Advertisement

Puttur: ಸರ್ವೆ ಗೌರಿ ಹೊಳೆ ಬಳಿ ಬೈಕ್‌ ಇರಿಸಿ ಯುವಕ ನಾಪತ್ತೆ

08:34 PM Jul 20, 2024 | Team Udayavani |

ಪುತ್ತೂರು/ಸವಣೂರು: ಸರ್ವೆ ಬಳಿಯ ಗೌರಿ ಹೊಳೆಯ ಸಮೀಪ ಶುಕ್ರವಾರ ರಾತ್ರಿ ಸ್ಕೂಟಿ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದು, ಹೊಳೆಗೆ ಹಾರಿರುವ ಶಂಕೆಯಿಂದ ಅಗ್ನಿಶಾಮಕ ದಳದವರು ಶನಿವಾರ  ಶೋಧ ಕಾರ್ಯ ನಡೆಸಿದ್ದು, ಸಂಜೆ ತನಕ ಯಾವುದೇ ಸುಳಿವು ಸಿಕ್ಕಿಲ್ಲ.

Advertisement

ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರ ಗೌಡ ಅವರ ಪುತ್ರ, ಮುಕ್ರಂಪಾಡಿಯ ಇಂಡಸ್ಟ್ರಿಯಲ್‌ ಎಸ್ಟೇಟ್‌ ಬಳಿಯ ಮಹೀಂದ್ರ ಶೋರೂಂನ ಉದ್ಯೋಗಿ ಸನ್ಮಿತ್‌ ಟಿ. (21) ನಾಪತ್ತೆಯಾದವರು. ಅವರಿಗೆ ಸೇರಿದ ಡಿಯೋ ಸ್ಕೂಟರ್‌ ಹೊಳೆಯ ಬದಿಯಿಂದ 150 ಮೀ. ದೂರದಲ್ಲಿ ಪತ್ತೆಯಾಗಿದೆ. ಬೈಕ್‌ನಲ್ಲಿ ಮೊಬೈಲ್‌, ಪರ್ಸ್‌, ಹೆಲ್ಮೆಟ್‌, ಟಿಫಿನ್‌ ಬಾಕ್ಸ್‌ ಕಂಡು ಬಂದಿದೆ.

ತಂದೆಗೆ ಕರೆ ಮಾಡಿದ್ದ

ಸನ್ಮಿತ್‌ ಪ್ರತಿದಿನ ಬಸ್‌ನಲ್ಲಿ ಮುಕ್ರಂಪಾಡಿಗೆ ತೆರಳುತ್ತಿದ್ದರು. ಶುಕ್ರವಾರ ಕೆಲಸ ಜಾಸ್ತಿ ಇದ್ದು ಬರುವಾಗ ರಾತ್ರಿ ಆಗಬಹುದು ಎಂದು  ಸ್ಕೂಟಿ ತೆಗೆದುಕೊಂಡು ಹೋಗಿದ್ದರು.  ಪ್ರತಿದಿನ ಸಂಜೆ 6.30ರ ವೇಳೆಗೆ ಮನೆಗೆ ಬರುತ್ತಿದ್ದ ಸನ್ಮಿತ್‌  ಶುಕ್ರವಾರ ತಂದೆಗೆ ಕರೆ ಮಾಡಿ, ಹೆಚ್ಚು ಕೆಲಸವಿರುವ ಕಾರಣ ಮನೆಗೆ ಬರುವಾದ  ರಾತ್ರಿ 10 ಗಂಟೆಯಾಗಬಹುದು ಎಂದು ತಿಳಿಸಿದ್ದರು. 9.30ರ ಹೊತ್ತಿಗೆ ಮತ್ತೆ ಕರೆ ಮಾಡಿದಾಗ  ಅರ್ಧ ಗಂಟೆಯಲ್ಲಿ ಬರುವುದಾಗಿ ಹೇಳಿದ್ದರು.  ರಾತ್ರಿ 11 ಗಂಟೆಯಾದರೂ  ಬಾರದೆ ಇದ್ದಾಗ ಮತ್ತೆ ಕರೆ ಮಾಡಿದ್ದರು. ಆದರೆ  ಕರೆ ಸ್ವೀಕರಿಸಿರಲಿಲ್ಲ.

