ಹೊಸದಿಲ್ಲಿ: ತನ್ನ ಮೇಲಿನ ನಂಬಿಕೆಯನ್ನು ಹಿಮ್ಮೆಟ್ಟಿಸಲು ಯಾವ ಸೋಲಾದರೂ ಸಾಕು. ಆದರೆ ನಾನು ಮತ್ತೆ ಘರ್ಜಿಸಲು ಸಿದ್ಧವಾಗಿರುವುದಾಗಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಹೇಳಿದ್ದಾರೆ. ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನ ಸಿಂಗಲ್ಸ್ ಫೈನಲ್‌ನಲ್ಲಿ ಸಹ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಸೋತು ತವರಿಗೆ ಮರಳಿದ ಬಳಿಕ ಸಿಂಧು ಪ್ರತಿಕ್ರಿಯಿಸಿದ್ದಾರೆ.
ಆಸ್ಟ್ರೇಲಿಯದಲ್ಲಿ ನಡೆದಿದ್ದ 21ನೇ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನಾ ಸಂಮಾರಂಭದ ವೇಳೆ ಧ್ವಜಧಾರಿಯಾಗಿ ಭಾರತ ತಂಡವನ್ನು ಮುನ್ನಡೆಸಿದ್ದ ಸಿಂಧು, ವನಿತಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಅನುಭವಿ ಆಟಗಾರ್ತಿ ಸೈನಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು.
ನ್ಪೋರ್ಟ್ಸ್ ಡ್ರಿಂಕ್ ಗ್ಯಾಟೊರೇಡ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಸಿಂಧು ಕಾಮನ್ವೆಲ್ತ್ ಗೇಮ್ಸ್ ಸೋಲಿನ ಬಳಿಕ ಕೊಂಚ ಭಾವುಕರಾಗಿದ್ದಾರೆ. ಇದನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆಯುವ ಮೂಲಕವೂ ತೋರಿಸಿಕೊಂಡಿದ್ದಾರೆ. “ನನ್ನ ಹೃದಯದಲ್ಲಿ ಬೆಂಕಿಯಿದೆ. ಮುಂದಿನ ಯುದ್ಧದಲ್ಲಿ ವಿಜಯೋತ್ಸವವನ್ನು ಆಚರಿಸುವುದಕ್ಕಾಗಿ ನಾನು ಸೇಡಿನಿಂದ ಕಾಯುತ್ತಿದ್ದೇನೆ. ಮುಂದಿನ ಕೂಟದಲ್ಲಿ ನಾನು ಘರ್ಜಿಸಲಿದ್ದೇನೆ’ ಎಂದು ತನ್ನ ಇನ್‌ಸ್ಟಾಗ್ರಾಂನಲ್ಲಿ ಸಿಂಧು ಹೇಳಿಕೊಂಡಿದ್ದಾರೆ.
“ಒಂದು ಬಾರಿ ಸೋತರೂ ಗೆಲುವಿಗಾಗಿ ಸಾಕಷ್ಟು ದಾರಿಗಳಿವೆ. ಮುಂದಿನ ಕೂಟದ ಸವಾಲನ್ನು ನಾನು ವಿಜಯದೊಂದಿಗೇ ಮುಗಿಸುತ್ತೇನೆ. ಇದು ನನ್ನ ಪಯಣ. ಇದೇ ಕ್ರೀಡಾಪಟುಗಳ ಪಯಣ. ಮುಂದಿನ ಹಂತದಲ್ಲಿ ನಾನು ಎದುರಾಳಿಗೆ ಶೂನ್ಯ ಅಂಕ ನೀಡುವುದರೊಂದಿಗೆ ಗುರಿ ತಲುಪುತ್ತೇನೆ’ ಎಂಬ ಸಾಲನ್ನೂ ತನ್ನ ಇನ್‌ಸ್ಟಾಗ್ರಾಂನಲ್ಲಿ ಸಿಂಧು ಸೇರಿಸಿಕೊಂಡಿದ್ದಾರೆ.