ಬೆಂಗಳೂರು: ರಾಜ್ಯವು ಸಮರ್ಥವಾದ ಇ.ಎಸ್.ಡಿ.ಎಂ. ನೀತಿಯನ್ನು ಈಗಾಗಲೇ ಜಾರಿಗೆ ತಂದಿದ್ದು, ಸೆಮಿಕಂಡಕ್ಟರ್ ಉದ್ದಿಮೆಗಳಿಗೆ ಅಗತ್ಯ ಬಿದ್ದರೆ ಹೆಚ್ಚಿನ ಭೂಮಿಯನ್ನು ಒದಗಿಸಲು ಸಿದ್ಧ ಎಂದು ಐಟಿ ಮತ್ತು ಬಿಟಿ ಸಚಿವ ಡಾ| ಸಿ. ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಪ್ರಪ್ರಥಮ “ಸೆಮಿಕಾನ್ ಇಂಡಿಯಾ’ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರವು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡುತ್ತಿದೆ. ರಾಜ್ಯವು ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದ್ದು, ವಿದ್ಯುನ್ಮಾನ ವಲಯಕ್ಕೆ ಪ್ರೋತ್ಸಾಹ ನೀಡುತ್ತಿದೆ. ದೇಶದಲ್ಲಿ ಎಲೆಕ್ಟ್ರಾನಿಕ್ ಡಿಸೈನ್ ವಲಯದಲ್ಲಿ ಶೇ.40ರಷ್ಟು ಕಂಪೆನಿಗಳು ಬೆಂಗಳೂರು ನಗರದಲ್ಲಿ ನೆಲೆಗೊಂಡಿವೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರವು ಈ ಸಮಾವೇಶವನ್ನು ಬೆಂಗಳೂರಿನಲ್ಲಿ ಏರ್ಪಡಿಸುವ ಮೂಲಕ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಸರಕಾರವು ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಉದ್ದಿಮೆಗಳಿಗೆ ನೀಡುತ್ತಿರುವ ನೆರವಿನ ವ್ಯವಸ್ಥೆ ಬೇರೆಲ್ಲೂ ಇಲ್ಲ ಎಂದರು.