Advertisement

ಶಾಂತಿಯುತ ಮತದಾನಕ್ಕೆ ಸಜ್ಜು

02:39 PM Apr 22, 2019 | Team Udayavani |

ಗದಗ: ಹಾವೇರಿ ಮತ್ತು ಬಾಗಲಕೋಟೆ ಲೋಕಸಭೆ ಕ್ಷೇತ್ರಗಳಿಗೆ ಸಂಬಂಧಿಸಿ ಏ.23ರಂದು ಜಿಲ್ಲೆಯಲ್ಲಿ ನಡೆಯಲಿರುವ ಮತದಾನ ಪ್ರಕಿಯೆ ಶಾಂತಿಯುತವಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಮತದಾರು ಹೆಚ್ಚಿನ ಸಂಖ್ಯೆಯಲ್ಲಿ ಮುಕ್ತ ಮತ್ತು ನಿರ್ಭೀತಿಯಿಂದ ಮತಚಲಾಯಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮನವಿ ಮಾಡಿದರು.

Advertisement

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗದಗ ಜಿಲ್ಲೆಯಲ್ಲಿ 4,30,194 ಪುರುಷ, 4,238,37 ಮಹಿಳೆ ಹಾಗೂ 53 ಇತರೆ ಸೇರಿದಂತೆ ಒಟ್ಟು 8,54,084 ಮತದಾರರಿದ್ದಾರೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನರಗುಂದ ವಿಧಾನಸಭೆ ಕ್ಷೇತ್ರದಲ್ಲಿ 96,025 ಪುರುಷ, 93,053 ಮಹಿಳಾ ಹಾಗೂ 6 ಇತರೆ ಸೇರಿದಂತೆ ಒಟ್ಟಾರೆ 1,89,084 ಮತದಾರರು ಹಾಗೂ 10-ಹಾವೇರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಿರಹಟ್ಟಿ, ಗದಗ ಮತ್ತು ರೋಣ ವಿಧಾನಸಭೆ ಕ್ಷೇತ್ರದಲ್ಲಿ 3,34,169 ಪುರುಷ, 3,30,784 ಮಹಿಳೆ ಹಾಗೂ 47 ಇತರೆ ಸೇರಿದಂತೆ ಒಟ್ಟು 6,65,000 ಮತದಾರರು ಇದ್ದಾರೆ ಎಂದು ವಿವರಿಸಿದರು.

ಒಟ್ಟು 959 ಮತಗಟ್ಟೆ: ಜಿಲ್ಲೆಯಲ್ಲಿ ಒಟ್ಟು 959 ಮತಗಟ್ಟೆ ಸ್ಥಾಪಿಸಲಾಗಿದೆ. 10-ಹಾವೇರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 740 ಮತಗಟ್ಟೆ ಹಾಗೂ 3-ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 219 ಮತಗಟ್ಟೆಗಳಿವೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಕುಡಿಯುವ ನೀರು, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಅನುಕೂಲಕ್ಕಾಗಿ ರ್‍ಯಾಂಪ್‌, ಶೌಚಾಲಯ, ವಿದ್ಯುತ್‌ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಮತದಾನ ಕಾರ್ಯನಿರ್ವಹಣೆಗಾಗಿ ಒಟ್ಟಾರೆ 4,236 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಚುನಾವಣೆ ಕರ್ತವ್ಯದಲ್ಲಿರುವವರಿಗೆ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

188 ಸೂಕ್ಷ್ಮ ಮತಗಟ್ಟೆಗಳು: ಜಿಲ್ಲೆಯಲ್ಲಿ ಸ್ಥಾಪಿಸಿರುವ ಒಟ್ಟು 959 ಮತಗಟ್ಟೆ ಪೈಕಿ 188 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. 771 ಮತಗಟ್ಟೆ ಸಾಮಾನ್ಯ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. 162 ಮತಗಟ್ಟೆಗಳಿಗೆ ಮೈಕ್ರೊ ಅಬ್ಸರ್ವರ್ಗಳನ್ನು ನಿಯೋಜಿಸಿದ್ದು, 48 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ಹಾಗೂ 56 ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 1,385 ಮತಯಂತ್ರ ಪ್ರಸ್ತುತ ಚುನಾವಣೆಯಲ್ಲಿ ಉಪಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಸೆಕ್ಟರ್‌ ಅಧಿಕಾರಿಗಳು ಹಾಗೂ ಬಿಇಎಲ್ ಕಂಪನಿಯ 5 ಜನ ತಾಂತ್ರಿಕ ಸಿಬ್ಬಂದಿ ಮತದಾನ ದಿನದಂದು ಯಾವುದೇ ಯಂತ್ರಗಳಲ್ಲಿ ತೊಂದರೆ ಉಂಟಾದಲ್ಲಿ ತಕ್ಷಣ ಸ್ಥಳಕ್ಕೆ ಬಂದು ಸರಿಪಡಿಸುವರು ಎಂದು ಮಾಹಿತಿ ನೀಡಿದರು.

