Advertisement

ಬಿಡುಗಡೆಗೆ ರೆಡಿ ಮಾಸ್ತಿಗುಡಿ

11:18 AM Apr 30, 2017 | Team Udayavani |

“ದುನಿಯಾ’ ವಿಜಯ್‌ ಅಭಿನಯದ “ಮಾಸ್ತಿಗುಡಿ’, ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮೇ ತಿಂಗಳಲ್ಲಿ ಪ್ರೇಕ್ಷಕರು “ಗುಡಿ’ ದರ್ಶನ ಮಾಡಬಹುದು. ಈ ಚಿತ್ರದಲ್ಲೊಂದು ವಿಶೇಷತೆ ಇದೆ. ಅದು ಬೇರೇನೂ ಅಲ್ಲ, ಹುಲಿಗಳನ್ನು ಸಂರಕ್ಷಣೆ ಕುರಿತ ವಿಷಯ. ಹೌದು, ಕಾಡಿನಲ್ಲಿರುವ ಹುಲಿಗಳನ್ನು ರಕ್ಷಿಸಿದರೆ ನೀರು ಸಿಗುತ್ತೆ ಎಂಬುದೇ ವಿಶೇಷ ಸಂದೇಶ. ಇದು ಎಷ್ಟರಮಟ್ಟಿಗೆ ನಿಜ ಎಂಬ ಪ್ರಶ್ನೆಗೆ ಸ್ಟಾರ್‌ ನಟರೊಬ್ಬರು, ಚಿತ್ರದಲ್ಲಿ ವಿವರ ಕೊಟ್ಟಿದ್ದಾರಂತೆ.

Advertisement

ಅಂದಹಾಗೆ, 1998ರಲ್ಲಿ ಬಿಳಿಗಿರಿ ರಂಗನಬೆಟ್ಟದಲ್ಲಿ ನಡೆದ ಒಂದು ಘಟನೆಯೇ ಚಿತ್ರದ ಕಥಾವಸ್ತು. ಆ ಕಾಡಲ್ಲಿ ಹುಲಿಗಳ ಹತ್ಯೆ ನಡೆಯುತ್ತಲೇ ಇರುತ್ತೆ. ಯಾಕೆ ಹುಲಿಗಳು ಸಾಯುತ್ತಿವೆ, ಅದಕ್ಕೆ ಕಾರಣವೇನು, ಯಾರ ಪಾತ್ರವಿದೆ ಎಂಬಿತ್ಯಾದಿ ವಿಷಯಗಳು ಇಲ್ಲಿ ಅಡಗಿವೆ ಎಂಬುದು ನಿರ್ದೇಶಕ ನಾಗಶೇಖರ್‌ ಮಾತು. “ಪ್ರಮುಖವಾಗಿ, ಹುಲಿಯ ಚರ್ಮ, ಹಲ್ಲು, ಉಗುರು ಹೀಗೆ ಕೆಲ ಭಾಗಗಳನ್ನು ಮಾರಾಟ ಮಾಡಿ ಕೋಟಿ ಸಂಪಾದಿಸುವ ದುಷ್ಟರನ್ನು ಸಂಹರಿಸುವ ಕಥೆಯೂ ಇಲ್ಲಿದೆ.

ಹುಲಿಗಳನ್ನು ರಕ್ಷಿಸಿದರೆ, ನೀರು ಹೇಗೆ ಸಿಗುತ್ತೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ವಿಜ್ಞಾನದಲ್ಲಿ ಉತ್ತರವೂ ಇದೆ. ಅದೆಲ್ಲವನ್ನೂ ಇಲ್ಲಿ ಹೇಳಲಾಗಿದೆ. “ಮಾಸ್ತಿಗುಡಿ’ಯಲ್ಲಿ ಆ ಪ್ರಯತ್ನದ ಮೂಲಕ ಒಂದಷ್ಟು ಹೊಸಬಗೆಯ ಸಂದೇಶಗಳನ್ನು ಕೊಡಲಾಗಿದೆ. ಶಿರಸಿ, ಯಲ್ಲಾಪುರ, ಸಕಲೇಶಪುರ ಸೇರಿದಂತೆ ಇತರೆ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ’ ಎನ್ನುತ್ತಾರೆ ನಾಗಶೇಖರ್‌.

