ಹಾವೇರಿ: ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾದರೂ ಎಲ್ಲ ಸವಾಲುಗಳನ್ನು ಎದುರಿಸಲು ಎಲ್ಲ ರೀತಿಯಿಂದಲೂ ಸಮರ್ಥವಾಗಿದ್ದೇವೆ. ಜಿಲ್ಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ವೈದ್ಯಕೀಯ ವ್ಯವಸ್ಥೆಗಳು ಮಾಡಿಕೊಳ್ಳಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ನೂತನ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿ.ಆರ್.ಡಿ.ಎಲ್.) ಹಾಗೂ ಐ.ಸಿ.ಯು. ವಾರ್ಡ್ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 16 ವೆಂಟಿಲೇಟರ್ ಐ.ಸಿ.ಯು. ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಐದು ವೆಂಟಿಲೇಟರ್ ಬೇಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಶೇಷವಾಗಿ ಕೋವಿಡ್ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ 50 ಬೆಡ್ ಹಾಗೂ ಸವಣೂರಲ್ಲಿ 30 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ 10ರಿಂದ 15 ಬೆಡ್ ಗಳ ಸೇರ್ಪಡೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದರು.
ಇಂದು ಉದ್ಘಾಟನೆಗೊಂಡ ವಿ.ಆರ್.ಡಿ. ಲ್ಯಾಬ್ ಕೋವಿಡ್ ಸೋಂಕಿಗೆ ಮಾತ್ರವಲ್ಲದೆ ಇತರೆ ಸೋಂಕುಗಳ ತಪಾಸಣೆಗೂ ಅನುಕೂಲವಾಗಿದೆ. ವೈರಲ್ ಇನ್‌ಫೆಕ್ಸ್, ಡೆಂಘೀ, ವೆಲಿಸಾ ಹಾಗೂ ಎಚ್.ವಿ.ಸೋಂಕು ತಪಾಸಣೆಗೆ ಅನುಕೂಲವಾಗಲಿದೆ. ವಿ.ಆರ್.ಡಿ. ಲ್ಯಾಬ್‌ನಲ್ಲಿ ಒಂದು ಶಿಫ್ಟ್‌ನಲ್ಲಿ 100ರಂತೆ ದಿನವೊಂದಕ್ಕೆ 300 ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಆರಂಭದಲ್ಲಿ 50 ರಿಂದ 60 ಮಾದರಿಗಳನ್ನು ಪರೀಕ್ಷೆ ನಡೆಸಲಾಗುವುದು. ಮೈಕ್ರೋಬಯೋಲೆಜಿಸ್ಟ್, ಪ್ರಯೋಗಾಲಯ ತಂತ್ರಜ್ಞರ ಅನುಭವ ಮತ್ತು ಸಾಮರ್ಥ್ಯಕ್ಕನುಸಾರವಾಗಿ ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂದರು.
ಕೋವಿಡ್ ಸೋಂಕು ದೃಢಪಡಿಸಿಕೊಳ್ಳಲು ಗಂಟಲು ದ್ರವ ಹಾಗೂ ರಕ್ತಮಾದರಿ ಪರೀಕ್ಷೆಗೆಗಾಗಿ ಹಾವೇರಿಯಲ್ಲಿ ಲ್ಯಾಬ್ ಇಲ್ಲದೆ ಇಷ್ಟುದಿನ ಬೇರೆ ಬೇರೆ ಜಿಲ್ಲೆಗೆ ಕಳುಹಿಸಬೇಕಾಗಿತ್ತು. ಇನ್ನುಮುಂದೆ ಜಿಲ್ಲಾ ಆಸ್ಪತ್ರೆಯಲ್ಲೇ ಮಾದರಿಗಳ ಪರೀಕ್ಷೆ ನಡೆಯಲಿದೆ. ಕೋವಿಡ್ ಅಲ್ಲದೆ ಇತರ ವೈರಾಣು ಪರೀಕ್ಷೆಗಳು ಇಲ್ಲಿಯೇ ನಡೆಸಬಹುದಾಗಿದೆ. ಮೊದಲ ದಿನವಾದ ಇಂದು ಪ್ರಾಯೋಗಿಕವಾಗಿ ಐದು ಕೇಸ್‌ಗಳ ಪರೀಕ್ಷೆ ನಡೆಸಿ ನಿಮಾನ್ಸ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಸಂಸದ ಶಿವಕುಮಾರ ಉದಾಸಿ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಂದ್ರ ದೊಡ್ಮನಿ, ಪ್ರಭಾರಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಎಸ್. ಹಾವನೂರ, ಡಾ| ಸುರೇಶ ಪೂಜಾರ ಇತರ ಅಧಿಕಾರಿಗಳು ಇದ್ದರು.