ಹುಡುಕುತ್ತಿದ್ದಾಗ ಬೈಕ್‌ ಪತ್ತೆ: 

Advertisement

ರಾತ್ರಿ 1 ಗಂಟೆಯ ತನಕವೂ ಸನ್ಮಿತ್‌ ನ ಸುಳಿವು ಇಲ್ಲದಿದ್ದಾಗ ತಂದೆ ಚಂದ್ರ ಗೌಡರು ಆತನ ಶೋರೂಂನ ಉದ್ಯೋಗಿ, ನೆರೆಮನೆಯ ಯುವಕನನ್ನು ಸಂಪರ್ಕಿಸಿ ಹುಡುಕಾಟ ಆರಂಭಿಸಿದ್ದಾರೆ. ಮುಕ್ರಂಪಾಡಿಯ ಶೋರೂಂಗೆ ಹೊರಟ ಅವರಿಬ್ಬರೂ ಸರ್ವೆ ಹೊಳೆ ಬಳಿ ತಲುಪಿದಾಗ ಸನ್ಮಿತ್‌ ನ ಸ್ಕೂಟಿ ಕಂಡು ಬಂದಿದೆ.  ಕೂಡಲೇ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ಸನ್ಮಿತ್‌ಗೆ ಸೇರಿದ ಇನ್ನಷ್ಟು ವಸ್ತುಗಳು ಅಲ್ಲಿ ಪತ್ತೆಯಾಗಿವೆ.

ಅಗ್ನಿಶಾಮಕ ದಳ ಆಗಮನ: 

ಜು.21ರಂದು ಬೆಳಗ್ಗೆ ಸಂಪ್ಯ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ಆರಂಭಿಸಿದ್ದಾರೆ.  ಎರಡು ಬೋಟ್‌ಗಳಲ್ಲಿ ಸುಮಾರು ಮೂರೂವರೆ ಕಿ.ಮೀ. ದೂರ ಶೋಧ ನಡೆಸಲಾಗಿದ್ದು, ಯಾವುದೇ ಸುಳಿವು ಪತ್ತೆಯಾಗಿಲ್ಲ.

ಅಪಘಾತಕ್ಕೆ ಒಳಗಾಗಿದ್ದ: 

ಸನ್ಮಿತ್‌ ಒಂದು ವರ್ಷ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಬಳಿಕ  ಊರಿಗೆ ಬಂದು ಮುಕ್ರಂಪಾಡಿಯಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲವು ತಿಂಗಳ ಹಿಂದೆ ಅವರ ಸ್ಕೂಟರ್‌ ಗಡಿಪಿಲ ಬಳಿ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದರು.  ಚೇತರಿಸಿಕೊಂಡ ಬಳಿಕ  ಮೂರು ತಿಂಗಳ ಹಿಂದೆಯಷ್ಟೇ ಮತ್ತೆ ಕೆಲಸಕ್ಕೆ ಸೇರಿದ್ದರು. ಅಪಘಾತದ ಬಳಿಕ ಇದೇ ಮೊದಲ ಬಾರಿಗೆ ಸ್ಕೂಟಿಯಲ್ಲಿ ತೆರಳಿದ್ದರು ಎನ್ನಲಾಗಿದೆ.

ಮರೆವು ಇತ್ತು: 

ಅಪಘಾತದ ತೀವ್ರತೆಯಿಂದ ಸನ್ಮಿತ್‌ನ ತಲೆಭಾಗಕ್ಕೆ ಏಟು ತಗಲಿತ್ತು. ಗುಣಮುಖವಾದ ಬಳಿಕ ಆತನಿಗೆ ಸ್ವಲ್ಪ ಮರೆವಿನ ಸಮಸ್ಯೆ ಇತ್ತು. ಆರೋಗ್ಯದಲ್ಲಿ ಬೇರೇನೂ ಸಮಸ್ಯೆ ಇರಲಿಲ್ಲ. ಆರ್ಥಿಕ ಸಮಸ್ಯೆಯೂ ಇರಲಿಲ್ಲ ಎಂದು  ಚಂದ್ರ ಗೌಡ ತಿಳಿಸಿದ್ದಾರೆ. ಸ್ಕೂಟಿ ಅಪಘಾತಕ್ಕೆ ಸಂಬಂಧಿಸಿ ಇನ್ಸೂರೆನ್ಸ್‌ ವಿಷಯಕ್ಕೆ ಸಂಬಂಧಿಸಿ ಶನಿವಾರ ಸನ್ಮಿತ್‌  ತಂದೆಯ ಜತೆ ಮಂಗಳೂರಿನ ಕೋರ್ಟ್‌ಗೆ ಹೋಗುವವರಿದ್ದರು ಎನ್ನಲಾಗಿದೆ. ಹಾಗಾಗಿ ಅವರು ಶನಿವಾರ ಕಚೇರಿಗೆ ರಜೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next