ಸಾಮಾನ್ಯವಾಗಿ ಕಾಡಿನ ಕುರಿತ ಸಿನಿಮಾ ಅಂದಮೇಲೆ, ಪ್ರಾಣಿಗಳನ್ನು ತೋರಿಸಲೇಬೇಕು. ಹಾಗಾದರೆ, ಇಲ್ಲಿ ಅವುಗಳು ಹೇರಳವಾಗಿ ಕಾಣಸಿಗುತ್ತವೆಯೇ ಎಂಬ ಪ್ರಶ್ನೆಗೆ, ಹೌದು ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ಹುಲಿ, ಚಿರತೆ, ಹಾವು ಸೇರಿದಂತೆ ಇತರೆ ಪ್ರಾಣಿಗಳನ್ನು ತೋರಿಸಲಾಗಿದೆಯಂತೆ. ಅವೆಲ್ಲವನ್ನೂ ಸಿಜಿ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ಅತೀ ಹೆಚ್ಚು ಸಿಜಿ ತಂತ್ರಜ್ಞಾನ ಬಳಸಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಕೂಡ ಚಿತ್ರತಂಡದ್ದು.

“ದುನಿಯಾ’ ವಿಜಯ್‌ ಇಲ್ಲಿ ಐದು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಈಗಾಗಲೇ ಹಾಡುಗಳು ಎಲ್ಲೆಡೆಯಿಂದ ಮೆಚ್ಚುಗೆ ಪಡೆದಿವೆ. ಸಂಗೀತ ನಿರ್ದೇಶಕ ಸಾಧುಕೋಕಿಲ ಅವರಿಲ್ಲಿ ಸಂಗೀತದ ಜತೆ ಒಳ್ಳೆಯ ಪಾತ್ರವನ್ನೂ ನಿರ್ವಹಿಸಿದ್ದಾರೆ. ಒಳ್ಳೇ ತಂಡ, ಒಳ್ಳೇ ಕಥೆ, ಒಳ್ಳೇ ಸಂದೇಶ ಸಾರುವ ಈ ಚಿತ್ರ ಎಲ್ಲರ ಮನಗೆಲ್ಲುತ್ತೆ ಎಂಬುದು ಸಾಧು ಮಾತು.

Advertisement

ಇನ್ನು, ನಟ ರವಿಶಂಕರ್‌ ಗೌಡ ಅವರಿಗೆ ಕಾಡಲ್ಲಿರುವ ಹುಚ್ಚ ಹೇಗಿರುತ್ತಾನೋ, ಹಾಗೆ ವಿಕಾರವಾಗಿ ಕಾಣುವ ಹುಚ್ಚನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಖುಷಿಯಂತೆ. ಚಿತ್ರಕ್ಕೆ ಕ್ಯಾಮೆರಾ ಹಿಡಿದಿರುವ ಸತ್ಯ ಹೆಗಡೆ ಅವರಿಗೆ “ಮಾಸ್ತಿಗುಡಿ’ಯ ಪ್ರತಿಯೊಂದು ದೃಶ್ಯಗಳು ನೋಡುಗರನ್ನು ಸೆಳೆಯುತ್ತವೆ ಎಂಬ ಗ್ಯಾರಂಟಿ ಕೊಡುತ್ತಾರೆ. ಚಿತ್ರದ ವಿತರಣೆ ಹಕ್ಕು ಪಡೆದಿರುವ ಜಾಕ್‌ ಮಂಜು, ಮೇ ಎರಡನೇ ವಾರದಲ್ಲಿ ಸಿನಿಮಾ ರಿಲೀಸ್‌ ಮಾಡುವ ಯೋಚನೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next