Advertisement

ಓದು ಜನಮೇಜಯ ಮಹೀಪತಿ

05:00 PM Apr 04, 2017 | |

ಮುಂದಿನ ವರ್ಷದಿಂದ ಸರಸ್ವತಿ (ಪುಸ್ತಕ)ಯನ್ನು ಮಾರಕೂಡದು. ಅವುಗಳನ್ನು ಬಡವರ ಮಕ್ಕಳಿಗೆ ನೀಡಬೇಕೆಂದು ನನ್ನ ಗೆಳೆಯನ ತಂದೆ ಆದೇಶಿಸಿದರು. ಅಲ್ಲಿಂದಾಚೆಗೆ ಗೆಳೆಯನ ಪುಸ್ತಕಗಳು ಬಡ ವಿದ್ಯಾರ್ಥಿಗಳಿಗೆ ಮೀಸಲಾದವು!

Advertisement

ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಮೂರನೇ ತರಗತಿಯ ವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು. ನಮಗಿಂತ ತರಗತಿವಾರು
ಹಿರಿಯರಾದ ಗೆಳೆಯರು ತಮ್ಮ ಮುಂದಿನ ತರಗತಿಯ ಕಲಿಕೆಗಾಗಿ ಪಠ್ಯಪುಸ್ತಕ ಸಂಗ್ರಹಣೆಯಲ್ಲಿ ತೊಡಗಿದ್ದರು. ಕೆಲವರಂತೂ ತಮ್ಮ
ಅಣ್ಣ,ಅಪ್ಪ, ಸಂಬಂಧಿಕರ ಸಹಾಯದೊಂದಿಗೆ, ಇನ್ನು ಕೆಲವರು ತಮ್ಮ ಶಕ್ತಿಯಾನುಸಾರ ಹಿರಿಯ ಗೆಳೆಯರಿಗೆ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದರು. ಅದರಲ್ಲಿ ಪ್ರಮುಖವಾಗಿ ಬಾಯಲ್ಲಿ ನೀರು ಭರಿಸುವ ಖಾರ- ಮಂಡಕ್ಕಿ, ಕಿರಾಣಿಯಲ್ಲಿ ಅಂಗಡಿಯಲ್ಲಿ ಸಿಗುತಿದ್ದ ಸಿಹಿ ತಿನಿಸುಗಳನ್ನು, ಇನ್ನು ಕೆಲವರು ತಮ್ಮ ಮನೆಯಲ್ಲಿ ಮಾಡುತ್ತಿದ್ದ ಸಿಹಿ ತಿನಿಸುಗಳು, ಜೊತೆಗೆ ಬೇಸಿಗೆ ಕಾಲದಲ್ಲಿ ಸಿಗುತ್ತಿದ್ದ ಮಾವಿನ ಹಣ್ಣು, ಕಲ್ಲಂಗಡಿ, ಹಲಸಿನ ಹಣ್ಣುಗಳನ್ನು ಕೊಟ್ಟು ಪುಸ್ತಕಗಳನ್ನು ಪಡೆದುಕೊಳ್ಳಲು ಪೈಪೋಟಿ ನಡೆಸುತ್ತಿದ್ದರು.

ಹೀಗೆ ಪೈಪೋಟಿ ಉಂಟಾದಾಗ ಪುಸ್ತಕ ಕೊಡುವ ಹಿರಿಯ ಗೆಳೆಯ ಮೇಲಕ್ಕೆ ಹೋಗುತ್ತಿದ್ದನು. ಮತ್ತೆ ಕೆಲವರು ಈ ಆಮಿಷಗಳೊಂದಿಗೆ
ತಾವು ಒಂದು ವರ್ಷದಿಂದ ಕಾಪಾಡಿಕೊಂಡು ಬಂದಂಥ ಪುಸ್ತಕಗಳ ಬಗ್ಗೆ ವರ್ಣಿಸುತ್ತಿದ್ದರು. ಪುಸ್ತಕದ ಯಾವುದೇ ಪುಟ ಹರಿದಿಲ್ಲ, ಹೊಲಸಾಗಿಲ್ಲ, ರ್ಯಾಪರ್‌ ಹಾಗೆಯೇ ಇದೆ. ನಿನಗೆ ಬೇಕಾದರೆ ಅರ್ಧ ಬೆಲೆಗೆ ಕೊಡುತ್ತೇನೆ. ಬೇರೆಯವರಿಗಾದರೆ ಮುಕ್ಕಾಲು ಬೆಲೆಗೆ ಕೊಡುತ್ತೇನೆ ಎಂದು ತನ್ನ ಪುಸ್ತಕದ ಮೌಲ್ಯ ಹೆಚ್ಚಿಸುತ್ತಿದ್ದರು. ಇಂಥವರು ದುಡ್ಡಿಲ್ಲದೆ ಯಾವುದೇ ಕಾರಣಕ್ಕೂ ಕೊಡುತ್ತಿರಲಿಲ್ಲ.

