Advertisement
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಆರೋಪದ ಮಾಡಿದ ಬೆನ್ನಲ್ಲೇ ಆಸ್ಪತ್ರೆಯಿಂದಲೇ ನೇರವಾಗಿ ಬಂದು ಪತ್ರಿಕಾಗೋಷ್ಠಿ ನಡೆಸಿದ ಅವರು, “ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವುದನ್ನು ಬಿಜೆಪಿ ಒಪ್ಪಿಕೊಂಡಂತಾಗಿದೆ” ಎಂದರು. ಅಲ್ಲದೆ, “”ನಾನು ಪಕ್ಷ ಹಾಗೂ ಯಾವುದೇ ನಾಯಕರಿಗೆ ಹಣ ನೀಡಿಲ್ಲ. ಬಿಜೆಪಿಯವರು ರಾಹುಲ್ ಗಾಂಧಿ ಅವರಿಂದ ಉತ್ತರ ಬಯಸುತ್ತಿದ್ದಾರೆ. ಅವರಿಗೆ ಉತ್ತರಿಸಲು ನಾನೊಬ್ಬನೇ ಸಾಕು. ಈ ಬಗ್ಗೆ ನಾನು ದೆಹಲಿಯಲ್ಲಿಯೂ ಪತ್ರಿಕಾಗೋಷ್ಠಿ ನಡೆಸಿ ಉತ್ತರಿಸುತ್ತೇನೆ” ಎಂದು ಹೇಳಿದರು.
“ಜಾರಿ ನಿರ್ದೇಶನಾಲಯದಿಂದ ನನಗೆ ಇದುವರೆಗೂ ಯಾವುದೇ ನೊಟೀಸ್ ಬಂದಿಲ್ಲ. ನನಗೆ ನೊಟೀಸ್ ಬಂದರೆ ಸೂಕ್ತ ಉತ್ತರ ಕೊಡುತ್ತೇನೆ. ಅವರು ನನ್ನ ರಕ್ತ ಕೇಳಿದರೂ ಕೊಡುತ್ತೇನೆ. ಬಿಜೆಪಿ ನಾಯಕರು ಅನಗತ್ಯವಾಗಿ ನನ್ನ ಪಕ್ಷ ಹಾಗೂ ರಾಷ್ಟ್ರೀಯ ನಾಯಕರನ್ನು ಎಳೆದು ತರುತ್ತಿದ್ದಾರೆ. ಗೋವಿಂದ್ ರಾಜ್ ಡೈರಿ ವಿಷಯವನ್ನು ಈಗ ಪ್ರಸ್ತಾಪಿಸುತ್ತಿದ್ದಾರೆ. ಎಸ್‌ಜಿ, ಆರ್‌ಜಿ ಎಂದು ಹೆಸರುಗಳನ್ನು ಹೇಳುತ್ತಿದ್ದಾರೆ. ಎಲ್.ಕೆ. ಅಡ್ವಾಣಿ ಹಾಗೂ ಇತರರ ಡೈರಿ ಪ್ರಕರಣದಲ್ಲಿ ಕೋರ್ಟ್ ಏನು ಆದೇಶ ನೀಡಿದೆಯೋ ಅದೇ ಕಾನೂನು ನನ್ನನ್ನು ರಕ್ಷಿಸುವುದಿಲ್ಲವೇ? ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎರಡು ಮೂರು ದಿನದಲ್ಲಿ ನನ್ನನ್ನು ಜೈಲಿಗೆ ಕಳುಹಿಸಿ, ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ. ರಾಜಕೀಯ ಯಾರಿಗೂ ಶಾಸ್ವತವಲ್ಲ. ನನ್ನ ಜೈಲಿಗೆ ಕಳುಹಿಸಿದರೂ ಎಲ್ಲವನ್ನೂ ಎದುರಿಸಲು ಸಿದ್ದನಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗುವುದಿಲ್ಲ” ಎಂದು ಹೇಳಿದರು.
Related Articles
“ದೆಹಲಿ ನಿವಾಸದಲ್ಲಿ ಕೇವಲ 41 ಲಕ್ಷ ರೂಪಾಯಿ ಪತ್ತೆಯಾಗಿದೆ. ಅದಕ್ಕೆ ನಾನು ದಾಖಲೆ ನೀಡಿದ್ದೇನೆ. ನನ್ನ ಆಪ್ತರು ಹಾಗೂ ಸ್ನೇಹಿತರ ಮನೆಗಳಲ್ಲಿ ದೊರೆತ ಹಣ ಹಾಗೂ ದಾಖಲೆಗಳು ನನಗೆ ಸೇರಿದ್ದು ಎಂದು ಒತ್ತಾಯ ಪೂರ್ವಕವಾಗಿ ಅವರಿಂದ ಹೇಳಿಸಿದ್ದಾರೆ” ಎಂದು ಆರೋಪಿಸಿದರು. ಕರ್ನಾಟಕ “”ಭವನ ಸಹಾಯಕನ ಬಳಿ ದೊರೆತಿರುವ ಹಣ ಯಾರದ್ದು ಎಂದು ನನಗೆ ಗೊತ್ತಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.
