Advertisement

World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?

03:59 PM May 14, 2024 | ಅರವಿಂದ ನಾವಡ |

ವರ್ಲ್ಡ್ ವಾರ್‌ III ಎರಡು ಮಹಾಯುದ್ಧಗಳನ್ನು ಕಂಡಿರುವ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು? ಇಂಥದೊಂದು ಪ್ರಶ್ನೆಗೆ ಈ ಸಿನಿಮಾದಲ್ಲಿ ಉತ್ತರ ಸಿಗುವುದು ಕಷ್ಟ. ಆದರೆ ಪ್ರತಿಯೊಬ್ಬನೂ ಸಮಾಜದೊಳಗಿನ ವೈರುದ್ಧ್ಯ, ಹಿಂಸೆ ಎಲ್ಲದಕ್ಕೂ ತನ್ನೊಳಗಿನ ಹತಾಶೆ, ಅಸಹಾಯಕತೆಗೆ ಆಸ್ಫೋಟದ ರೂಪ ಕೊಡಬಲ್ಲ, ಅದು ಹೇಗೆ ಸುನಾಮಿ ರೂಪವನ್ನು ಪಡೆಯಬಲ್ಲದು ಎಂಬುದನ್ನು ಸ್ಥೂಲವಾಗಿ ಹೇಳುವ ಪ್ರಯತ್ನ ಈ ಸಿನಿಮಾದಲ್ಲಿ ಕಾಣಬಹುದು.

Advertisement

ಶಕೀಬ್ ಘಮೊಹ್ಸಿನ್ ತನ್ಬಂದೆ ಭೂಕಂಪದಲ್ಲಿ ತನ್ನ ಪತ್ನಿ ಮತ್ತು ಮಗುವನ್ನು ಕಳೆದುಕೊಂಡ ದುರ್ದೈವಿ. ಈಗ ಜೀವನೋಪಾಯಕ್ಕಾಗಿ ನಗರವೊಂದರಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ನಿತ್ಯವೂ ಬೆಳಗ್ಗೆ ನಗರದ ವೃತ್ತವೊಂದರಲ್ಲಿ ನಿಲ್ಲುತ್ತಾನೆ. ಕೆಲಸಕ್ಕೆ ಬೇಕಾದವರು ಬಂದು ವಾಹನಗಳಲ್ಲಿ ಕರೆದೊಯ್ಯುತ್ತಾರೆ. ಈ ಮಧ್ಯೆ ಈತ ಒಬ್ಬಳು ಶ್ರವಣದೋಷವುಳ್ಳ ಹುಡುಗಿಯನ್ನು ಪ್ರೀತಿಸುತ್ತಾನೆ.

ಒಂದು ದಿನ ಬೆಳಗ್ಗೆ ಹೀಗೆಯೇ ವೃತ್ತದಲ್ಲಿ ನಿಂತಾಗ ವಾಹನವೊಂದು ಬಂದು ನಿಲ್ಲುತ್ತದೆ. ಕೂಲಿ ಕೆಲಸಕ್ಕೆಂದು ವಾಹನ ಏರುತ್ತಾನೆ ಶಕೀಬ್. ಆ ವಾಹನ ಅವನನ್ನು ಒಂದು ಸಿನಿಮಾ ಚಿತ್ರೀಕರಣದ ಸ್ಥಳಕ್ಕೆ ತಂದು ನಿಲ್ಲಿಸುತ್ತದೆ. ಚಿತ್ರೀಕರಣಕ್ಕೆ ಬೇಕಾದ ಮನೆಗಳ ನಿರ್ಮಾಣವೂ ಸೇರಿದಂತೆ ಇತರೆ ಕೆಲಸಗಳನ್ನು ನಿರ್ವಹಿಸಬೇಕಾದದ್ದು ಶಕೀಬ್ ನ ಜವಾಬ್ದಾರಿ. ಆ ಸಿನಿಮಾ ಜನಾಂಗೀಯ ಹಿಂಸೆಯ ಹಿನ್ನೆಲೆಯದ್ದು. ಅಡೋಲ್ಫ್ ಹಿಟ್ಲರ್ ನ ಹಿಂಸೆಯ ಕುರಿತಾದ ಸಿನಿಮಾ. ಹಿಟ್ಲರ್ ನ ಪಾತ್ರಧಾರಿ ಚಿತ್ರೀಕರಣ ಸಂದರ್ಭದಲ್ಲೇ ಹೃದಯಾಘಾತಕ್ಕೆ ಒಳಗಾಗುತ್ತಾನೆ. ಅವನಿಗೆ ಆಸ್ಪತ್ರೆಯಲ್ಲಿ ಆರೈಕೆ ಒಂದೆಡೆಯಾದರೆ, ಮತ್ತೊಂದೆಡೆ ಹಿಟ್ಲರ್ ಪಾತ್ರಕ್ಕೆ ಹೊಸಬನನ್ನು ಕರೆತರುವ ಸವಾಲು.

