Advertisement

ವಿಕ್ರಂ ಸಿಂಹ ಪ್ರಕರಣದಲ್ಲಿ ಸಿದ್ದು ಪಾತ್ರದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ: ಎಚ್‌ಡಿಕೆ

09:33 PM Jan 06, 2024 | Pranav MS |

ಬೆಂಗಳೂರು: ದಾಖಲೆ ಇಟ್ಟುಕೊಂಡೇ ವಿಕ್ರಂ ಸಿಂಹ ಪ್ರಕರಣದ ಬಗ್ಗೆ ಮಾತನಾಡಿದ್ದೇನೆ. ಬೇಕಿದ್ದರೆ ದಾಖಲೆಗಳನ್ನು ನಾನೇ ತಂದುಕೊಡುತ್ತೇನೆ. ಅದನ್ನು ತೆಗೆದುಕೊಂಡು ಎಲ್ಲಿಗೆ ಬರಲಿ? ದಾಖಲೆಗಳನ್ನು ಆಧರಿಸಿ ಕ್ರಮ ಜರಗಿಸುವ ಧೈರ್ಯ ತೋರುವಿರಾ ಅಥವಾ ಪಲಾಯನ ಮಾಡುವಿರಾ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪರಮೇಶ್ವರ್‌ ಮತ್ತು ಹಾಸನದ ಉಸ್ತುವಾರಿ, ಸಹಕಾರ ಸಚಿವ ಕೆ. ಎನ್‌. ರಾಜಣ್ಣ ಅವರಿಗೆ ಸವಾಲು ಹಾಕಿದ್ದಾರೆ.

Advertisement

ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಅವರ ಸೋದರ ವಿಕ್ರಂ ಸಿಂಹ ಅವರ ಬಂಧನ ಪ್ರಕರಣದಲ್ಲಿ ಸಿಎಂ ಪಾತ್ರವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಆರೋಪಿಸಿದ್ದರು. ಇದನ್ನು ತಳ್ಳಿಹಾಕಿದ್ದ ಪರಮೇಶ್ವರ್‌ ಮತ್ತು ರಾಜಣ್ಣ ಅವರು, ಕುಮಾರಸ್ವಾಮಿ ಏನೇನೋ ಹೇಳುತ್ತಾರೆ, ಅದಕ್ಕೆಲ್ಲ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ “ಎಕ್ಸ್‌’ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿರುವ ಕುಮಾರಸ್ವಾಮಿ, ನಾನು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆಲ್ಲವೂ ಅಪ್ಪಟ ಸತ್ಯ. ದಾಖಲೆ ಇಟ್ಟುಕೊಂಡೇ ಹೇಳಿದ್ದೇನೆ. ವಿಕ್ರಂ ಸಿಂಹ ಮರ ಕಡಿದಿದ್ದರೆ ಎಫ್ಐಆರ್‌ನಲ್ಲಿ ಅವರ ಹೆಸರು ಯಾಕಿಲ್ಲ ಎಂದು ಎಫ್ಐಆರ್‌ನ ಪ್ರತಿಯನ್ನು ತಮ್ಮ “ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಪ್ರತಾಪಸಿಂಹ ಅವರನ್ನು ಮುಗಿಸಲು ಹೂಡಿದ ಟರ್ಮಿನೇಟರ್‌ ಸಿನೆಮಾ ಇದು. ಅದರ ಹಿಂದಿರುವ ಸಿದ್ಧ ಸೂತ್ರಧಾರನ ಕಳ್ಳಹೆಜ್ಜೆಗಳನ್ನು ನಾನು ಕಾಣದವನೇನೂ ಅಲ್ಲ. ಇಡೀ ವಿಕ್ರಂಸಿಂಹ ಅಂಕಣಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಿನ್ನೆಲೆ ಸಂಗೀತ, ಎಲ್ಲವೂ ಮುಖ್ಯಮಂತ್ರಿ ಸಿದ್ದರಾಮಣ್ಣ ಅವರದ್ದು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಅಧಿಕಾರಿಯೊಬ್ಬರಿಂದ 50 ಲಕ್ಷ ರೂ. ಕಿತ್ತ ನಿಮ್ಮ ಪಕ್ಷದ ಶಾಸಕರ ಬಗೆಗಿನ ನಿಮ್ಮ ಮೌನ ಅಸಹ್ಯ. ನಿಮ್ಮ ಲಜ್ಜೆಗೆಟ್ಟ ಸರಕಾರ ಎಸಗಿದ ತಪ್ಪಿಗೆ ದಲಿತ ಅಧಿಕಾರಿಗೆ ಶಿಕ್ಷೆಯೇ? ಇದೆಲ್ಲದರ ಚಿದಂಬರ ರಹಸ್ಯ ಯಶವಂತಪುರ ಫ್ಲಾಟ್‌ನಲ್ಲಿ ಅಡಗಿದೆ. ಯಾವ ತನಿಖೆ ಮಾಡುತ್ತೀರಿ ಎಂದು ಪರಮೇಶ್ವರ್‌ ಮತ್ತು ರಾಜಣ್ಣರನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next