Advertisement
ಕೃಷಿ ಸೆಳೆತನಿವೃತ್ತ ಜಿಲ್ಲಾ ನ್ಯಾಯಾಧೀಶ ಸೌಕೂರು ನಾರಾಯಣ ಶೆಟ್ಟಿ ಅವರ ಪುತ್ರ ರವಿರಾಜ ಅವರ ಹಿರಿಯ ಸಹೋದರ ಬೆಂಗಳೂರು ಡೆಂಟಲ್ ಕಾಲೇಜಿನ ಡೀನ್ ಹಾಗೂ ಪ್ರಾಚಾರ್ಯರಾಗಿದ್ದರು. ಆದರೆ ರವಿರಾಜರಿಗೆ ಮಾತ್ರ ಕೃಷಿಯ ಸೆಳೆತ ಉಂಟಾಗಿ ಊರಿಗೆ ಬಂದು ಕೃಷಿ ಮಾಡಬೇಕೆಂದು ಮನಸಾದವರೇ ಕೋಳಿ ಫಾರಂ ತೆರೆದರು. 40 ಸಾವಿರ ಕೋಳಿ ಸಾಕಿದರು. ಈಗಲೂ ಇವರ ನಂದಿ ಪೌಲ್ಟ್ರಿ ಫಾರಂನಲ್ಲಿ 15 ಸಾವಿರ ಬ್ರಾಯ್ಲರ್ ಕೋಳಿಗಳಿವೆ. ಇದರ ಜತೆಗೆ ಆರಂಭಿಸಿದ್ದೇ ಹೈನುಗಾರಿಕೆ ಮತ್ತು ಜೇನು ಸಾಕಾಣೆ.
ಈಗ 32 ಎಚ್‌ಎಫ್ ತಳಿಯ ಹಸುಗಳಿವೆ. 15ರಷ್ಟು ಕರುಗಳಿವೆ. ಪ್ರತೀ ಹಸುವೂ ದಿನಕ್ಕೆ 30-35 ಲೀ. ಹಾಲು ಕೊಡುತ್ತದೆ. ಇವಕ್ಕೆ ಆಹಾರ ಕೊಡಲು, ನೀರು ಕೊಡಲು ಸುವ್ಯವಸ್ಥಿತ ಹಟ್ಟಿ ರಚಿಸಿದ್ದಾರೆ. ಇನ್ನೊಂದು ಹಟ್ಟಿ ರಚನೆ ನಡೆಯುತ್ತಿದ್ದು ದಿನಕ್ಕೆ 1 ಸಾವಿರ ಲೀ. ಹಾಲು ಉತ್ಪಾದಿಸುವ ಗುರಿ ಹೊಂದಿದ್ದಾರೆ. ಕೃತಕ ಗರ್ಭಧಾರಣೆ ಉತ್ತಮವಲ್ಲ ಎಂದು ಬಲರಾಮ ಎಂಬ ಗೂಳಿಯನ್ನು ಕೋಲಾರದಿಂದ ಖರೀದಿಸಿ ಸಾಕಿದ್ದಾರೆ. ಪಶು ಆಹಾರಕ್ಕಾಗಿ 4 ಎಕರೆಯಲ್ಲಿ ಹುಲ್ಲು ಬೆಳೆಸುತ್ತಿದ್ದಾರೆ. ಜತೆಗೆ ಅಡಿಕೆ ಹಾಳೆ ಕತ್ತರಿಸಿ ಹಾಕುತ್ತಾರೆ. ಕೋಕೋಗೆ ಬೆಲೆ ಇಲ್ಲದಿದ್ದರೆ ತಲೆಬಿಸಿ ಇಲ್ಲ, ಹಸುಗಳಿಗೆ ದಷ್ಟಪುಷ್ಟವಾಗಲು ಅದೇ ಪೌಷ್ಠಿಕ ಆಹಾರ ಎನ್ನುತ್ತಾರೆ. ಸುಧಾರಿತ ವ್ಯವಸ್ಥೆ
ಸುಧಾರಿತ ವ್ಯವಸ್ಥೆಯಲ್ಲಿ ರಾಸುಗಳಿಗೆ ಫ್ಯಾನು, ಸೆಖೆಗೆ ಮೈಮೇಲೆ ಬೀಳುವಂತೆ ಶವರ್ ನೀರು, ಹಾಲು ಕರೆಯುವಾಗ ಮೆಲುದನಿಯಲ್ಲಿ ಸಂಗೀತ ಕೇಳಿಸುವ ವ್ಯವಸ್ಥೆ ಮಾಡಿದ್ದಾರೆ. ಸ್ವಯಂಚಾಲಿತವಾಗಿ ಕುಡಿಯುವ ನೀರು, ನೀರು ಹೆಚ್ಚಾದಾಗ ಮರಳಿ ಹೋಗುವ ವ್ಯವಸ್ಥೆ, ಹಟ್ಟಿ ತೊಳೆದ ನೀರು ತೋಟಕ್ಕೆ ಹನಿ ನೀರಾವರಿ ಮೂಲಕ ಬಿಡುವ ವ್ಯವಸ್ಥೆ, ರಾಸುಗಳ ಮೇಲ್ವಿಚಾರಕನಿಗೆ ಹಟ್ಟಿಯ ಬದಿಯಲ್ಲಿಯೇ ಪ್ರತ್ಯೇಕ ಕೊಠಡಿಯೂ ಇದೆ. ಇಷ್ಟು ಹಸುಗಳಿದ್ದ ಮೇಲೆ ಗೋಬರ್ ಅನಿಲ ಬೇಕೇ ಬೇಕಲ್ಲ. ಅದೂ ಇದೆ. ಇಂತಹ ಇಲ್ಲಿನ ಸಕಲ ಸುಸಜ್ಜಿತ ವ್ಯವಸ್ಥೆಯನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗದಿಂದ ರೈತರು ಬಂದು ಮಾಹಿತಿ ಪಡೆದು ಹೋಗಿ ಯಶಸ್ವಿ ಹೈನುಗಾರರಾದ ಉದಾಹರಣೆಗಳಿವೆ.
