Advertisement

BJP ರಾಜಕೀಯ ಟೀಕೆ ಬಿಟ್ಟು ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕರಿಸಲು ಸಿದ್ಧ:ಡಿ.ಕೆ. ಶಿವಕುಮಾರ್

08:46 PM Mar 09, 2024 | Team Udayavani |

ಬೆಂಗಳೂರು: “ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವದ ಬಗ್ಗೆ ವಿರೋಧ ಪಕ್ಷಗಳು ರಾಜಕೀಯ ಟೀಕೆ ಬಿಟ್ಟು ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕರಿಸಲು ಸಿದ್ಧ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶನಿವಾರ ಹೇಳಿದ್ದಾರೆ.

Advertisement

ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ,”ವಿರೋಧ ಪಕ್ಷದವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಇನ್ನೇನು ಇಲ್ಲ. ಅವರು ರಚನಾತ್ಮಕ ಸಲಹೆ ಕೊಟ್ಟರೆ ನಾವು ಸ್ವೀಕರಿಸಲು ಸಿದ್ಧ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಖಾಸಗಿ ಟ್ಯಾಂಕರ್ ಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಮಾಫಿಯಾ ತಡೆಗಟ್ಟಿದೆ. ಶೇಕಡಾ 50ರಷ್ಟು ಕೊಳವೆಬಾವಿಗಳು ಬರಿದಾಗಿದೆ. ಸಾವಿರಾರು ಟ್ಯಾಂಕರ್ ಗಳನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಂಡು ನೀರಿನ ಮೂಲಗಳಿರುವ ಕಡೆಗಳಿಂದ ನೀರನ್ನು ಪೂರೈಸಲು ನಿರ್ಧರಿಸಲಾಗಿದೆ.ದೂರದಿಂದ ನೀರು ಪೂರೈಸುವ ಕಾರಣ ಟ್ಯಾಂಕರ್ ನೀರಿನ ದರ ನಿಗಧಿಯ ನಿರ್ಧಾರವನ್ನು ಅಧಿಕಾರಿಗಳಿಗೆ ಬಿಟ್ಟಿದ್ದೇವೆ. ಇನ್ನು ರಾಜ್ಯದಲ್ಲಿ ಖಾಲಿ ಇರುವ ದೊಡ್ಡ ಹಾಲಿನ ಟ್ಯಾಂಕರ್ ಗಳನ್ನ ನೀರು ಪೂರೈಸಲು ಬಳಸಲಾಗುವುದುಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಇನ್ನು ಬೆಂಗಳೂರಿನ ಹೊರವಲಯದ 110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಕೆ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ” ಎಂದರು.

ಮಾಧ್ಯಮಗಳಲ್ಲಿ ನೀರಿನ ಹಾಹಾಕಾರದ ಬಗ್ಗೆ ತೋರಿಸುತ್ತಿದ್ದೀರಿ. ಕೊಳವೆ ಬಾವಿಗಳು ಬತ್ತಿದಾಗ ಹಾಹಾಕಾರಾ ಉದ್ಭವಿಸುತ್ತದೆ. ನಾವು ನೀರು ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ.ಈ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಕಾರು, ವಾಹನ ತೊಳೆಯಲು ಹಾಗೂ ಇತರೆ ಬಳಕೆಗೆ ಬಳಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ನೀರಿನ ಬೆಲೆ ಎಲ್ಲರಿಗೂ ಅರ್ಥವಾಗಬೇಕು. ನಾವು ಮೇಕೆದಾಟು ಯೋಜನೆ ಯಾವ ಕಾರಣಕ್ಕೆ ಹೋರಾಟ ಮಾಡಿದೆವು? ಈ ಕಾರಣಕ್ಕೆ ಹೋರಾಟ ಮಾಡಿದ್ದೆವು. ಕಾವೇರಿ ನೀರನ್ನು ನಾವು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದ್ದೇವೆ” ಎಂದರು.

ನೀರಿನ ಸಮಸ್ಯೆ ಬಗೆಹರಿಸುತ್ತೇವೆ

ಖಾಸಗಿ ಟ್ಯಾಂಕರ್ ಗಳಿಗೆ ಸಿಗುವ ನೀರು ಸರ್ಕಾರಕ್ಕೆ ಯಾಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ಖಾಸಗಿ ಟ್ಯಾಂಕರ್ ಗಳು ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿವೆ. ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಪೂರೈಸಲಾಗುತ್ತಿದೆ. ದುರಸ್ತಿ ಇದ್ದ ಘಟಕಗಳನ್ನು ರಿಪೇರಿ ಮಾಡುತ್ತಿದ್ದೇವೆ. ಇನ್ನು ಮೂರ್ನಾಲ್ಕು ತಿಂಗಳು ಈ ಸಮಸ್ಯೆ ಇರುತ್ತವೆ. ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ. ನಮಗೆ ನೀರಿನ ಬೆಲೆ ಗೊತ್ತಿದೆ” ಎಂದು ತಿಳಿಸಿದರು.

Advertisement

ನೋಡಲ್ ಅಧಿಕಾರಿ ನೇಮಕ

ಬೆಂಗಳೂರು ಗ್ರಾಮಾಂತರ ಭಾಗದ ವಾರ್ಡ್ ಗಳಿಗೆ ನೋಡಲ್ ಅಧಿಕಾರಿ ನೇಮಿಸಿದ್ದು, ಬೇರೆ ಭಾಗಗಳಲ್ಲಿ ಯಾಕೆ ನೇಮಿಸಿಲ್ಲ ಎಂದು ಕೇಳಿದಾಗ, “ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗ ಸಂಪೂರ್ಣವಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿವೆ. ಬೆಂಗಳೂರು ನಗರ ಕಾವೇರಿ ನೀರನ್ನು ಅವಲಂಬಿಸಿದೆ. ಬೆಂಗಳೂರು ಗ್ರಾಮಾಂತರದಿಂದಲೇ ಹೆಚ್ಚು ಟ್ಯಾಂಕರ್ ಮೂಲಕ ನೀರು ಬರುತ್ತಿದೆ” ಎಂದು ತಿಳಿಸಿದರು.

