Advertisement

ಕುಮಟಾ ಜೈಲಭರೋ ಹೋರಾಟಕ್ಕೆ  ಸಿದ್ಧತೆ 

11:16 AM Feb 28, 2019 | |

ಕಾರವಾರ: ಅರಣ್ಯವಾಸಿಯು ಅರಣ್ಯದ ಅವಿಭಾಜ್ಯ ಅಂಗವಾಗಿದ್ದು, ಪರಿಸರಕ್ಕೆ ಹೊಂದಿಕೊಂಡಿರುವುದರಿಂದ ಅರಣ್ಯಭೂಮಿ ಮೇಲೆ ಅವಲಂಬಿತವಾಗಿರುವ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ಅಗತ್ಯ ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಅಭಿಪ್ರಾಯಪಟ್ಟರು. ಅವರು ಕಾರವಾರ ತಾಲೂಕಿನ ವಿವಿಧ ಅರಣ್ಯವಾಸಿ ಪ್ರದೇಶಗಳಿಗೆ ಭೇಟಿ ನೀಡಿ ಅರಣ್ಯ ಅತಿಕ್ರಮಣದಾರರಲ್ಲಿ ಜಾಗೃತಿ ಮೂಡಿಸಿದರು. ಮಾ.2 ರಂದು ಕುಮಟಾದಲ್ಲಿ ಜರುಗಲಿರುವ ರ್ಯಾಲಿ ಮತ್ತು ಜೈಲ್‌ ಭರೋ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

Advertisement

ಅರಣ್ಯ ರಕ್ಷಣೆ ಹಾಗೂ ಪೋಷಣೆ ಜೊತೆಯಲ್ಲಿ ಅರಣ್ಯವಾಸಿಗಳ ಜೀವನೋಪಾಯಕ್ಕೆ ಕೃಷಿ ಚಟುವಟಿಕೆಗೂ ಕಾನೂನು ಬದ್ಧವಾಗಿ ಅನುಕೂಲತೆ ಮಾಡಿದಾಗ ಮಾತ್ರ ಅರಣ್ಯವಾಸಿಗಳ ಭೂಮಿ ಹೆಚ್ಚಿನ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ನಾಯ್ಕ ಹೇಳಿದರು.

ಕುಮಟಾದಲ್ಲಿ ನಡೆವ ರ್ಯಾಲಿಯಲ್ಲಿ ಬದಲೀ ಕಾನೂನು ವ್ಯವಸ್ಥೆ ಅಥವಾ ಪುನರ್‌ ವಸತಿಗೆ ಆಗ್ರಹಿಸಲಾಗುವುದು.  ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ತಿರಸ್ಕರಿಸಿರುವುದರಿಂದ ಸರ್ಕಾರವೇ ಸ್ವ ಪ್ರೇರಣೆಯಿಂದ ಪುನರ್‌ ಪರಿಶೀಲನೆಗೆ ಒಳಪಡಿಸಬೇಕು. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಣ್ಯವಾಸಿಗಳ ಪರ ತೆಗೆದುಕೊಂಡ ನಿಲುವನ್ನು ತಕ್ಷಣ ಸಾರ್ವಜನಿಕರಿಗೆ ತಿಳಿಸಬೇಕೆಂದು ಪ್ರಕಟಿಸಲು ಒತ್ತಾಯಿಸಲಾಗುವುದೆಂದು ರವೀಂದ್ರ ನಾಯ್ಕ ಹೇಳಿದರು.

ಮೇಲ್ಮನವಿಗೆ ಆಗ್ರಹ: ಸವೋಚ್ಚ ನ್ಯಾಯಾಲಯವು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರಣ್ಯ ಒತ್ತುವರಿ ಪ್ರದೇಶವನ್ನು ಒಕ್ಕಲೆಬ್ಬಿಸಿ ಪ್ರಮಾಣಪತ್ರ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿರುವ ಹಿನ್ನೆಲೆಯಲ್ಲಿ ತಿರಸ್ಕರಿಸಿಕೊಂಡ ಅರಣ್ಯವಾಸಿಗಳು ತಕ್ಷಣ ಮೇಲ್ಮನವಿ ಸಲ್ಲಿಸಬೇಕು. ಮೇಲ್ಮನವಿ ಸಲ್ಲಿಸುವುದರಿಂದ ಒಕ್ಕಲೆಬ್ಬಿಸುವಿಕೆಯಿಂದ ವಿನಾಯತಿ ದೊರಕುವುದೆಂದು ರವೀಂದ್ರ ನಾಯ್ಕ ಹೇಳಿದರು.

ಕಮಲಾಕರ ಸುಧೀರ ಅಸ್ನೋಟಿ, ರಾಮಾ ಕುಣಬಿ ಹರೂರು, ಸಾಂತಾ ದೇಸಾಯಿ, ಶೋಭಾ ತಾಮ್ಸೆ, ಮುಕುಂದ ನಾಯ್ಕ ಕೆರೋಡಿ, ಉಷಾ ಕಲ್ಗುಟಕರ ಗೋಟೆಗಾಳಿ, ಶೃತಿ ಪ್ರಭಾಕರ, ಉಷಾ ಕಾಂಬಳೆ, ಶೋಭಾ ತಾಮ್ಸೆ  ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next