Advertisement
ಮತ ಎಣಿಕೆ ಕಾರ್ಯ ಗುರುವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತಪೆಟ್ಟಿಗೆ ಎಣಿಕೆಗೆ 14 ಕೊಠಡಿಗಳು ಸಿದ್ಧಗೊಂಡಿವೆ. 6 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತಲಾ ಎರಡು ಕೊಠಡಿಗಳಲ್ಲಿ ಹಾಗೂ ಕಾರ್ಕಳ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರ ಮತ ಎಣಿಕೆ ತಲಾ ಒಂದು ಕೊಠಡಿಗಳಲ್ಲಿ ನಡೆಸಲಾಗುತ್ತದೆ.
ಪ್ರತಿಯೊಂದು ಕ್ಷೇತ್ರವಾರು ಮತ ಎಣಿಕೆಯ ಕೊಠಡಿಯಲ್ಲಿ ಓರ್ವ ಎಆರ್‌ಓ, 8 ಸಹಾಯಕ ಚುನಾವಣಾಧಿಕಾರಿ ಹಾಗೂ 6 ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ ಗಳಿರುತ್ತಾರೆ. 127 ಮತ ಎಣಿಕೆ ಮೇಲ್ವಿಚಾರಕರು, 131 ಮತ ಎಣಿಕೆ ಸಹಾಯಕರು, 127 ಮೈಕ್ರೋ ಅಬ್ಸರ್‌ವರ್‌ಗಳನ್ನು ಹಾಗೂ 127 ಡಿ ದರ್ಜೆ ಸಿಬಂದಿಯನ್ನು ನೇಮಿಸಲಾಗಿದೆ. ಉಡುಪಿ ಜಿಲ್ಲೆಯ ಅಧಿಕಾರಿಗಳು ಉಡುಪಿ, ಕಾರ್ಕಳ, ಕಾಪು, ಕುಂದಾಪುರ ವಿಧಾನ ಸಭಾಕ್ಷೇತ್ರಗಳ ಮತ ಎಣಿಕೆ ಜವಾಬ್ದಾರಿ ಹೊಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಅಲ್ಲಿಂದ ಮಂಗಳವಾರ ರಾತ್ರಿ ಅಧಿಕಾರಿಗಳು ಉಡುಪಿಗೆ ಆಗಮಿಸಿದ್ದಾರೆ.
Related Articles
ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಒಟ್ಟು 534 ಭದ್ರತಾ ಸಿಬಂದಿಯನ್ನು ನೇಮಿಸಲಾಗಿದ್ದು, ಚುನಾವಣ ಆಯೋಗದಿಂದ ಪಾಸ್ ಹೊಂದಿದವರಿಗೆ ಮಾತ್ರ ಎಣಿಕೆ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಶಾಲೆಯ ಸುತ್ತಮುತ್ತ ಇರುವ ಫ್ಲ್ಯಾಟ್ ಮತ್ತು ಮನೆಯವರಿಗೆ ಪಾಸ್ ವಿತರಿಸಲಾಗಿದ್ದು, ಭದ್ರತಾ ದೃಷ್ಟಿಯಿಂದ 130ಕ್ಕೂ ಹೆಚ್ಚು ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಭದ್ರತೆಗಾಗಿ 1 ಸಿಆರ್‌ಪಿಎಫ್ ತುಕಡಿ, 3 ಕೆಎಸ್‌ಆರ್‌ಪಿ ತುಕಡಿ, 90 ಹೋಮ್ ಗಾರ್ಡ್ಸ್ ಹಾಗೂ 335 ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ 4 ಗಂಟೆಯಿಂದ ಮತ ಎಣಿಕೆ ಕೇಂದ್ರ ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಹೊಸ ಸಂಚಾರ ನಿಯಮವನ್ನು ಅನುಷ್ಠಾನಗೊಳಸಲಾಗುತ್ತದೆ.