Related Articles
ಸುಮಾರು ಒಂದೆಕರೆ ಖಾಲಿ ಪ್ರದೇಶದಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಅಷ್ಟೂ ಹಸುಗಳನ್ನು ಅಡ್ಡಾಡಲು ಬಿಡಲಾಗುತ್ತದೆ. ಇದರಿಂದ ಅವುಗಳಿಗೆ ವ್ಯಾಯಾಮ ಆಗುತ್ತದೆ, ಅವುಗಳು ಓಡಾಡಿದ ಗದ್ದೆ ಫಲವತ್ತಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರವಿರಾಜ ಶೆಟ್ಟರು.
Advertisement
ಕಾರ್ಮಿಕರ ಕೊರತೆಸುಮಾರು 30 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿರುವ ಶೆಟ್ಟರಿಗೆ ಸಹಜವಾಗಿ ಕಾರ್ಮಿಕರ ಸಮಸ್ಯೆ ಇದೆ. ಸಾಕಷ್ಟು ಯಂತ್ರಾಧಾರಿತ ಕೃಷಿ ಇದ್ದರೂ 20ಕ್ಕಿಂತ ಅಧಿಕ ಮಂದಿ ಅರೆಕಾಲಿಕ ಕಾರ್ಮಿಕರಿದ್ದಾರೆ. ಕಾರ್ಮಿಕರಿಲ್ಲದೇ ರೇಶ್ಮೆಯಂತಹ ಕೃಷಿಯನ್ನು ನಿಲ್ಲಿಸಿದ್ದಾರೆ. ನೂರಾರು ಹಣ್ಣುಹಂಪಲಿನ ಗಿಡಗಳು, 120 ಕ್ವಿಂ.ಭತ್ತ, 4 ಸಾವಿರ ಅಡಿಕೆ ಮರ, ತೆಂಗು, ಕಾಳುಮೆಣಸು ಎಂದು ವೈವಿಧ್ಯ ಕೃಷಿ ಮಾಡಿದ್ದರೂ 40 ವರ್ಷಗಳಿಂದ ರಾಸಾಯನಿಕ ಬಳಸಿಲ್ಲ. ಶುದ್ಧ ಸಾವಯವ. ಸುಡುಮಣ್ಣು, ಕೋಳಿಗೊಬ್ಬರ, ಹಟ್ಟಿಗೊಬ್ಬರವೇ ಬಳಸಿ ಮಾರ್ಗದರ್ಶಿ ಸಾವಯವ ಸಾಧಕರಾಗಿದ್ದಾರೆ. ಪ್ರಾಣಿಪ್ರಿಯ
ರವಿರಾಜ ಶೆಟ್ಟರು ಪ್ರಾಣಿಪ್ರಿಯ. ಮೊದಲು ಜಿಂಕೆ, ಕಾಡುಹಂದಿ, ಲವ್‌ಬರ್ಡ್ಸ್ ಮೊದಲಾದವನ್ನು ಸಾಕುತ್ತಿದ್ದರು. ಅನಂತರ ಅವುಗಳನ್ನು ಇಲಾಖೆಗೆ ನೀಡಿ, ಈಗ ನೂರಾರು ಪಾರಿವಾಳಗಳನ್ನು ಸಾಕುತ್ತಿದ್ದಾರೆ. ಪ್ರಶಸ್ತಿಗಳ ಬೆನ್ನತ್ತಿಲ್ಲ
ಯಾವುದೇ ಪ್ರಶಸ್ತಿಗಳ ಬೆನ್ನತ್ತದ ಇವರು ಅಸೋಡು ಹಾಲು ಉತ್ಪಾದಕ ಸಂಘದ ಸ್ಥಾಪಕ ಅಧ್ಯಕ್ಷ, ಕಾಳಾವರ ಶ್ರೀ ಕಾಳಿಂಗ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ 5 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕೈಗೊಳ್ಳುತ್ತಿದ್ದಾರೆ. ನಿಶ್ಚಿತ ಬೆಲೆ ಬೇಕು
ಕೃಷಿ ಉತ್ಪನ್ನಗಳಿಗೆ ನಿಶ್ಚಿತ ಬೆಲೆ ಇಲ್ಲ. ನಾವು ಕೊಳ್ಳುವ ಎಲ್ಲ ವಸ್ತುಗಳಿಗೂ ನಿಗದಿತ ಬೆಲೆ ಇದೆ. ಆದರೆ ನಾವು ಉತ್ಪಾದಿಸಿದಾಗ ಅದಕ್ಕೆ ಸ್ಥಿರವಾದ ಬೆಲೆ ಇಲ್ಲದ ಕಾರಣ ಕೃಷಿಕ ಅತಂತ್ರನಾಗುತ್ತಾನೆ. ರೈತ ಬೆಳೆದ ಫಸಲು ಕೈಗೆ ದೊರೆಯುವಂತಾಗಬೇಕು.
ರವಿರಾಜ ಶೆಟ್ಟಿ ಅಸೋಡು,,ಪ್ರಗತಿಪರ ಕೃಷಿಕ