ನಟ ನಿರಂಜನ್ ಒಡೆಯರ್ ಹಾಗು ಕಾರುಣ್ಯರಾಮ್ ಅಭಿನಯದ “ರಣಭೂಮಿ’ ಬಿಡುಗಡೆಗೆ ಸಿದ್ಧಗೊಂಡಿದೆ. ಈ ಹಿಂದೆ “ಜೋಕಾಲಿ’ ನಿರ್ದೇಶಿಸಿದ್ದ ಚಿರಂಜೀವಿ ದೀಪಕ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮಂಜುನಾಥ್ ಪ್ರಭು ಮತ್ತು ಹೇಮಂತ್ ದೇಶಹಳ್ಳಿ ಅವರೊಂದಿಗೆ ದೀಪಕ್ ಕೂಡ ನಿರ್ಮಾಣ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಶೀತಲ್‌ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಇಲ್ಲಿ ಇಬ್ಬರು ನಾಯಕಿಯರು ಅಂದಾಕ್ಷಣ, ಇದೊಂದು ತ್ರಿಕೋನ ಪ್ರೇಮಕಥೆ ಇರಬಹುದು ಎಂಬ ಲೆಕ್ಕಾಚಾರ ಹಾಕಿದರೆ, ಆ ಊಹೆ ತಪ್ಪು. ಯಾಕೆಂದರೆ, ಇದು ಸಸ್ಪೆನ್ಸ್ ಮತ್ತು ಹಾರರ್ ಚಿತ್ರ. ಇಬ್ಬರು ನಾಯಕಿಯರೂ ನಾಯಕನನ್ನು ಪ್ರೀತಿಸೋದು ನಿಜ. ಆದರೆ, ನಾಯಕ ಒಬ್ಬರನ್ನು ಮಾತ್ರ ಪ್ರೀತಿಸುತ್ತಾನೆ. ಆ ಇಬ್ಬರ ಪೈಕಿ ಯಾರನ್ನು ಇಷ್ಟಪಡ್ತಾನೆ ಎಂಬ ಉತ್ತರಕ್ಕೆ ಚಿತ್ರ ಬರುವವರೆಗೆ ಕಾಯಬೇಕು. ಚಿತ್ರಕ್ಕೆ “ಹುಟ್ಟು ಅನಿವಾರ್ಯ ಆದ್ರೆ ಸಾವು ಚರಿತ್ರೆ ಆಗಬೇಕು’ ಎಂಬ ಅಡಿಬರಹವಿದೆ.
ಈ ಚಿತ್ರದಲ್ಲಿ ನಿರಂಜನ್ ಒಡೆಯರ್ ಅವರು ಒಬ್ಬ ಟೆಕ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸಸ್ಪೆನ್ಸ್, ಹಾರರ್ ಚಿತ್ರಗಳಿಗೆ ಸಂಗೀತ ಮತ್ತು ಎಫೆಕ್ಟ್ಸ್ಗೆ ಪ್ರಾಮುಖ್ಯತೆ ಇದ್ದೇ ಇರುತ್ತೆ. ಇಲ್ಲೂ ಕೂಡ ಅದು ಹೈಲೆಟ್. ಪ್ರದೀಪ್ ವರ್ಮಾ ಸಂಗೀತವಿದೆ. ನಾಗಾರ್ಜುನ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಒಂದು ಹಾಡಿದೆ.
ಉಳಿದಂತೆ “ಕೆಜಿಎಫ್’ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ವಿಕ್ರಮ್, ಈ ಚಿತ್ರದಲ್ಲೊಂದು ಭರ್ಜರಿ ಫೈಟ್ ಮಾಡಿದ್ದಾರೆ. ಮಾನಸಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ತಯಾರಾಗಿರುವ “ರಣಭೂಮಿ’ ಎಲ್ಲ ಅಂದುಕೊಂಡಂತೆ ನಡೆದರೆ ನವೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರಕ್ಕೆ “ಕರ್ವ’ ಖ್ಯಾತಿಯ ವೆಂಕಿ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಆರ್ ಭಟ್, “ರಥಾವರ’ ಲೋಕಿ, ಡ್ಯಾನಿ ಕುಟ್ಟಪ್ಪ, ಮುನಿ ಸೇರಿದಂತೆ ಹಲವರು ನಟಿಸಿದ್ದಾರೆ.