( ತೊಂಡೆಕಾಯಿ ಇದ್ದರೆ ಚೆನ್ನಾಗಿ ಭೋಜನ ಮಾಡಬಹುದು) ಇದು ತುಳುವರ ಜನಪ್ರಿಯ ಮಾತು. ಪಲ್ಯಕ್ಕೆ ಹೆಚ್ಚಾಗಿ ಬಳಕೆಯಾಗುವ ಇದು ಅತ್ಯಂತ ರುಚಿಕರ ಆಹಾರವಸ್ತು. ಕರಾವಳಿಯ ಹೆಚ್ಚಿನ ಮನೆಯಲ್ಲಿ ಭೋಜನಕ್ಕೆ ಅಗತ್ಯಬಳಕೆಯ ತರಕಾರಿ. ಉಪಬೆಳೆಯಾಗಿ ಹಾಗೂ ಹೆಚ್ಚು ಶ್ರಮವಿಲ್ಲದೆ ಇದನ್ನು ಬೆಳೆಯಬಹುದಾದ. ಸಣ್ಣ ಬಂಡವಾಳ ಈ ಕೃಷಿಗೆ ಸಾಕು.
Advertisement
ಆಗಸ್ಟ್ ತಿಂಗಳು (ತುಳುವಿನ ಸೋಣ) ಇದರ ನಾಟಿಗೆ ಸೂಕ್ತ ಕಾಲ. ಸೋಣ ಮಾಸದ ಹುಣ್ಣಿಮೆಯ ಹಿಂದಿನ ದಿನದಂದು (ಪೂವೆ ದಿನ) ನಾಟಿಗೆ ತುಳುನಾಡಿನ ಕೃಷಿಕರು ಹೆಚ್ಚಿನ ಒತ್ತು ನೀಡುತ್ತಾರೆ. ಅಂದು ನಾಟಿ ಮಾಡಿದರೆ ಹೆಚ್ಚು ಇಳುವರಿಯಾಗುತ್ತದೆ ಎಂಬ ತುಳುವರ ನಂಬಿಕೆಯ ಹಿಂದೆ ತೊಂಡೆ ಬಳ್ಳಿಯ ಏಳ್ಗೆಗೆ ಸೂಕ್ತ ಕಾಲ ಎಂಬ ವೈಜ್ಞಾನಿಕ ಲೆಕ್ಕಾಚಾರವಿದೆ.
ಒಂದೂವರೆ ಅಡಿ ವಿಸ್ತೀರ್ಣದ ಹೊಂಡದ ಮಧ್ಯದಲ್ಲಿ ಒಂದು ಬಹುಗಂಟಿಗಳಿರುವ ಪೊದೆಯಾಕಾರದ ಚಿಕ್ಕ ಮರದ ಕಂಬವೊಂದನ್ನು ನೆಡಬೇಕು. ಒಂದು ಅಡಿ ಉದ್ದವಾದ ಬಳ್ಳಿಯ ಎರಡು ಗಂಟುಗಳನ್ನು ಮಣ್ಣಿನಲ್ಲಿರುವಂತೆ ಹೂಳಬೇಕು. ಒಂದು ಹೊಂಡದಲ್ಲಿ ಗರಿಷ್ಠ ನಾಲ್ಕು ಬಳ್ಳಿಗಳನ್ನು ಹೂಳಬಹುದು. ಎರಡು ಗಂಟುಗಳಲ್ಲಿ ಹೊರಡುವ ಬೇರುಗಳು ಮುಂದೆ ಸೊಗಸಾಗಿ ಬೆಳೆದು ಇಳುವರಿ ನೀಡಲು ಅವಶ್ಯಕ. ನಾಟಿ ಬಳಿಕ ಸೆಗಣಿ ನೀರು ಹಾಕಿ ಸೊಪ್ಪಿನಿಂದ ಮುಚ್ಚಬೇಕು. ಸಾಮಾನ್ಯ ಒಂದೂವರೆ ತಿಂಗಳ ಅವಧಿಯಲ್ಲಿ ಆಳೆತ್ತರಕ್ಕೆ ಸೊಗಸಾಗಿ ಬೆಳೆಯುತ್ತದೆ. ಈ ವೇಳೆ ಕೋಳಿ, ಹಟ್ಟಿಗೊಬ್ಬರ, ನೆಲಗಡೆ ಹಿಂಡಿಗಳನ್ನು ನೀಡಬೇಕು. ಚಪ್ಪರ ಹಾಕಬಹುದು
ಎರಡು ಕಂಬ ನೆಟ್ಟು ಮಧ್ಯದಲ್ಲಿ ಒಂದು ತಂತಿಯ ಮೂಲಕ ಬಳ್ಳಿ ಹಬ್ಬಲು ಬಿಡಬೇಕು. ಸಾಧ್ಯವಿದ್ದಲ್ಲಿ 8- 10 ಅಡಿ ಎತ್ತರವಿರುವ ಚಪ್ಪರ ಹಾಕಿದರು ಅಡ್ಡಿಯಿಲ್ಲ. ಹೆಚ್ಚು ಕೃಷಿ ಮಾಡುವುದಾದರೆ ಒಂದು ಹೊಂಡದಿಂದ ಐದಾರು ಅಡಿ ದೂರದಲ್ಲಿ ಮತ್ತೂಂದು ಹೊಂಡ ತೆಗೆದು ನೆಡಬಹುದು.
