Advertisement

 ಡಿಸಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧ

08:39 PM Mar 17, 2021 | Team Udayavani |

ಚಿಕ್ಕಮಗಳೂರು: ರಾಜ್ಯಾದ್ಯಂತ ಕಂದಾಯ ಇಲಾಖೆ ನೂತನವಾಗಿ ಜಾರಿಗೆ ತಂದಿರುವ “ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ’ ಎರಡನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾ.20ರಂದು ಜಿಲ್ಲೆಯ ತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿ ನಂದಿಬಟ್ಟಲು ಗ್ರಾಮದಲ್ಲಿ ಆಯೋಜಿಸಲಾಗಿದ್ದು ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Advertisement

“ಜಿಲ್ಲಾ ಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ’ ಜಿಲ್ಲೆಯಲ್ಲಿ ಪ್ರಥಮವಾಗಿ ಲಕ್ಯಾ ಹೋಬಳಿ ಕರುಬರ ಬೂದಿಹಾಳ್‌ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹರಿಸಿದರೆ ಕಠಿಣ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಲಾಗಿದೆ.

ಎರಡನೇ ಕಾರ್ಯಕ್ರಮ ನಂದಿಬಟ್ಟಲು ಗ್ರಾಮದಲ್ಲಿ ಆಯೋಜಿಸಿದ್ದು, ನಂದಿಬಟ್ಟಲು ಗ್ರಾಪಂ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು ವಾಸ್ತವ್ಯ ಹೂಡಲಿದ್ದು, ಅ ಧಿಕಾರಿಗಳ ವಾಸ್ತವ್ಯಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿ ನಂದಿಬಟ್ಟಲು ಗ್ರಾಪಂ 5 ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮದ ಜನತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮಗಳಲ್ಲಿ ಸ್ಮಶಾನ ಜಾಗ ಗುರುತಿಸದಿರುವುದರಿಂದ ಮೃತದೇಹವನ್ನು ತಮ್ಮ ಜಮೀನುಗಳಲ್ಲಿ ಅಂತ್ಯಸಂಸ್ಕಾರ ನಡೆಸಬೇಕಾಗಿದೆ.

ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗ ಗುರುತಿಸುವಂತೆ ಬೇಡಿಕೆ ಇದ್ದರೂ ಇದುವರೆಗೂ ನೆರವೇರಿಲ್ಲ. ಗ್ರಾಮದಲ್ಲಿ ನಿವೇಶನ ಸಮಸ್ಯೆ ದೊಡ್ಡಮಟ್ಟದಲ್ಲಿದ್ದು, 750ಕ್ಕೂ ಹೆಚ್ಚು ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಇದುವರೆಗೂ ನಿವೇಶನ ದೊರೆತಿಲ್ಲ. ಆಲೂಗಡ್ಡೆ ಸೇರಿದಂತೆ ಇತರೆ ಬೆಳೆ ಇಲ್ಲಿನ ಪ್ರಮುಖ ಬೆಳೆಯಾಗಿದ್ದು, ನೀರಿನ ಸಮಸ್ಯೆ ಅಷ್ಟಾಗಿ ಇಲ್ಲದಿದ್ದರೂ ವಿದ್ಯುತ್‌ ಸಮಸ್ಯೆ ಗ್ರಾಮಸ್ಥರನ್ನು ನಿರಂತರವಾಗಿ ಕಾಡುತ್ತಿದೆ. ವಯೋವೃದ್ಧರು ಮತ್ತು ಅಂಗವಿಕಲರು ಅರ್ಜಿ ಸಲ್ಲಿಸಿ 6ತಿಂಗಳು ಕಳೆದರೂ ವೃದ್ಧಾಪ್ಯ ವೇತನ ಮತ್ತು ಅಂಗವಿಕಲ ವೇತನ ದೊರೆತಿಲ್ಲ. ಗ್ರಾಮದಲ್ಲಿ ರಸ್ತೆ ಸಮಸ್ಯೆ ಇದ್ದು, ರಸ್ತೆಯನ್ನು ನಕಾಶೆಯಲ್ಲಿ ನಮೂದಿಸಲಾಗಿದೆ. ರಸ್ತೆ ಒತ್ತುವರಿಯಾಗಿದ್ದು ಜಮೀನುಗಳಿಗೆ ತೆರಳಲು ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ.

ಬಳ್ಳಾವರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಿದ್ದು, ಪಹಣಿಯಲ್ಲಿ ನಮೂದಿಸಲಾಗಿದೆ. ಆದರೆ, ಆರೋಗ್ಯ ಕೇಂದ್ರ ನಿರ್ಮಾಣವಾಗಿಲ್ಲ. ಅನಾರೋಗ್ಯಕ್ಕೆ ಒಳಗಾಗುವ ಜನರು ಪರದಾಡಬೇಕಾಗಿದೆ. ಅಕ್ರಮ ಸಕ್ರಮ ಯೋಜನೆಯಡಿ ಬಹುತೇಕರು ಅರ್ಜಿ ಸಲ್ಲಿಸಿದ್ದು ಅರ್ಜಿ ವಿಲೇವಾರಿಯಾಗಿಲ್ಲ. ಕಂದಾಯ ಮತ್ತು ಅರಣ್ಯ ಭೂಮಿ ಗ್ರಾಮದಲ್ಲಿ ಹೊಂದಿದ್ದು ಜಂಟಿ ಸರ್ವೇ ನಡೆಯದಿರುವುದರಿಂದ ಜನರು ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳಕ್ಕೆ ಜನರು ಒಳಗಾಗಬೇಕಾಗಿದೆ. ನಂದಿಬಟ್ಟಲು ಗ್ರಾಪಂ ಸುತ್ತಮುತ್ತ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದು, ಅದರಲ್ಲೂ ಕಾಡಾನೆ ಹಾವಳಿ ಜಾಸ್ತಿ ಇದೆ. ಕೆಲವರು ಮೃತಪಟ್ಟಿರುವ ಘಟನೆ ನಡೆದಿದೆ. ಕಾಡುಪ್ರಾಣಿ ದಾಳಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ವಿಳಂಬವಾಗುತ್ತಿದೆ. “ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕುವ ಆಶಾ ಭಾವನೆಯನ್ನು ಗ್ರಾಮಸ್ಥರು ಹೊಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next