Advertisement

ಸೋಯಾ ಹಸಿ ಅವರೆಯಾಗಿ ಇನ್ನು ಬಳಕೆಗೆ ರೆಡಿ

10:23 AM Nov 20, 2017 | |

ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳು 8 ವರ್ಷಗಳಿಂದ ಸುದೀರ್ಘ‌ ಅಧ್ಯಯನ ನಡೆಸಿ ತರಕಾರಿ “ಸೋಯಾ ಅವರೆ’ಯನ್ನು ಹೊಸದಾಗಿ ಅಭಿವೃದ್ಧಿಪಡಿಸಿದ್ದಾರೆ. 

Advertisement

ಈ ಮೊದಲು ಸೋಯಾ ಅವರೆ ಎಣ್ಣೆಕಾಳಾಗಿ ಮಾತ್ರ ಬಳಕೆಯಲ್ಲಿತ್ತು. ಆದರೆ, ಹಸಿಕಾಯಿ(ತರಕಾರಿ)ಯಾಗಿ ಬಳಕೆ
ಮಾಡುವ ಯಾವುದೇ ತಳಿ ದೇಶದಲ್ಲಿರಲಿಲ್ಲ. ಬೆಂಗಳೂರು ಕೃಷಿ ವಿವಿಯ ವಿಜ್ಞಾನಿಗಳ ಸಂಶೋಧನೆ ಪರಿಣಾಮವಾಗಿ ಈಗ “ಕರುಣೆ’ ತಳಿಯ ತರಕಾರಿ ಸೋಯಾ ಅವರೆಯನ್ನು ಸಹ ಹಸಿಕಾಯಿಯಾಗಿ ಬಳಸಬಹುದಾಗಿದೆ. ತರಕಾರಿಯಂತೆ ಈ ಸೋಯಾ ಅವರೆಯನ್ನು ಹಸಿ ಇರುವಾಗಲೇ ಕಿತ್ತು ಬಳಕೆ ಮಾಡಬಹುದು. ಇದೊಂದು ದ್ವಿದಳ ಬೆಳೆಯಾಗಿದ್ದು, ಶೇ.40 ಸಸಾರಜನಕ ಮತ್ತು ಶೇ.20 ಎಣ್ಣೆ ಅಂಶದಿಂದ ಕೂಡಿದೆ. ಯಾವುದೇ ಕಾಳುಗಳಲ್ಲಿ ಇಷ್ಟು ಪ್ರಮಾಣದ ಸಸಾರಜನಕ  ಮತ್ತು ಎಣ್ಣೆ ಅಂಶ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸೋಯಾ ಅವರೆ ಸಂಶೋಧನಾ ವಿಭಾಗ ಹಿರಿಯ ಸಂಶೋಧನಾ ಸಹಾಯಕ ವಿಜ್ಞಾನಿ ಕೆ.ನಟರಾಜ್‌.
ತೈವಾನಿನ ಏಷ್ಯನ್‌ ವೆಜಿಟೇಬಲ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಟ್‌ ಕೌನ್ಸಿಲ್‌ನಿಂದ 9 ವರ್ಷಗಳ ಹಿಂದೆ ಸುಮಾರು 12 ತಳಿಗಳನ್ನು ಕೃಷಿ ವಿವಿ ತರಿಸಿಕೊಂಡಿತ್ತು. ಈ ತಳಿಗಳನ್ನು ಪ್ರಯೋಗಕ್ಕೆ ಒಳಪಡಿಸಿದ ಮೇಲೆ ಸೋಯಾ ಅವರೆ ಇಲ್ಲಿನ ಹವಾಮಾನ ಮತ್ತು ಮಣ್ಣಿಗೆ ತಕ್ಕಂತೆ ಅಭಿವೃದ್ಧಿ ಪಡಿಸಲು ಸಾಧ್ಯವೆಂದು ಅರಿತ ಎಂ.ಸ್ವಾಮಿ ನೇತೃತ್ವದ ವಿಜ್ಞಾನಿಗಳ ತಂಡದ ಎಂ.ಚಂದ್ರಪ್ಪ, ಸಿ.ಮಂಜಾನಾಯಕ್‌, ಜಿ.ಟಿ.ಸಂತೋಷ್‌ಕುಮಾರ್‌, ಎನ್‌.ಸ್ವಾಮಿ, ಎಂ.ಸುಶ್ಮಿತಾ ಅವರು ಸತತ ಎಂಟು ವರ್ಷಗಳ
ಕಾಲ ತರಕಾರಿ ಸೋಯಾ ಅವರೆಯನ್ನು ವಿವಿಧ ಹಂತದಲ್ಲಿ ಸಂಶೋಧನೆಗೆ ಒಳಪಡಿಸಿ ಅಭಿವೃದ್ಧಿಪಡಿಸಿದ್ದಾರೆ. 

ವಿಶ್ರಬೆಳೆಯಾಗಿ ಸೋಯಾ ಅವರೆ
2 ಅಡಿ ಅಂತರದ ತೊಗರಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆಯಬಹುದು. ಇದರಿಂದ ಎಕರೆಗೆ ಸುಮಾರು 4-5 ಕ್ವಿಂಟಾಲ್‌ ತೊಗರಿ, 3 ಕ್ವಿಂಟಾಲ್‌ ಸೋಯಾ ಅವರೆ ಪಡೆಯಬಹುದು. ರಾಗಿಯಲ್ಲಿ ಒಂದೂವರೆ ಅಡಿ ಅಂತರದಲ್ಲಿ ಎರಡು ರಾಗಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆದರೆ 6 ಕ್ವಿಂಟಲ್‌ ರಾಗಿ ಮತ್ತು 3 ಕ್ವಿಂಟಲ್‌ ಸೋಯಾ ಅವರೆ ಸಿಗುತ್ತದೆ. ಕಬ್ಬು, ಮುಸುಕಿನ ಜೋಳ, ಭತ್ತದ ಕೂಳೆ ಗದ್ದೆಯಲ್ಲೂ ಮಿಶ್ರಬೆಳೆಯಾಗಿ ಸೋಯಾ ಅವರೆ ಬೆಳೆಯಬಹುದು. 

ಉಚಿತ ಬೀಜ
ಕೃಷಿ ಮೇಳದಲ್ಲಿ ತರಕಾರಿ ಸೋಯಾ ಅವರೆಯನ್ನು ವಿಸ್ತರಿಸುವ ಉದ್ದೇಶದಿಂದ ಸೋಯಾ ಅವರೆ ಸಂಶೋಧನಾ ವಿಭಾಗ ಉಚಿತವಾಗಿ ರೈತರಿಗೆ ಈ ತಳಿಯ ಬೀಜಗಳನ್ನು ವಿತರಿಸಿದೆ. ಆಸಕ್ತ ರೈತರು ಈ ತಳಿ ಬೆಳೆಯಲು ಬಯಸುವುದಾದರೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಲಿ ದ್ದಾರೆ. ತರಕಾರಿ ಸೋಯಾ ಅವರೆ ತಳಿ ಬೀಜ ಮತ್ತು ಮಾಹಿತಿಗೆ ವಿಜ್ಞಾನಿಗಳಾದ ಎಂ.ಚಂದ್ರಪ್ಪ (9986858158), ಸಿ.ಮಂಜಾನಾಯಕ್‌ (9480773978) ಮತ್ತು ಡಾ.ಕೆ. ನಟರಾಜ್‌ (8147129773) ಸಂಪರ್ಕಿಸಬಹುದು. 

ಸಂಪತ್‌ ತರೀಕೆರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next