ಕನ್ನಡಿಗರು ಚಿತ್ರ ನೋಡಬೇಕು ಎಂದು ತಮ್ಮ ಆಸೆ ವ್ಯಕ್ತಪಡಿಸಿದರಂತೆ. ಅದೇ ಕಾರಣಕ್ಕೆ ನಿರ್ಮಾಪಕ ವಿಜಯಕುಮಾರ್ ಕಿರಗಂದೂರು, ಚಿತ್ರವನ್ನು ಉಚಿತವಾಗಿ ತೋರಿಸುತ್ತಿದ್ದಾರಂತೆ. ಇನ್ನು ಚಿತ್ರವು ಅಮೇರಿಕಾದಲ್ಲಿ ಮಾರ್ಚ್ 29ರಂದು, ಇಂಗ್ಲೆಂಡ್‌ನಲ್ಲಿ ಏಪ್ರಿಲ್ ಏಳರಂದು, ಯೂರೋಪ್‌ನಲ್ಲಿ ಏಪ್ರಿಲ್ ಏಳರಂದು, ಸಿಂಗಾಪೂರ್‌ನಲ್ಲಿ ಮಾರ್ಚ್ 29ರಂದು, ಕೆನಡಾದಲ್ಲಿ ಏಪ್ರಿಲ್ ಒಂದರಂದು ಚಿತ್ರ
ಬಿಡುಗಡೆಯಾಗುತ್ತಿದೆಯಂತೆ.
“ರಾಜಕುಮಾರ’ ಚಿತ್ರವನ್ನು ಸಂತೋಷ್ ಆನಂದರಾಮ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಪುನೀತ್ ರಾಜಕುಮಾರ್ ಜೊತೆಗೆ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಚಿತ್ರದಲ್ಲಿ ಶರತ್, ಪ್ರಕಾಶ್ ರೈ, ಅನಂತ್ ನಾಗ್, ಅಶೋಕ್, ಭಾರ್ಗವಿ ನಾರಾಯಣ್, ಹೊನ್ನಾವಳ್ಳಿ
ಕೃಷ್ಣ ಸೇರಿದಂತೆ ಸಾಕಷ್ಟು ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.