ಅಕ್ರಮ ತಡೆಯುವಲ್ಲಿ ಸಫಲ: ಲೋಕಸಭೆ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಸ್ಥಾಪಿಸಿದ ಸಾರ್ವಜನಿಕ ದೂರು ಮತ್ತು ಸಹಾಯವಾಣಿ 1950 ಕಾಲ್ ಸೆಂಟರ್‌ನಲ್ಲಿ ಈವರೆಗೆ ಒಟ್ಟು 961 ಕರೆ ದಾಖಲಾಗಿದ್ದು, 7 ದೂರು ಸ್ವೀಕೃತವಾಗಿದ್ದು, ಅವುಗಳನ್ನು ಇತ್ಯರ್ಥಗೊಳಿಸಲಾಗಿದೆ. ಜಿಲ್ಲೆಯಲ್ಲಿ ಚುನಾವಣೆ ಅಕ್ರಮ ತಡೆಯಲು ಭಾರತ ಚುನಾವಣೆ ಆಯೋಗವು ವೇಳಾಪಟ್ಟಿ ಘೋಷಿಸಿದ ದಿನದಿಂದ (ಮಾರ್ಚ್‌ 10) ಈ ವರೆಗಿನ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಅಬಕಾರಿ ಹಾಗೂ ಪೊಲೀಸ್‌ ಕಣ್ಗಾವಲು ತಂಡಗಳು 2.02 ಕೋಟಿ ಅಂದಾಜು ಮೌಲ್ಯದ ಒಟ್ಟು 50,799.34 ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ. 59.26 ಲಕ್ಷ ರೂ. ಮೌಲ್ಯದ ಇತರ ಸಾಮಗ್ರಿಗಳಾದ 21 ಬೈಕ್‌, 1 ಕ್ಯಾಂಟರ್‌, 1 ಆಟೋ, 2 ಟ್ರಕ್‌, 11 ಗ್ಯಾಸ್‌ ಸಿಲಿಂಡರ್‌, 11 ರೆಗ್ಯೂಲೆಟರ್, 11 ಸ್ಟೌವ್‌, 1 ಟಾಟಾ ಏಸ್‌ ಮೋಟರ್‌, 11 ಗ್ಯಾಸ್‌ ಸಿಲಿಂಡರ್‌ ಬೆನಿಫಿಶಿಯರಿ ಕಾರ್ಡ್‌ಗಳನ್ನು, 240 ರುಚಿಗೋಲ್ಡ್ ಪಾಲ್ಮ್ ಆಯಿಲ್ ಬಾಕ್ಸ್‌, 240 ರುಚಿ ಗೋಲ್ಡ್ ಟಿನ್‌, 15 ಸ್ಟೀಲ್ ಟೇಬಲ್ಸ್, 95 ರೆಡ್‌ ಪ್ಲಾಸ್ಟಿಕ್‌ ಚೇರ್, 20 ಲೀ. 5 ಪ್ಲಾಸ್ಟಿಕ್‌ ವಾಟರ್‌ ಕ್ಯಾನ್‌ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈವರೆಗೆ ಒಟ್ಟು 1.54 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ ಸಂಚಾರಿ ದಳದಿಂದ 2, ಸ್ಥಿರ ಕಣ್ಗಾವಲು ತಂಡದಿಂದ 1 ಹಾಗೂ ಪೊಲೀಸ್‌ ಮತ್ತು ಅಬಕಾರಿ ಅಧಿಕಾರಿಗಳಿಂದ 368 ಸೇರಿದಂತೆ ಒಟ್ಟಾರೆ 371 ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.

ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಸದಸ್ಯ ಕಾರ್ಯದರ್ಶಿ ಟಿ. ದಿನೇಶ ಉಪಸ್ಥಿತರಿದ್ದರು.

ಏ.21ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಅಂದು ಸಂಜೆ 6 ಗಂಟೆಗೆ ಚುನಾವಣೆ ಪ್ರಚಾರ ಅವಧಿ ಕೊನೆಗೊಂಡಿದ್ದು, ಈ ಕ್ಷೇತ್ರದ ಮತದಾರರಲ್ಲದವರು ರಾಜಕೀಯ ಅಧಿಕಾರಸ್ಥರು, ಪಕ್ಷಗಳ ಕಾರ್ಯಕರ್ತರು, ಮೆರವಣಿಗೆಗೆ ಸಂಬಂಧಿಸಿದ ಹಾಗೂ ಪ್ರಚಾರ ಕಾರ್ಯಕರ್ತರು, ಕ್ಷೇತ್ರ ಬಿಟ್ಟು ಹೊರಹೋಗಬೇಕು.
• ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಶಾಂತಿ, ಸುವ್ಯವಸ್ಥೆಯಿಂದ ನಿರ್ವಹಿಸಲು 4 ಡಿಎಸ್ಪಿ, 12 ಸಿಪಿಐ, 27 ಪಿಎಸೈ, 19 ಎಸೈ, 700 ಪೊಲೀಸ್‌ ಸಿಬ್ಬಂದಿ, ಗೃಹರಕ್ಷಕರು ಸೇರಿದಂತೆ 1500ಕ್ಕೂ ಸಿಬ್ಬಂದಿ ಹೆಚ್ಚಿನ ಭದ್ರತೆಗಾಗಿ ಜಿಯೋಜಿಸಲಾಗಿದೆ. ಅದರೊಂದಿಗೆ ಡಿಎಆರ್‌ ಎರಡು ಕಂಪನಿಗಳು, ಹೆಚ್ಚುವರಿಯಾಗಿ ಹೊರಗಿನಿಂದ ಅರೆ ಸೇನಾ ಪಡೆಗಳು ಭದ್ರತಾ ಕಾರ್ಯದಲ್ಲಿ ತೊಡಗುವರು. ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಕ್ರಮ ಜರುಗಿಸಲಾಗಿದೆ. ಮುಂಜಾಗ್ರತೆಯಾಗಿ ಚುನಾವಣೆ ಸಂದರ್ಭದಲ್ಲಿ ಅಶಾಂತಿ, ಅವ್ಯವಸ್ಥೆ ಉಂಟು ಮಾಡುವವರ ವಿರುದ್ಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ.
• ಶ್ರೀನಾಥ ಜೋಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next