ಈ ಸಂದರ್ಭದಲ್ಲಿ ಚಿತ್ರತಂಡದ ಎದುರಿಗೆ ಸಿಗುವ ಶಕೀಬ್ ಪರಿಹಾರದಂತೆ ತೋರುತ್ತಾನೆ. ಕೂಡಲೇ ಕ್ಯಾಸ್ಟ್ ನಿರ್ದೇಶಕ ಶಕೀಬ್ ನನ್ನು ಕರೆದು ’ನೀನು ಇಂಥ ಪಾತ್ರ ಮಾಡಬೇಕು’ ಎನ್ನುತ್ತಾನೆ. ಅದಕ್ಕೆ ಒಪ್ಪದಿದ್ದರೂ ಬಿಡುವುದಿಲ್ಲ. ಹೆಚ್ಚು ಸಂಬಳದ ಆಮಿಷವೊಡ್ಡಿ ಒಪ್ಪಿಸುತ್ತಾರೆ. ಅಂತಿಮವಾಗಿ ಹಿಟ್ಲರ್ ಪಾತ್ರದಲ್ಲಿ ತನ್ನನ್ನು ಹುದುಗಿಸಿಕೊಳ್ಳುವ ಶಕೀಬ್ ನ ಚಹರೆ ಬದಲಾಗುತ್ತದೆ. ಚಿತ್ರ ತಂಡದವರೂ ಶಕೀಬ್ ನಿಗೆ ತಾತ್ಕಾಲಿಕವಾಗಿ ಪಾತ್ರ ಮುಗಿಯುವಲ್ಲಿವರೆಗೆ ಉಳಿದುಕೊಳ್ಳಲು ಹಿಟ್ಲರ್ ಗೆ ರೂಪಿಸಿದ್ದ ದೊಡ್ಡ ಮನೆಯನ್ನು ಕೊಡುತ್ತಾರೆ.

Advertisement

ಹೊಸ ಕೆಲಸ ಹಾಗೂ ಮನೆಯ ಮಾಹಿತಿ ಪಡೆಯುವ ಪ್ರಿಯತಮೆ ಚಿತ್ರೀಕರಣ ಸ್ಥಳಕ್ಕೆ ಬಂದು ಒಟ್ಟಿಗೆ ಇರುವುದಾಗಿ ತಿಳಿಸುತ್ತಾಳೆ. ಚಿತ್ರತಂಡದವರು ಬೇರೆ ಯಾರನ್ನೂ ಈ ಮನೆಯಲ್ಲಿ ಇರಿಸಿಕೊಳ್ಳುವಂತಿಲ್ಲ ಎಂಬ ಷರತ್ತು ನೆನಪಾಗಿ ಶಕೀಬ್ ಒಲ್ಲೆ ಎನ್ನುತ್ತಾನೆ. ಆದರೆ ಅವಳು ತನ್ನ ಸಂಬಂಧಿಕರ ಕಿರಿಕಿರಿ ವಿವರಿಸಿದಾಗ ಅನಿವಾರ್ಯವಾಗಿ ತಾತ್ಕಾಲಿಕ ಮನೆಯ ಕೆಳಭಾಗದಲ್ಲಿ ಉಳಿದುಕೊಳ್ಳುವಂತೆ ತಿಳಿಸುತ್ತಾನೆ.

