ಗದಗ: ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಬಗ್ಗೆ ವರಿಷ್ಠರಿಂದ ಈವರೆಗೂ ಯಾವುದೇ
ನಿರ್ದೇಶನ ಬಂದಿಲ್ಲ. ಪಕ್ಷದ ಹಿರಿಯರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ
ಸ್ಪರ್ಧಿಸುವಂತೆ ಸೂಚಿಸಿದರೆ ಸಿದ್ಧನಾಗಿದ್ದೇನೆ ಎಂದು ಸಂಸದ, ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ನನ್ನ ಆಪ್ತ ಸ್ನೇಹಿತ ಗಾಲಿ ಜನಾರ್ದನ ರೆಡ್ಡಿ ಅವರು ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷಕ್ಕಾಗಿ, ನನಗಾಗಿ ದುಡಿಯುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಜನಾರ್ದನ ರೆಡ್ಡಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಅಮಿತ್ ಶಾ ಅವರು ನಮ್ಮೆಲ್ಲರ ಹಿರಿಯಣ್ಣ ಇದ್ದಂತೆ. ಅವರು ಹೇಳಿದ್ದೇ ಅಂತಿಮ ಎಂದರು.