Advertisement

ತರಬೇತಿ ಶಿಬಿರ ಪುನರಾರಂಭಕ್ಕೆ ಮಾರ್ಗಸೂಚಿ ರೆಡಿ

08:44 AM May 18, 2020 | Sriram |

ಹೊಸದಿಲ್ಲಿ: ಕ್ರೀಡಾ ತರಬೇತಿ ಶಿಬಿರಗಳನ್ನು ಪುನರಾರಂಭ ಮಾಡುವ ಉದ್ದೇಶದಿಂದ 33 ಪುಟಗಳ ಮಾರ್ಗಸೂಚಿ ವರದಿಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಸಿದ್ಧಪಡಿಸಿ ಆರೋಗ್ಯ ಹಾಗೂ ಗೃಹ ಇಲಾಖೆಯ ಒಪ್ಪಿಗೆಗಾಗಿ ಕಳುಹಿಸಿದ್ದು, ಇಲಾಖೆಯ ಸಮ್ಮತಿ ದೊರೆತರೆ ತಿಂಗಳಾಂತ್ಯದಲ್ಲಿ ಕ್ರೀಡಾ ಶಿಬಿರಗಳು ಹೊಸ ನಿಯಮಗಳೊಂದಿಗೆ ಜಾರಿಯಾಗಲಿವೆ.

Advertisement

ತರಬೇತಿಯ ಗುಣಮಟ್ಟದ ಮೇಲೆ ನಿಗಾ ಇಡಲು ಕಾರ್ಯದರ್ಶಿ ರೋಹಿತ್‌ ಭಾರದ್ವಾಜ್‌ ಸೇರಿದಂತೆ ಆರು ಸದಸ್ಯರ ತಜ್ಞರ ಸಮಿತಿ ಒಳಗೊಂಡಂತೆ ಕೆಲ ಮಾರ್ಗಸೂಚಿಯನ್ನು ಸಾಯ್‌ ರೂಪಿಸಿದೆ. ಆದರೆ ಇದು ಅಂತಿಮವಲ್ಲ. ಕ್ರೀಡಾ ಹಾಗೂ ಆರೋಗ್ಯ ಸಚಿವಾಲಯದ ಅನುಮೋದನೆ ಸಿಗದ ಹೊರತು ಇದನ್ನು ಜಾರಿಗೊಳಿಸಲಾಗದು ಎಂದು ಸಾಯ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರಕಾರ ಮೇ 18ರಿಂದ ನಾಲ್ಕನೇ ಹಂತದ ಲಾಕ್‌ಡೌನ್‌ ಜಾರಿಗೊಳಿಸುವ ಸಾಧ್ಯತೆ ಇದೆ. ಒಂದೊಮ್ಮೆ ಲಾಕ್‌ಡೌನ್‌ ಮುಂದುವರಿದರೆ ಗೃಹ ಸಚಿವಾಲಯವು ಕ್ರೀಡಾ ಚಟುವಟಿಕೆಗಳ ಮೇಲೆ ನಿರ್ಬಂಧ ಸಡಿಲಿಕೆ ಮಾಡಿದರೆ ಮಾತ್ರ ತರಬೇತಿ ಶಿಬಿರಗಳನ್ನು ಪುನರಾರಂಭಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಸಮಿತಿ ನೀಡಿರುವ ವರದಿಯ ಕುರಿತು ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿರುವ ಸಾಯ್, ದೇಶದ ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಗೆ (ಎನ್‌ಎಸ್‌ಎಫ್) ವರದಿಯ ಪ್ರತಿಗಳನ್ನು ಕಳುಹಿಸಿದೆ.

ಈ ಸಭೆಗೂ ಮುನ್ನ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳ ಸದಸ್ಯರು ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಭಜಿಸಿ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಕೇಂದ್ರದ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಮನವಿ ಮಾಡಿದ್ದರು. ಹಾಕಿಪಟುಗಳ ಈ ಸಲಹೆಯನ್ನೂ ಸಮಿತಿ ಪರಿಗಣಿಸಿ ಈ ವರದಿಯಲ್ಲಿ ಉಲ್ಲೇಖೀಸಿದೆ.

Advertisement

ಮಾರ್ಗಸೂಚಿ ನಿಯಮಗಳು
ಹೊಸ ಮಾರ್ಗಸೂಚಿ ಪ್ರಕಾರ ತರಬೇತಿಗೆ ಬರುವ ಆ್ಯತ್ಲೀಟ್‌ಗಳಿಗೆ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಬೇಕು ಮತ್ತು ಈ ಸ್ಥಳವು ಸರಿಯಾದ ಗಾಳಿ ಬೆಳಕು ಇರುವ ಸ್ವತ್ಛ ಹಾಗೂ ವಿಶಾಲವಾದ ಕೊಠಡಿಯಾಗಿರಬೇಕು. ಸಿಬಂದಿಯ ಹಿತದೃಷ್ಟಿಯಿಂದ ಎಲ್ಲ ಕ್ರೀಡಾ ಫೆಡರೇಶನ್‌ಗಳಿಗೂ ನೈರ್ಮಲ್ಯ ಅಧಿಕಾರಿಗಳನ್ನು ನೇಮಿಸಬೇಕು. ಜಿಮ್‌ನಲ್ಲಿ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಧರಿಸಿ ತಾಲೀಮು ನಡೆಸಬೇಕು. ಹಾಗೆಯೇ ಒಂದು ತಂಡ ಜಿಮ್‌ ತೊರೆದ ಕೂಡಲೇ ಸೋಂಕು ನಿವಾರಕಗಳನ್ನು ಸಿಂಪಡಿಸಬೇಕು. ಅನಂತರವಷ್ಟೇ ಮತ್ತೂಂದು ತಂಡದ ತಾಲೀಮಿಗೆ ಅವಕಾಶ ನೀಡಬೇಕು. ಇದಕ್ಕಾಗಿ ಹೆಚ್ಚುವರಿ ಸಿಬಂದಿ ನೇಮಿಸಬೇಕು. ತರಬೇತಿ ನಡೆಯುವ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು ವೈದ್ಯಕೀಯ ಹಾಗೂ ಇನ್ನಿತರ ಪಿಪಿಇ ಕಿಟ್‌ಗಳನ್ನು ಧರಿಸಿಕೊಂಡು ಸ್ಥಳಕ್ಕೆ ತೆರಳಬೇಕು. ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಮುನ್ನ ಎಲ್ಲ ಕ್ರೀಡಾಪಟುಗಳು ಕಡ್ಡಾಯವಾಗಿ ಕೋವಿಡ್‌-19 ಪರೀಕ್ಷೆಗೆ ಒಳಪಡಬೇಕು ಮತ್ತು ಅವರೆಲ್ಲರೂ ಆರೋಗ್ಯ ಸೇತು ಆ್ಯಪ್‌ ಹೊಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next