ಇದರ ಜಾಡು ಹಿಡಿದ ಆ ಹುಡುಗಿಯ ಸಂಬಂಧಿಕರು ಇವನಲ್ಲಿಗೆ ಬಂದು ದುಡ್ಡು ಕೊಡುವಂತೆ, ಇಲ್ಲದಿದ್ದರೆ ಚಿತ್ರತಂಡಕ್ಕೆ ತಿಳಿಸುವುದಾಗಿಯೂ, ಕೊಲ್ಲುವುದಾಗಿಯೂ ಬೆದರಿಸುತ್ತಾರೆ. ಅಂದಿನ ಚಿತ್ರೀಕರಣ ಮುಗಿದ ಕೂಡಲೇ ದುಡ್ಡು ಹೊಂದಿಸಲು ನಗರಕ್ಕೆ ತೆರಳುವ ಶಕೀಬ್ ವಾಪಸು ಬರುವುದರೊಳಗೆ ಆ ತಾತ್ಕಾಲಿಕ ಮನೆ ಸ್ಫೋಟಗೊಂಡು ಬೂದಿಯಾಗಿರುತ್ತದೆ. ಇದನ್ನು ಕಂಡು ಶಕೀಬ್ ಕಂಗಾಲಾಗುತ್ತಾನೆ. ಅವಳ ಮೂಲಕ ಬದುಕಿಗೊಂದು ಭರವಸೆ ಹುಡುಕುತ್ತಿದ್ದ ಶಕೀಬ್ ಹತಾಶಗೊಳ್ಳುತ್ತಾನೆ. ಈ ಹತಾಶೆ ಒಂದು ಬಗೆಯ ದ್ವೇಷ ರೂಪವನ್ನು ತಾಳುತ್ತದೆ.

ಚಿತ್ರೀಕರಣ ಮುಗಿಸಿ ಹೊರಡುವ ದಿನದ ಸಂದರ್ಭ. ಎಲ್ಲರೂ ಕೊನೆಯ ಭೋಜನಕ್ಕೆ ಕುಳಿತಿರುತ್ತಾರೆ. ಶಕೀಬ್ ಸಹ ಅವರೊಂದಿಗೆ ಕುಳಿತಿರುತ್ತಾನೆ. ಕೋಪ, ಹತಾಶೆ, ದ್ವೇಷ ಎಲ್ಲವೂ ಮಡುಗಟ್ಟಿರುತ್ತದೆ. ಎಲ್ಲರ ತಟ್ಟೆಯಲ್ಲೂ ಬಡಿಸಲಾಗುತ್ತದೆ. ಸೇವಿಸತೊಡಗಿದಂತೆಯೇ ಎಲ್ಲರೂ ವಾಂತಿ ಮಾಡುತ್ತಾ ಕುಸಿಯತೊಡಗುತ್ತಾರೆ. ಇಡೀ ಚಿತ್ರವನ್ನು ನಿರ್ದೇಶಕ ಹೂಮನ್ ಸಯ್ಯದಿ ಕಟ್ಟಿಕೊಟ್ಟ ರೀತಿಯೇ ವಿಭಿನ್ನ. ಸಣ್ಣ ತೊರೆಯಂತೆ ಹರಿಯಲು ಆರಂಭಿಸುವ ಕಥೆಯ ಎಳೆ ಕೊನೆಗೆ ನೆರೆಯಂತೆ ಎಲ್ಲವನ್ನೂ ನುಂಗಿ ಹಾಕುವ ಹೆಬ್ಬಾವಿನಂತೆ ತೋರುತ್ತದೆ. ಪ್ರಳಯ ಸ್ವರೂಪಿಯಂತೆ ಕಾಣುವ ಶಕೀಬ್ ನ ಹತಾಶೆಗೆ ಭರವಸೆಗಳೆಲ್ಲ ಕೊಚ್ಚಿ ಹೋಗುತ್ತವೆ.

