ಶಿಡ್ಲಘಟ್ಟ: ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅಥವಾ ಅವರ ಪುತ್ರ ಡಾ.ಶಶಿಧರ್ ಮುನಿಯಪ್ಪ ಸ್ಪರ್ಧಿಸದಿದ್ದರೇ ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಕೊತ್ತನೂರು ಪಂಚಾಕ್ಷರಿರೆಡ್ಡಿ ಹೇಳಿದರು.
ತಾಲೂಕಿನ ಕೊತ್ತನೂರು ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರ ಕುಟುಂಬದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದಾದರೆ ಸ್ಥಳೀಯರಿಗೆ ಆದ್ಯತೆ ಮೇರೆಗೆ ಅವಕಾಶ ಕೊಡಲಿ, ನನಗೂ ಅವಕಾಶ ಕೊಟ್ಟರೆ ನಾನೂ ಸ್ಪರ್ಧಿಸಲು ಸಿದ್ಧನಿದ್ದೇನೆ, ನಮ್ಮ ತಾತನವರು ಆಗಿನ ಕಾಲಕ್ಕೆ ಎಂಆರ್‌ಐ ಆಗಿದ್ದು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಮನೆತನ ನಮ್ಮದು ಎಂದು ಹೇಳಿದರು.
ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರ ಮೇಲೆ ಒತ್ತಡ ಹಾಕಿ ಬ್ಯಾಲಹಳ್ಳಿ ಗೋವಿಂದಗೌಡ ಅವರ ಹೆಸರನ್ನು ಶಿಡ್ಲಘಟ್ಟ ಅಸೆಂಬ್ಲಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸಿ ಕೆಪಿಸಿಸಿಗೆ ಶಿಫಾರಸು ಮಾಡುವುದಾಗಿ ವಿ.ಮುನಿಯಪ್ಪ ಅವರಿಂದ ಹೇಳಿಸಿದ್ದಾರೆ ಎಂದು ಅವರು ಆರೋಪಿಸಿದರು.
ಶಾಸಕ ವಿ.ಮುನಿಯಪ್ಪ ಹಾಗೂ ಅವರ ಪುತ್ರ ಡಾ.ಎಂ.ಶಶಿಧರ್ ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ ಇದೀಗ ಏಕಾಏಕಿ ಕೋಲಾರದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರನ್ನು ಶಿಡ್ಲಘಟ್ಟ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಘೋಷಣೆ ಮಾಡಿರುವುದರ ಹಿಂದೆ ಅನುಮಾನಗಳು ಕಾಡುತ್ತಿವೆ ಎಂದರು.
45 ವರ್ಷಗಳ ರಾಜಕೀಯ ಅನುಭವ ಇರುವ ಶಾಸಕ ವಿ.ಮುನಿಯಪ್ಪ ಅವರು ಅಥವಾ ಅವರ ಕುಟುಂಬದ ಯಾರೇ ಆಗಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ ನಾವೆಲ್ಲರೂ ಅವರನ್ನು ಬೆಂಬಲಿಸುತ್ತೇವೆ. ಆದರೆ ಅದನ್ನು ಬಿಟ್ಟು ಶಿಡ್ಲಘಟ್ಟ ಕ್ಷೇತ್ರಕ್ಕೆ ಯಾವುದೇ ಸಂಬಂಧ ಇಲ್ಲದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸುವುದರ ಹಿಂದೆ ಕಾಂಗ್ರೆಸ್‌ದಲ್ಲಿನ ಕೆಲವರ ಪಿತೂರಿ ಇದೆಯೆ ಹೊರತು ಇದು ಶಾಸಕ ವಿ.ಮುನಿಯಪ್ಪ ಅವರ ಮನಸ್ಸಿನಿಂದ ಬಂದ ಅವರ ಸ್ವಂತ ನಿರ್ಧಾರವಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಎಸ್.ಸಿ ಘಟಕದ ಸಂಚಾಲಕ ಕೆ.ಸಿ. ಜ್ಞಾನೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಸುನೀತಾ, ಅರುಣ್, ಮುನಿರಾಜು,ಶಿವು, ಯುವ ಮುಖಂಡ ನವೀನ್, ಪಿಂಡಪಾಪನಹಳ್ಳಿ ಮುನಿರೆಡ್ಡಿ ಇತರರಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧ : ಕೆಪಿಸಿಸಿ ಅಧ್ಯಕ್ಷರಿಗೆ ಅಷ್ಟು ಕೋಟಿ ಕೊಟ್ಟಿದ್ದೇನೆ, ಮಾಜಿ ಸಂಸದರಿಗೆ ಒಂದಷ್ಟು ಕೋಟಿ ಕೊಟ್ಟಿದ್ದೇನೆ ಹಾಗಾಗಿ ನನಗೆ ಬಿಟ್ಟು ಟಿಕೆಟ್ ಇನ್ನಾರಿಗೆ ಸಿಗಲು ಸಾಧ್ಯ ಎಂದು ಹೇಳಿಕೊಂಡು ಕೆಲವರು ತಿರುಗಾಡುತ್ತಿದ್ದಾರೆ. ಕ್ಷೇತ್ರದ ಜನ ಎಲ್ಲವನ್ನು ನೋಡುತ್ತಿದ್ದಾರೆ. ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಶಾಸಕರನ್ನು ಭೇಟಿ ಮಾಡಿ ನಿರ್ಧಾರವನ್ನು ಪುನರ್ ಪರಿಶೀಲಿಸಲು ಮನವಿ ಮಾಡುತ್ತೇನೆ ಒಂದು ವೇಳೆ ಡಿಸಿಸಿ ಅಧ್ಯಕ್ಷರನ್ನು ಅಭ್ಯರ್ಥಿಯೆಂದು ಘೋಷಣೆ ಮಾಡಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.