Advertisement
ತಿಂಗಳಿನಿಂದ ಬಿಗಿ ಭದ್ರತೆ ಎಪ್ರಿಲ್ 18ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ನಡೆದಿದ್ದು, ಸುಮಾರು 35 ದಿನ ಭದ್ರತಾ ಸಿಬಂದಿ ಪಾಳಿಯಲ್ಲಿ ಮತ ಯಂತ್ರಗಳಿಗೆ ಭದ್ರತೆ ಒದಗಿಸಿದ್ದಾರೆ. 34 ಮಂದಿ ಕೇಂದ್ರ ಮೀಸಲು ಪೊಲೀಸ್ ಸಿಬಂದಿ, 1 ಕೆಎಸ್‌ಆರ್‌ಪಿ ತುಕಡಿ, ಓರ್ವ ಎಸ್‌ಐ, ಇಬ್ಬರು ಎಎಸ್‌ಐ, ಮೂವರು ಹೆಡ್‌ಕಾನ್‌ಸ್ಟೆಬಲ್, 14 ಮಂದಿ ಪೊಲೀಸ್ ಸಿಬಂದಿ, 24 ಸಿವಿಲ್ ಸಿಬಂದಿ ಮೂರು ಪಾಳಿಯಲ್ಲಿ ನಿಗಾ ವಹಿಸಿದ್ದರು. ವಾಹನ ಸವಾರರ ಗಮನಕ್ಕೆ
– ಬ್ರಹ್ಮಗಿರಿ ಜಂಕ್ಷನ್‌ನಿಂದ ಅಜ್ಜರಕಾಡು ಎಲ್.ಐ.ಸಿ. ಕಚೇರಿವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಿ, ಮತ ಎಣಿಕೆ ಸಮಯದಲ್ಲಿ ಆಗಮಿಸುವ ಸಾರ್ವಜನಿಕರ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. – ಅಜ್ಜರಕಾಡು ಟೌನ್‌ಹಾಲ್‌ನಿಂದ ಬ್ರಹ್ಮಗಿರಿ ಜಂಕ್ಷನ್‌ವರೆಗೆ ಇರುವ ಏಕಮುಖ ಸಂಚಾರದ ಬದಲಿಗೆ ದ್ವಿಮುಖ ಸಂಚಾರ ಕಲ್ಪಿಸಲಾಗಿದೆ. – ಅಜ್ಜರಕಾಡು ಲಾಲ್ ಬಹದ್ದೂರ್ ಶಾಸಿŒ ರಸ್ತೆಯಿಂದ ಎಲ್.ಐ.ಸಿ -ಕ್ರಾಸ್‌ವರೆಗೆ ಸಾರ್ವಜನಿಕರು ಸೇರಿದಂತೆ ಯಾವುದೇ ರೀತಿಯ ವಾಹನಗಳ ಓಡಾಟವನ್ನು ನಿಷೇಧಿಸಿ, ಈ ಮಾರ್ಗವಾಗಿ ಬರುವ ಮತ ಎಣಿಕೆ ಸಿಬಂದಿ, ಏಜೆಂಟ್ ಅಭ್ಯರ್ಥಿಗಳಿಗೆ, ಮಾಧ್ಯಮದವರಿಗೆ, ಲಘು ಮೋಟಾರ್ ವಾಹನಗಳಿಗೆ ಸುದರ್ಶನ್ ಅಪಾರ್ಟ್‌ಮೆಂಟ್ ಹಾಗೂ ಅದರ ಎದುರಿನ ಖಾಲಿ ಜಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. – ಸೈಂಟ್ ಸಿಸಿಲಿಯ ಕಾನ್ವೆಂಟ್ ರಸ್ತೆ ಬ್ರಹ್ಮಗಿರಿ ಮಾರ್ಗವಾಗಿ ಜಗನ್ನಾಥ್ ನಾಯಕ್ ಕ್ರಾಸ್ ರಸ್ತೆವರೆಗೆ ಹೋಗುವ ಮತ್ತು ಬರುವ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಪಾಸ್ ನೀಡಲಾಗಿದೆ. – ನಾಯಕ್ ಕ್ಯಾಂಟೀನ ಬಳಿಯ ಅಂಬೇಡ್ಕರ್ ರಸ್ತೆಯಿಂದ ವಿದ್ಯಾರಣ್ಯ ರಸ್ತೆಯವರೆಗೆ ಹೋಗುವ ಮತ್ತು ಬರುವ ಎಲ್ಲ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಿ, ಅಲ್ಲಿನ ನಿವಾಸಿಗಳಿಗೆ ಮಾತ್ರ ಪಾಸ್ ನೀಡಲಾಗಿದೆ. – ಬ್ರಹ್ಮಗಿರಿಯಿಂದ ಬಾಲಭವನದ ರಸ್ತೆ ಮುಖೇನ ವಿದ್ಯಾರಣ್ಯ ರಸ್ತೆ ಮೂಲಕ ಅಲಂಕಾರ್ ಥಿಯೇಟರ್ ರಸ್ತೆಯಿಂದಾಗಿ ಬಸ್ ಸ್ಟ್ಯಾಂಡ್‌ಗೆ ಸಂಪರ್ಕ ಕಲ್ಪಿಸಲಾಗಿದೆ. – ಎಲ್.ಐ.ಸಿ. ಜಂಕ್ಷನ್‌ನಿಂದ ಹರ್ಷ ಜಂಕ್ಷನ್ ಮೂಲಕ ಸಿಂಡಿಕೇಟ್ ಸರ್ಕಲ್‌ನಿಂದಾಗಿ ಬಸ್ ಸ್ಟ್ಯಾಂಡ್‌ಗೆ ಸಂಪರ್ಕ ಕಲ್ಪಿಸಲಾಗಿದೆ.