Advertisement

ವಿಶ್ವ ಯೋಗ ದಿನಾಚರಣೆಗೆ ಜಿಲ್ಲಾಡಳಿತ ಸಜ್ಜು

09:12 PM Jun 19, 2019 | Team Udayavani |

ಚಿಕ್ಕಬಳ್ಳಾಪುರ: ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ.21 ರಂದು ಬೆಳಗ್ಗೆ ಐದನೇ ವರ್ಷದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ ಆಯೋಜಿಸಿದ್ದು, ಜಿಲ್ಲೆಯ ಸಾರ್ವಜನಿಕರು, ಯೋಗಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಈ ಕುರಿತು ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ, ವಿಶ್ವ ಯೋಗ ದಿನಾಚರಣೆಗೆ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್‌ ಇಲಾಖೆ ಮತ್ತು ಜಿಲ್ಲೆಯ ಪತಂಜಲಿ ಯೋಗ ಸಮಿತಿ ಸಹಯೋಗದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ ಎಂದರು.

ಭಾರತ ಯೋಗ ಗುರು: ಯೋಗ ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಮನೆಮಾತಾಗಿದ್ದು, ಯೋಗಕ್ಕೆ ಭಾರತ ಗುರುವಾಗಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಸುತ್ತಿದ್ದು, ಇಡೀ ವಿಶ್ವದ ಅನೇಕ ರಾಷ್ಟ್ರಗಳು ಇಂದು ಭಾರತದ ಯೋಗವನ್ನು ಅಳವಡಿಸಿಕೊಂಡಿವೆ ಎಂದರು.

ಜಿಲ್ಲಾಡಳಿತ ಕೂಡ ದೊಡ್ಡ ಪ್ರಮಾಣದಲ್ಲಿ ಯೋಗ ದಿನವನ್ನು ವೈಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಕೈಗೊಂಡಿದ್ದು, ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಬೇಕೆಂದರು. ಅಂದು ಬೆಳಗ್ಗೆ 7 ಗಂಟೆಗೆ ಯೋಗ ಪ್ರದರ್ಶನ ನಡೆಯಲಿದ್ದು, ಸುಮಾರು ಮುಕ್ಕಾಲು ಗಂಟೆ ನಡೆಯುವ ಯೋಗ ಪ್ರದರ್ಶನದಲ್ಲಿ ಸುಮಾರು 50 ಕ್ಕೂ ಹೆಚ್ಚು ಯೋಗಾಸನಗಳನ್ನು ಸಾರ್ವಜನಿಕರಿಗೆ ಕಲಿಸಿ ಕೊಡಲಾಗುವು ಎಂದರು.

ಜಿಲ್ಲಾ ಕೇಂದ್ರದಲ್ಲಿನ ಹಿಂದುಳಿದ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಯ ಅರೆ ವೈದ್ಯಕೀಯ ಸಿಬ್ಬಂದಿಯನ್ನು, ಪತಂಜಲಿ ಯೋಗ ಸಮಿತಿ ಯೋಗಪಟುಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಕಾಲೇಜುಗಳ ಎನ್‌ಸಿಸಿ, ಎನ್‌ಎಸ್‌ಎಸ್‌ ಹಾಗೂ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದರು.

Advertisement

ಮೂರು ಮಂದಿ ಯೋಗ ಬಂಧುಗಳಿಗೆ ಸನ್ಮಾನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿದ ಜಿಲ್ಲೆಯ ಮೂರು ಮಂದಿ ಯೋಗ ಬಂಧುಗಳನ್ನು ಗುರುತಿಸಿ ಜಿಲ್ಲಾಡಳಿತ, ಜಿಪಂ ಹಾಗೂ ಆಯುಷ್‌ ಇಲಾಖೆ ವತಿಯಿಂದ ಸನ್ಮಾನಿಸಿ ಅಭಿನಂಧಿಸಲಾಗುವುದು ಎಂದರು. ಯೋಗ ದಿನಾಚರಣೆಯಲ್ಲಿ ಯೋಗಾಭ್ಯಾಸದ ಅವಶಕ್ಯತೆ ಬಗ್ಗೆ ಯೋಗ ಗುರುಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಲ್ಯಾಣಿಗಳಲ್ಲಿ ಯೋಗ ಆಚರಿಸಿ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಸುಮಾರು 100 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ಯೋಗ ದಿನಾಚರಣೆಯಂದು ಜಿಲ್ಲೆಯ ಸಾರ್ವಜನಿಕರು, ಯೋಗಪಟುಗಳು ಸಾಮೂಹಿಕವಾಗಿ ಸ್ವಚ್ಛಗೊಂಡಿರುವ ಕಲ್ಯಾಣಿಗಳಲ್ಲಿ ಯೋಗ ದಿನ ಆಚರಿಸುವಂತೆ ಜಿಲ್ಲೆಯ ಜನತೆಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಕರೆ ನೀಡಿದರು.

ಯೋಗ ದಿನಾಚರಣೆಯ ವೇಳಾಪಟ್ಟಿ ಕೇಂದ್ರಿಯ ಯೋಗ ಸೇವಾ ಪ್ರಾಕೃತಿಕ ಚಿಕಿತ್ಸಾ ಅನುಸಂಧಾನ ಪರಿಷತ್‌, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್‌ ಇಲಾಖೆ, ಪತಂಜಲಿ ಯೋಗ ಸಮಿ ಸಹಯೋಗದೊಂದಿಗೆ 21 ರಂದು ಬೆಳಗ್ಗೆ 6.30ಕ್ಕೆ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಆಯೋಜಿಸಲಾಗಿದೆ.

ಬೆಳಗ್ಗೆ 7 ರಿಂದ 7.45ರವರೆಗೆ ಯೋಗ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 8 ರಿಂದ 9ರವರೆಗೆ ಗಣ್ಯರಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ತದ ನಂತರ ಯೋಗ ಕುರಿತು ಜಾಗೃತಿ ನಗರದ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ಜಿಲ್ಲಾ ಕ್ರೀಡಾಂಗಣದಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದವರೆಗೆ ಸಾಗಲಿದೆ. ಜಾಥಾದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.

ಯೋಗಾಸನದಿಂದ ನಾನಾ ರೀತಿಯ ರೋಗಗಳಿಂದ ವಿಮುಕ್ತಿ ಹೊಂದಲು, ಮಾನಸಿಕ ಒತ್ತಡದಿಂದ ವಿಮೋಚನೆ ಪಡೆಯಲು, ಧ್ಯಾನದಿಂದ ಆರೋಗ್ಯ ಮತ್ತು ಶಾಂತಿಯುತವಾದ ಜೀವನ ನಡೆಸಲು ಯೋಗ ಹೆಚ್ಚು ಸಹಕಾರಿಯಾಗಿದೆ. ಭಾರತದ ಮೂಲವಾಗಿರುವ ಯೋಗ ಕಲೆ ವಿಶ್ವಾದ್ಯಂತ ಪಸರಿಸಿದೆ. ಆರೋಗ್ಯಕ್ಕೆ ಪೂರಕವಾಗಿರುವ ಯೋಗಕ್ಕೆ ಜಾಗತಿಕ ಮನ್ನಣೆ ದೊರೆಯುತ್ತಿದೆ.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next