ಸೋಮವಾರ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, “ಅವರು ಮಾಡಲಿ” ಎಂದರು.

11ರ ನಂತರ ಅಭ್ಯರ್ಥಿಗಳ ಎರಡನೇ ಪಟ್ಟಿ

ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಯಾವಾಗ ಎಂದು ಕೇಳಿದಾಗ, “ನಾವು ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಿ ಹೈಕಮಾಂಡ್ ಗೆ ಹೆಸರು ರವಾನೆ ಮಾಡುತ್ತೇವೆ. 11ರಂದು ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಪಟ್ಟಿ ಪ್ರಕಟಿಸುತ್ತಾರೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಜನರಿಗೆ ಹೇಗೆ ಮುಖ ತೋರಿಸುತ್ತಾರೆ?

ಬಿಜೆಪಿಗಿಂತ ಮುನ್ನ ನೀವು ಟಿಕೆಟ್ ಘೋಷಣೆ ಮಾಡಿದ್ದೀರಿ ಎಂದು ಕೇಳಿದಾಗ, “ಈಗಿನ ರಾಜಕೀಯ ನೋಡಿ ಬಹಳ ನೋವಾಗುತ್ತಿದೆ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರವನ್ನು ಬೀಳಿಸಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನು ಈಗ ತಬ್ಬಾಡುತ್ತಿದ್ದಾರೆ. ರಾಜಕಾರಣದಲ್ಲಿ ಯಾರು ಯಾರನ್ನ ನಂಬಬೇಕು ಎಂದು ಬಹಳ ವ್ಯಥೆಯಾಗುತ್ತಿದೆ. ನಾವು ಕುಮಾರಣ್ಣ ಅವರನ್ನು 5 ವರ್ಷ ಸಿಎಂ ಮಾಡಬೇಕು ಎಂದು ಮೈತ್ರಿ ಸರ್ಕಾರ ಮಾಡಿದೆವು. ಆ ಸರ್ಕಾರ ಬೀಳಿಸಿದವರ ಜತೆ ಈಗ ಕುಮಾರಸ್ವಾಮಿ ಸ್ನೇಹ ಬೆಳೆಸುತ್ತಿದ್ದಾರೆ. ಅವರ ವಕ್ತಾರರಾಗಿದ್ದಾರೆ. ಇದೆಲ್ಲವನ್ನೂ ನಿರ್ಧರಿಸಲು ಜನರಿಗೆ ಬಿಡುತ್ತೇನೆ” ಎಂದರು.

ಸರ್ಕಾರ ಇದ್ದಾಗ ನೀವು ತಬ್ಬಾಡಿದ್ದೀರಿ, ನಿಮಗಿರುವ ನೋವು ಅವರಿಗಿಲ್ಲ ಅಲ್ಲವೇ ಎಂದು ಕೇಳಿದಾಗ, “ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ನಮ್ಮ ಸರ್ಕಾರ ಎಂದೇ ನಾವು ಹೇಳುತ್ತಿದ್ದೇವೆ. ಅವರಿಗೆ ಆ ನೋವು ಇಲ್ಲದಿದ್ದರೂ ಬೇಡ. ಆದರೆ ರಾಜಕೀಯ ಸಿದ್ಧಾಂತ ಮುಖ್ಯ ಅಲ್ಲವೇ? ಕುಮಾರಸ್ವಾಮಿ ಅವರು ಇದನ್ನು ಹೇಗೆ ಅರಗಿಸಿಕೊಳ್ಳುತ್ತಾರೆ? ಜನರ ಮುಂದೆ ಹೋಗಿ ಹೇಗೆ ಮುಖ ತೋರಿಸುತ್ತಾರೆ” ಎಂದು ಪ್ರಶ್ನಿಸಿದರು.

ಯಾರ ಹೆಸರನ್ನಾದರೂ ಶಿಫಾರಸ್ಸು ಮಾಡಲಿ

ಬಿಜೆಪಿ ಮೈಸೂರಿನಲ್ಲಿ ಹಾಲಿ ಸಂಸದರ ಜೊತೆಗೆ ಯದುವೀರ್ ಅವರ ಹೆಸರನ್ನು ಶಿಫಾರಸ್ಸು ಮಾಡಿರುವ ಬಗ್ಗೆ ಕೇಳಿದಾಗ, “ಅವರು ಯಾರ ಹೆಸರನ್ನಾದರೂ ಶಿಫಾರಸ್ಸು ಮಾಡಲಿ. ನಮ್ಮ ಪಕ್ಷದ ನೀತಿ, ಸಿದ್ಧಾಂತದ ಮೇಲೆ ನಾವು ಚುನಾವಣೆ ಎದುರಿಸುತ್ತೇವೆ. ನಾವು ಅವರ ಪಕ್ಷದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಮ್ಮ ಕಾರ್ಯಕ್ರಮದ ಬಗ್ಗೆ ಆಲೋಚಿಸುತ್ತೇವೆ. ಜನರ ಮಧ್ಯೆ ಇರುವ ಅಭ್ಯರ್ಥಿಗಳನ್ನು ನಾವು ಕಣಕ್ಕಿಳಿಸುತ್ತೇವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next