Related Articles
ಒಂದು ಬಾರಿ ನಾಟಿ ಮಾಡಿದರೆ ನಾಲ್ಕೈದು ವರ್ಷಗಳ ಕಾಲಕ್ಕೆ ಹೊಸ ಬಳ್ಳಿಯ ನಾಟಿ ಅವಶ್ಯವಿಲ್ಲ, ಒಮ್ಮೆ ಚಪ್ಪರದಲ್ಲಿ ಹಬ್ಬಿದ ಗಿಡವನ್ನು ನಾಟಿಯ ಅವಧಿಯಲ್ಲಿ ಬುಡದಿಂದ ಒಂದಡಿ ಎತ್ತರದಲ್ಲಿ ಕತ್ತರಿಸಿ ತೆಗೆದರೆ ಸಾಕು. ಮತ್ತೆ ಚಿಗುರಿದ ಬಳ್ಳಿಗೆ ಎಂದಿನಂತೆ ಆಗಾಗ್ಗೆ ನೆಲಕಡಲೆ, ಹಟ್ಟಿಗೊಬ್ಬರ, ಕೋಳಿಗೊಬ್ಬರ ನೀಡಿದರೆ ಸಾಕು. ರಾಸಾಯನಿಕ ಗೊಬ್ಬರಗಳಿಗಿಂತ ಸಾವಯವ ಗೊಬ್ಬರ ಸೂಕ್ತ. ಹೆಚ್ಚೇನು ರೋಗಬಾಧಿಸದ ಬಳ್ಳಿಗೆ ಹುಳು, ಮಿಡತೆ ಕಾಟ ಬಾಧಿಸದಂತೆ ಒಲೆಯ ಬೆಚ್ಚಗಿನ ಬೂದಿ ಹರಡಿದರೆ ಉತ್ತಮ ಔಷಧ. ಹೆಚ್ಚು ಸೊಪ್ಪು ತುಂಬಿದಾಗ ಬಲಿತ ಎಲೆಯನ್ನು ಚಿವುಟಿ ತೆಗೆದಾಗ ಹೆಚ್ಚಿನ ಹೂ ಬಿಟ್ಟು ಫಸಲು ಹೆಚ್ಚು ದೊರೆಯುತ್ತದೆ. ನಾಲ್ಕು ಬಳ್ಳಿಯಿರುವ ಒಂದು ಬುಡದಲ್ಲಿ ವಾರಕ್ಕೆ 10 ಕೆ.ಜಿ.ಯ ಇಳುವರಿ ಸಾಧ್ಯ. ಸಾಮಾನ್ಯವಾಗಿ 10 – 15 ರೂ. ದರವಿರುವ ತೊಂಡೆಗೆ ಡಿಸೆಂಬರ್ ತಿಂಗಳ ಬಳಿಕ ಮಕರ ಸಂಕ್ರಮಣ ಅವಧಿಯಲ್ಲಿ ಗರಿಷ್ಠ ದರ 20 ರೂ. ನಷ್ಟು ಏರಿಕೆಯಾಗುತ್ತದೆ.
Advertisement
ಔಷಧೀಯ ಗುಣಗಳುತೊಂಡೆಕಾಯಿ ವಾರಕ್ಕೊಮ್ಮೆ ಆಹಾರದಲ್ಲಿ ಬಳಕೆಯಾದರೆ ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಫೈಬರ್ ಅಂಶ ಹೆಚ್ಚು. ಹೀಗಾಗಿ ಕಿಡ್ನಿ ಸಮಸ್ಯೆ ಹಾಗೂ ಮಧುಮೇಹಕ್ಕೆ ಇದು ರಾಮಬಾಣ. ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಋತುಸ್ರಾವದ ಸಂದರ್ಭದಲ್ಲಿ ಮುಟ್ಟಿನ ನೋವನ್ನು ಕಡಿಮೆಗೊಳಿಸುತ್ತದೆ. ಕ್ಯಾಲೋರಿ ಅಂಶ ಕಡಿಮೆಯಿರುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. – ಭರತ್ ಕನ್ನಡ್ಕ