ಈ ಪುಸ್ತಕಗಳಿಗೆ ಇಷ್ಟು ಬೆಲೆ ಯಾಕಪ್ಪಾಂದ್ರೆ, ಆ ದಿನಗಳಲ್ಲಿ ಈಗಿನ ಹಾಗೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ ಪೂರೈಸುತ್ತಿರಲಿಲ್ಲ.
ವಿದ್ಯಾರ್ಥಿಗಳು ತಾವೇ ದುಡ್ಡು ಹಾಕಿ ಪುಸ್ತಕ ತೆಗೆದುಕೊಂಡಿರುತ್ತಿದ್ದರು. ಒಬ್ಬ ಗೆಳೆಯ ಪುಸ್ತಕ ಕೊಡುವ ಮೊದಲೇ ಒಪ್ಪಂದ ಮಾಡಿಕೊಂಡು ಕಿರಿಯ ಗೆಳೆಯನಿಂದ ತನ್ನೆಲ್ಲ ಇಷ್ಟದ ಪದಾರ್ಥಗಳು ಜೊತೆಗೆ ಮುಂಗಡವಾಗಿ ಹಣ ಪಡೆದು, ಖರ್ಚು ಮಾಡಿಬಿಟ್ಟಿದ್ದ. ಇಷ್ಟಾರ್ಥಗಳನ್ನು ಪೂರೈಸಿದ್ದ ಗೆಳೆಯ ಪುಸ್ತಕಕ್ಕಾಗಿ ಹಲುಬುತ್ತಿದ್ದ.  ವಾಸ್ತವವಾಗಿ ಏನಾಗಿತ್ತೆಂದರೆ ಪ್ರತಿವರ್ಷ ಏಪ್ರಿಲ…ನಲ್ಲಿ ನಮ್ಮ
ಊರಿನಲ್ಲಿ ಜಾತ್ರೆ ನಡೆಯುತ್ತಿತ್ತು. ಪುಸ್ತಕವಿರುವ ಗೆಳೆಯನ ಮನೆಗೆ ಅವರ ಹತ್ತಿರದ ಸಂಬಂಧಿಕರು ಬಂದಿದ್ದರು. ಈ ಸಂದರ್ಭದಲ್ಲಿ
ಗೆಳೆಯನ ತಂದೆಯ ಜೊತೆ ಮಾತನಾಡಿ, ಪುಸ್ತಕಗಳನ್ನು ತೆಗೆದುಕೊಂಡು ಜಾತ್ರೆ ಮುಗಿದ ನಂತರ ಹೋಗಿಬಿಟ್ಟರು. ಈ ವಿಷಯ ತಿಳಿದ ಗೆಳೆಯ ಹೌಹಾರಿ, ದಿಕ್ಕು ತೋಚದಾದ. ಇತ್ತ ಕಡೆ ಪುಸ್ತಕ ಪಡೆಯಲು ಕಾಯುತ್ತಿದ್ದ ಗೆಳೆಯ ಪ್ರತಿದಿನ ಬೆಳಗ್ಗೆ- ಸಾಯಂಕಾಲ ಮನೆಗೆ ಎಡತಾಕುವುದು ಮುಂದುವರಿಯಿತು. ಒಂದು ದಿನ ಇದು ಅವರ ತಂದೆಗೂ ನಿಜ ಸಂಗತಿ ತಿಳಿಯಿತು. ತಾನು ಇಲ್ಲಿಯವರೆಗೂ ಪೂರೈಸಿರುವ ತಿಂಡಿ- ತಿನಿಸುಗಳು, ಕೊಟ್ಟ ಹಣ ಬೇಕು, ಇಲ್ಲಂದ್ರೆ ಪುಸ್ತಕ ಬೇಕು ಎಂದು ಈತ ಹಠ ಹಿಡಿದ.

ಈ ಸುದ್ದಿ ಕೇರಿ ತುಂಬೆಲ್ಲಾ ಹರಡಿತು. ತಂದೆ ಮುಜಗರಕ್ಕೀಡಾಗಿ ಮರುದಿನ ಸಂಬಂಧಿಕರ ಮನೆಗೆ ಹೋಗಿ ಅವರಿಗೆ ಮಗನ ವಿಷಯ
ತಿಳಿಸಿ, ಪುಸ್ತಕ ತೆಗೆದುಕೊಂಡು ಬಂದು ಇಷ್ಟಾರ್ಥ ಪೂರೈಸಿದ್ದ ಮಗನ ಗೆಳೆಯನ ಮನೆಗೆ ಕೊಟ್ಟು ಕಳಿಸಿದರು. ಇಷ್ಟಾದ ನಂತರ ಆ ತಂದೆ, ಗೆಳೆಯನ ಬೆನ್ನಿಗೆ ನಾಲ್ಕು ಬಾರಿಸಿ ಒಂದು ಆದೇಶ ಮಾಡಿದ. ಮುಂದಿನ ವರ್ಷದಿಂದ ಸರಸ್ವತಿ (ಪುಸ್ತಕ ) ಮಾರಕೂಡದು. ಬಡವರ ಮಕ್ಕಳಿಗೆ ನೀಡಬೇಕೆಂದು ಸೂಚಿಸಿದ. ಅಲ್ಲಿಂದಾಚೆಗೆ ಆಚೆ ಗೆಳೆಯನ ಪುಸ್ತಕಗಳು ಬಡ ವಿದ್ಯಾರ್ಥಿಗಳಿಗೆ ಮೀಸಲಾದವು. ಇದಾಗಿ ಮೂವತ್ತು ವರ್ಷಗಳು ಕಳೆದಿವೆ. ಈಗಿನ ವಿದ್ಯಾರ್ಥಿಗಳು ಶಾಲೆಯಲ್ಲಿ ಉಚಿತವಾಗಿ ಕೊಡುವ ಪುಸ್ತಕಗಳನ್ನು ಸಂರಕ್ಷಿಸದೇ ಇರುವುದನ್ನು ನೋಡಿ ಶಿಕ್ಷಕನಾಗಿ ಬೇಸರ ಹುಟ್ಟುತ್ತದೆ. ಆ ದಿನಗಳು ಕಣ್ಣೆದುರಿಗೆ ಬಂದು ನಿಲ್ಲುತ್ತವೆ.

Advertisement

ಮಲ್ಲಪ್ಪ ಫ‌. ಕರೇಣ್ಣನವರ, ಬ್ಯಾಡಗಿ

Advertisement

Udayavani is now on Telegram. Click here to join our channel and stay updated with the latest news.

Next