ಧಾರವಾಡ: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಶಾಸಕ ಅಮೃತ ದೇಸಾಯಿ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಶಿವಳ್ಳಿ ಗ್ರಾಮದ ರೈತರಾದ ಮಾಯಪ್ಪ ಕುಪ್ಪಣ್ಣವರ ಮತ್ತು ಬಸವರಾಜ ಮೊರಬದ ಅವರ ಹೊಲಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದರು.
ಬಳಿಕ ಮಾರಡಗಿ, ಕೋಟೂರ, ಗುಳೇದಕೊಪ್ಪ ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಮಳೆಯಿಂದ ಹಾಳಾದ ಹೊಲ ಮತ್ತು ಬೆಳೆ, ರಸ್ತೆ, ಸೇತುವೆಗಳನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಟಿಯಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ರೈತರ ಹೊಲದಲ್ಲಿನ ಮುಂಗಾರು ಹಂಗಾಮಿನ ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಹಿಂಗಾರು ಹಂಗಾಮಿನ ಗೋ ದಿ, ಕಡಲೆ, ಜೋಳ, ಈರುಳ್ಳಿ ಇನ್ನಿತರ ಬೆಳೆಗಳು ಬಹುತೇಕ ನಾಶವಾಗಿವೆ. ಇದಲ್ಲದೇ ಹಲವೆಡೆ ರಸ್ತೆಗಳು ಸಹ ಹಾನಿಗೊಂಡಿವೆ. ಯಾವುದೇ ಸರಕಾರ ಇದ್ದರೂ ರೈತನ ನಷ್ಟ ಭರಿಸಲು ಸಾಧ್ಯವಿಲ್ಲ. ನಮ್ಮ ಸರಕಾರ ರೈತರಿಗೆ ಸೂಕ್ತ ನೆರವು ನೀಡಲು ಸಿದ್ಧವಿದೆ ಎಂದರು.
ಪುಷ್ಪ ಕೃಷಿ ಕೈಕೊಂಡಿರುವ ಕುರುಬಗಟ್ಟಿ, ಮಂಗಳಗಟ್ಟಿ, ಲೋಕೂರು, ಶಿಬಾರಗಟ್ಟಿ ಇನ್ನಿತರ ಗ್ರಾಮಗಳ ರೈತರಿಗೆ ಮಳೆಯಿಂದ ಹಾನಿಯಾಗಿದೆ. ನಾಳೆ ಆ ಗ್ರಾಮಗಳ ರೈತರ ಹೊಲಗಳಿಗೂ ಭೇಟಿ ನೀಡುವುದಾಗಿ ಶಾಸಕರು ತಿಳಿಸಿದರು.
ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ತಾಲೂಕಿನಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಎಂಜಿನಿಯರ್ ಇರುವ ತಂಡಗಳು ಪ್ರತಿದಿನ ಸಮೀಕ್ಷೆ ಕಾರ್ಯ ನಡೆಸುತ್ತಿವೆ. ನ.25ರವರೆಗೆ ಮಾಡಿದ ಸಮೀಕ್ಷೆ ಪ್ರಕಾರ ಧಾರವಾಡ ಹೋಬಳಿಯಲ್ಲಿ 5429.20, ಅಮ್ಮಿನಬಾವಿ ಹೋಬಳಿಯಲ್ಲಿ 9839.36 ಮತ್ತು ಗರಗ ಹೋಬಳಿಯಲ್ಲಿ 3463.25 ಹೆಕ್ಟೇರ್ ಸೇರಿದಂತೆ ತಾಲೂಕಿನಲ್ಲಿ ಒಟ್ಟು 18731.81 ಹೆಕ್ಟೇರ್ ಜಮೀನಿನಲ್ಲಿರುವ ಭತ್ತ, ಗೋವಿನ ಜೋಳ, ಜೋಳ, ಉದ್ದು, ಹೆಸರು, ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಹೂವು ಬೆಳೆ ನಾಶವಾಗಿವೆ ಎಂದರು.
ತಹಶೀಲ್ದಾರ್ ಡಾ| ಸಂತೋಷ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಸಿ.ಜಿ. ಮೇತ್ರಿ, ಅಮ್ಮಿನಬಾವಿ ಹೋಬಳಿ ಕಂದಾಯ ನಿರೀಕ್ಷಕ ಆನಂದ ಆನಿಕಿವಿ ಹಾಗೂ ಮುಖಂಡರಾದ ಗಂಗಾಧರ ಪಾಟೀಲ ಕುಲಕರ್ಣಿ, ಗುರುನಾಥಗೌಡ ಗೌಡರ, ಸಂತೋಷಗೌಡ ಪಾಟೀಲ, ಶಿವು ಬೆಳಾರದ, ಬಸವರಾಜ ತಂಬಾಕದ, ಪರಮೇಶ್ವರ ಬಡಿಗೇರ, ರಾಜು ಮುದ್ದಿ ಇನ್ನಿತರರಿದ್ದರು.