ಜನಾಂಗೀಯ ಹಿಂಸೆಯನ್ನು ನಡೆಸಿದ ಹಿಟ್ಲರ್ ನ ತಣ್ಣಗಿನ ಕ್ರೌರ್ಯದ ಮನಸ್ಥಿತಿಗೆ ಶಕೀಬ್ ಸಹ ಬಲಿಯಾಗುವುದು ವಿಪರ್ಯಾಸದ ಸಂಗತಿ. ಹಲವು ದುಃಖಗಳಿಂದ ಜರ್ಝರಿತನಾಗಿರುವ ಕಥಾ ನಾಯಕ ಅದರಿಂದ ಹೊರಬರಲು ನಡೆಸಿದ ಎಲ್ಲ ಯತ್ನಗಳೂ ಕೊನೆಗೆ ಮತ್ತೊಂದು ಘೋರ ತಿರುವಿಗೆ ಬಂದು ನಿಲ್ಲಿಸುವುದು ಸಂದರ್ಭದ ಚೋದ್ಯವೂ ಎನಿಸದಿರದು.
ಹಿಟ್ಲರ್ ಎಂದರೆ ಯಾರು ಗೊತ್ತೇ? – ಇದು ಪಾತ್ರವನ್ನು ಒಪ್ಪಿಕೊಳ್ಳುವ ಮುನ್ನ ನಿರ್ದೇಶಕನು ಶಕೀಬ್ ಗೆ ಕೇಳುವ ಪ್ರಶ್ನೆ. ಅದಕ್ಕೆ ಇಲ್ಲ, ನನಗೆ ಗೊತ್ತಿಲ್ಲ ಎನ್ನುವ ಶಕೀಬ್ ಪಾತ್ರವನ್ನು ಧರಿಸಿ ಮತ್ತೊಂದು ಘೋರ ಅಧ್ಯಾಯಕ್ಕೆ ಕಾರಣನಾದನೇ ಎಂಬುದು ಚಿತ್ರ ನೋಡಿದ ಮೇಲೂ ಉಳಿದುಕೊಳ್ಳುವ ಪ್ರಶ್ನೆ. ಇಲ್ಲಿ ಸಂದರ್ಭಗಳು ಅಂಥದೊಂದು ಅನಿವಾರ್ಯತೆಯನ್ನು ಸೃಷ್ಟಿಸಿದವೋ, ಶಕೀಬ್ ನೊಳಗೆ ನಿಜ ಹಿಟ್ಲರ್ ನನ್ನು ತರಿಸಿತೋ ಅಥವಾ ತನಗರಿವಿಲ್ಲದೇ ಶಕೀಬ್ ಮತ್ತೊಬ್ಬ ಹಿಟ್ಲರ್ ಆದನೋ ಎಂಬುದು ಅವರವರ ಭಾವಕ್ಕೆ ದಕ್ಕುವ ಸಂಗತಿ.

2022 ರಲ್ಲಿ ನಿರ್ಮಾಣಗೊಂಡ ಚಿತ್ರ ವೆನಿಸ್ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿತ್ತು. 2023 ರ ಆಸ್ಕರ್ ನ ಆತ್ಯುತ್ತಮ ವಿದೇಶಿ ಚಲನಚಿತ್ರದ ವಿಭಾಗದ ಸ್ಪರ್ಧೆಗೆ ಇರಾನ್ ದೇಶ ಈ ಚಿತ್ರವನ್ನು ನಾಮ ನಿರ್ದೇಶನ ಮಾಡಿತ್ತು. ಶಕೀಬ್ ಪಾತ್ರದಲ್ಲಿ ಅಭಿನಯಿಸಿದ ಮೊಹಿಸೀನ್ ಇಡೀ ಚಿತ್ರದಲ್ಲಿ ಆವರಿಸಿಕೊಳ್ಳುತ್ತಾರೆ. ತನಗೆ ನಿರ್ವಹಿಸಿದ ಪಾತ್ರವನ್ನು ಅಚ್ಚುಕಟ್ಟಾಗಿ ಒಪ್ಪಿಸಿರುವ ಶಕೀಬ್ ದೃಶ್ಯದಿಂದ ದೃಶ್ಯಕ್ಕೆ ತೀವ್ರಗೊಳ್ಳುವ ಪಾತ್ರದ ಗಂಭೀರತೆಯನ್ನು ಎಲ್ಲೂ ಕಡಿಮೆ ಮಾಡುವುದೇ ಇಲ್ಲ. ಆ ಗಾಂಭೀರ್ಯತೆಯ ಓಘಕ್ಕೆ ತನ್ನನ್ನು ತಾನು ಹೊಂದಿಸಿಕೊಳ್ಳುವ ಪ್ರಯತ್ನ ಎಲ್ಲೂ ನಟನೆ ಎನಿಸುವುದಿಲ್ಲ. ಆದ ಕಾರಣವೇ ಚಿತ್ರ ಮುಗಿದ ಮೇಲೂ ಕಣ್ಣ ಮುಂದೆ ಶಕೀಬ್ ಒಂದು ಪಾತ್ರವಾಗಿಯೇ ಉಳಿದುಕೊಳ್ಳುತ್ತಾನೆ, ಮೊಹ್ಸಿನ್ ಆಗಿಯಲ್ಲ. ಅದೇ ವಿಶೇಷ.

*ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next