Advertisement
“ನಾನು ಯಾವುದೇ ಹವಾಲಾ ವ್ಯವಹಾರ ನಡೆಸಿಲ್ಲ. ಕೊಲೆ, ದರೋಡೆ ಮಾಡಿಲ್ಲ. ಜೈಲಿನಲ್ಲಿದವರು ಮುಖ್ಯಮಂತ್ರಿಯಾಗಿದ್ದಾರೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ನನಗೆ ಬಂಧನದ ಭಯವಿಲ್ಲ. ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಅಗತ್ಯವೂ ಇಲ್ಲ. ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ. ಬಿಜೆಪಿ ನಾಯಕರೇ ನ್ಯಾಯಾಧೀಶರಾಗಿದ್ದಾರೆ. ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಮಾಧ್ಯಮಗಳ ಮೂಲಕ ಪ್ರಯತ್ನ ನಡೆಸಿದ್ದಾರೆ. ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರೇ ನನ್ನ ಸಹೋದರನ ಮುಂದೆ ಹೇಳಿದ್ದಾರೆ” ಎಂದು ಆರೋಪಿಸಿದರು.
“ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 1 ಕೋಟಿ 36 ಲಕ್ಷ ರೂ. ಚೆಕ್ ಮೂಲಕ ಲಂಚ ಪಡೆದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ದಾಖಲೆ ಬಿಡುಗಡೆ ಮಾಡಿದ್ದಾರೆ. ನಾನು ಯಾವುದೇ ರೀತಿಯ ಅವ್ಯವಹಾರ ಮಾಡಿಲ್ಲ. ನನ್ನ ಕೃಷಿ ಹಾಗೂ ವ್ಯಾಪಾರದಿಂದ ಬಂದ ಆದಾಯಕ್ಕೆ ತೆರಿಗೆ ಕಟ್ಟಿದ್ದೇನೆ” ಎಂದರು.
ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಜೈಲಿಗೆ ಹಾಕಿದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಲು ಬಿಡುವುದಿಲ್ಲ. ನನ್ನ ವಿರುದ್ಧ ಏನೇನು ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಇದು ನಮ್ಮ ಪಕ್ಷದ ವಿಚಾರ ಹೀಗಾಗಿ ಅವರನ್ನು ಇದರಲ್ಲಿ ಎಳೆದು ತರುವುದಿಲ್ಲ.– ಡಿ.ಕೆ. ಶಿವಕುಮಾರ್, ಸಚಿವ ಆರೋಗ್ಯ ವಿಚಾರಿಸಿದ ಸೋಮಣ್ಣ
ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವಿ.ಸೋಮಣ್ಣ ಅವರು ಡಿ.ಕೆ.ಶಿವಕುಮಾರ್ ಆರೋಗ್ಯ ವಿಚಾರಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಬುಧವಾರ ರಾಜ್ಯ ಬಿಜೆಪಿ ವಿಶೇಷ ಸಭೆಯಲ್ಲಿ ಭಾಗವಹಿಸಿದ ನಂತರ ನೇರವಾಗಿ ಅಪೋಲೋ ಆಸ್ಪತ್ರೆಗೆ ತೆರಳಿದ ಸೋಮಣ್ಣ ಅವರು ಶಿವಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು, ಆಪರೇಷನ್ ಹಸ್ತ ಕಾರ್ಯಾಚರಣೆ ನಡೆಯುತ್ತಿದೆ. ವಿ.ಸೋಮಣ್ಣ ಸಹ ಲಿಸ್ಟ್‌ನಲ್ಲಿದ್ದಾರೆ ಎಂಬ ಮಾತುಗಳ ನಡುವೆ ಈ ಭೇಟಿ ನಾನಾ ವಾಖ್ಯಾನಗಳಿಗೆ ಕಾರಣವಾಗಿದೆ. ಆದರೆ, ಇದೊಂದು ಸೌಜನ್ಯ ಭೇಟಿ. ರಾಜಕಾರಣ ಬೇರೆ, ವೈಯಕ್ತಿಕ ಸಂಬಂಧ ಬೇರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ಕಾರಣ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸೋಮಣ್ಣ ತಿಳಿಸಿದ್ದಾರೆ.