Advertisement
ನಗರದಲ್ಲಿ ಮಂಗಳವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಂಪುಟ ವಿಸ್ತರಣೆ, ಕಾಂಗ್ರೆಸ್‌ನಲ್ಲಿನ ಹಿರಿಯ ನಾಯಕರ ಅಪಸ್ವರ, ಇದರಿಂದ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರು ಕುಮಾರಸ್ವಾಮಿಯವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿ, ಸರ್ಕಾರ ಉಳಿಸಿಕೊಳ್ಳಲು ನಾವು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧವಿದ್ದೇವೆ ಎಂದು ಹೇಳಿದರು.
Related Articles
Advertisement
ಜೆಡಿಎಸ್‌ನ ಕೋಟಾದಡಿ ಇರುವ ಎರಡು ಸಚಿವ ಸ್ಥಾನಗಳ ಪೈಕಿ ಒಂದನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟು ಇನ್ನೊಂದನ್ನು ನಾವೇ ಇಟ್ಟುಕೊಳ್ಳಬೇಕು. ಜೆಡಿಎಸ್ ಶಾಸಕರಿಗೆ ಅವಕಾಶ ಮಾಡಿಕೊಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಯಿಂದ ನಮಗೆ ಹಿನ್ನಡೆಯಾಯಿತು.
ಕಾಂಗ್ರೆಸ್ ನಾಯಕರು ಎಲ್ಲೆಡೆ ಪೂರ್ತಿ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ತುಮಕೂರು ಹಾಗೂ ಮಂಡ್ಯ ಕ್ಷೇತ್ರಗಳನ್ನು ನಾವು ಗೆಲ್ಲಬೇಕಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಆಗಿ ಹೋಗಿದ್ದರ ಬಗ್ಗೆ ಮತ್ತೆ ಕೆದಕಿ ಪ್ರಯೋಜನವಿಲ್ಲ. ಇದೀಗ ಸರ್ಕಾರ ಉಳಿಸಿಕೊಂಡು ಪಕ್ಷ ಕಟ್ಟುವುದು ನಮ್ಮ ಮೊದಲ ಆದ್ಯತೆಯಾಗಬೇಕು.
ಜೆಡಿಎಸ್ ಬಲವರ್ಧನೆಗೆ ಹೆಚ್ಚು ಗಮನ ಹರಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ್ತಷ್ಟು ಶ್ರಮ ಹಾಕಿದ್ದರೆ ಉತ್ತಮ ಫಲಿತಾಂಶ ಬರುತ್ತಿತ್ತು. ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಸಭೆಯಲ್ಲಿ ದೇವೇಗೌಡರು ತಿಳಿಸಿದರು ಎನ್ನಲಾಗಿದೆ.
ವಿಶ್ವನಾಥ್ ಮನವೊಲಿಕೆಗೆ ಯತ್ನ: ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ರಾಜೀನಾಮೆ ವಿಚಾರವೇ ಪ್ರಮುಖವಾಗಿ ಚರ್ಚೆಯಾಗಿ, ದೇವೇಗೌಡರು, ಕುಮಾರಸ್ವಾಮಿ ಸಹಿತ ಎಲ್ಲ ಶಾಸಕರು ರಾಜೀನಾಮೆ ನಿರ್ಧಾರ ವಾಪಸ್ ಪಡೆಯುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜೆಪಿ ನಗರ ನಿವಾಸದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, “ಪಕ್ಷ ಸಂಘಟನೆಗೆ ನಾವೆಲ್ಲರೂ ನಿಮ್ಮ ಜತೆಗೂಡುತ್ತೇವೆ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನಿಮ್ಮ ನಾಯಕತ್ವದಲ್ಲೇ ಪಕ್ಷ ಕಟ್ಟೋಣ’ ಎಂದು ಹೇಳಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎರಡು ದಿನ ಕಾಲಾವಕಾಶ ತೆಗೆದುಕೊಂಡು ನಿಮ್ಮ ನಿರ್ಧಾರ ತಿಳಿಸಿ. ಏನಾದರೂ ವ್ಯತ್ಯಾಸ ಆಗಿದ್ದರೆ ಸರಿಪಡಿಸೋಣ ಎಂದು ತಿಳಿಸಿದರು. ಆದರೆ, ತಮ್ಮನ್ನು ಬಲವಂತ ಮಾಡಬೇಡಿ. ನನಗೆ ಆರೋಗ್ಯವೂ ಕೈ ಕೊಡುತ್ತಿದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಹೇಳಿದರು. ಆದರೆ, ರಾಜೀನಾಮೆ ಅಂಗೀಕಾರ ಕುರಿತು ಯಾವುದೇ ತೀರ್ಮಾನವಾಗಲಿಲ್ಲ ಎಂದು ಹೇಳಲಾಗಿದೆ.
ಕಣ್ಣಲ್ಲಿ ನೀರು ತುಂಬಿಕೊಂಡ ಗೌಡರು: ವಿಶ್ವನಾಥ್ ರಾಜೀನಾಮೆ ಬಗ್ಗೆ ಒಂದು ಹಂತದಲ್ಲಿ ದೇವೇಗೌಡರು ಭಾವನಾತ್ಮಕವಾಗಿ ಮಾತನಾಡಿ, ಕಣ್ಣಲ್ಲಿ ನೀರು ತುಂಬಿಕೊಂಡರು. “ಯಾಕೆ ಹೀಗೆ ಮಾಡಿದಿರಿ, ದಯಮಾಡಿ ರಾಜೀನಾಮೆ ವಾಪಸ್ ಪಡೆಯಿರಿ. ನೀವು ರಾಜೀನಾಮೆ ಪತ್ರದಲ್ಲಿ ಬಳಸಿದ ಪದಗಳು ಸರಿಯಾಗಿವೆ. ಯಾವ ಕೊಂಕು ನುಡಿಯೂ ಇಲ್ಲದೆ ಎಲ್ಲವನ್ನೂ ಹೇಳಿದ್ದೀರಿ. ನಿಮ್ಮ ಅನುಭವ ಪಕ್ಷಕ್ಕೆ ಬೇಕು. ಶಾಸಕರಿಗೆ ನಿಮ್ಮ ಮಾರ್ಗದರ್ಶನ ಬೇಕು’ ಎಂದು ಹೇಳಿದರು.