Advertisement

ಶಾ ವಿರುದ್ಧ ಮತ್ತೆ ಕಾಂಗ್ರೆಸ್‌ ನಾಯಕರ ವಾಗ್ಧಾಳಿ

06:05 AM Feb 04, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ನೀಡಿದ ಹಣದ ಲೆಕ್ಕ ಕೇಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ದ ರಾಜ್ಯ ಕಾಂಗ್ರೆಸ್‌ ನಾಯಕರು ಕನ್ನಡಿಗರ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿದ್ದಾರೆ.

Advertisement

ಅಮಿತ್‌ ಶಾ ಸುಳ್ಳು ಹೇಳಿ ತೆರಿಗೆ ಕಟ್ಟುವ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ  ಉಂಟು ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕೃಷಿ ಸಚಿವ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.

ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಅನುದಾನದ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ. ಹಣ ನೀಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸುಳ್ಳು ಹೇಳಿದ್ದಾರೆ. ಸುಳ್ಳುಗಳನ್ನೇ ಹೇಳುವ ಅಮಿತ್‌ ಶಾಗೆ ಸುಳ್ಳಿನ ಸಾರ್ವಭೌಮ ಎಂದು ಬಿರುದು ಕೊಡುವುದು ಸೂಕ್ತ ಎಂದು ಲೇವಡಿ ಮಾಡಿದರು.

14ನೇ ಹಣಕಾಸು ಆಯೋಗದ ಪ್ರಕಾರ ಐದು ವರ್ಷಗಳಲ್ಲಿ ರಾಜ್ಯಕ್ಕೆ 2.2 ಲಕ್ಷ  ಕೋಟಿ ರೂ. ಹಣ ಬರಬೇಕು. ಅದರಲ್ಲಿ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 95,204 ಕೋಟಿ ಹಣ ಬರಬೇಕಿತ್ತು. ಆದರೆ, ಇದುವರೆಗೂ ಬಂದಿರುವುದು 84,651 ಕೋಟಿ ರೂ. ಮಾತ್ರ.  ಇನ್ನೂ 10553 ಕೋಟಿ ರೂ. ಬಾಕಿ ಬರಬೇಕಿದೆ. ಹೀಗಾಗಿ, ಅಮಿತ್‌ ಶಾ  ರಾಜ್ಯಕ್ಕೆ ಕೊಡಬೇಕಾದ ಬಾಕಿ ಹಣದ ಲೆಕ್ಕ ಕೊಡಲಿ ಎಂದು ಆಗ್ರಹಿಸಿದರು.

ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ  ಒಂದು ರೂ. ಹೋದರೆ  ಅದರಲ್ಲಿ ರಾಜ್ಯಕ್ಕೆ 47 ಪೈಸೆ ಮಾತ್ರ ವಾಪಸ್‌ ಬರುತ್ತದೆ. ಉಳಿದ ಹಣ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೊಡುಗೆ ನೀಡುತ್ತಿದೆ. ಆದರೆ, ಅಮಿತ್‌ ಶಾ ರಾಜ್ಯ ಸರ್ಕಾರಕ್ಕೆ ಭಿಕ್ಷೆ ನೀಡಿದ ರೀತಿಯಲ್ಲಿ ರಾಜ್ಯಕ್ಕೆ ಬಂದಾಗಲೆಲ್ಲಾ ಹೇಳಿ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ನೀವು ಹಣ ಕೊಟ್ಟಿದ್ದೇವೆ ಎಂದು ಹೇಳಲು ಕನ್ನಡಿಗರೇನು ಭಿಕ್ಷುಕರಾ ? ನಿಮ್ಮ ಸುಳ್ಳಿನ ಮಾತುಗಳನ್ನು ಕೇಳಲು ನಾವು ಕೈ ಕಟ್ಟಿ ಕುಳಿತಿಲ್ಲ ಎಂದು  ವಾಗ್ಧಾಳಿ ನಡೆಸಿದರು.

Advertisement

ಅಮಿತ್‌ ಶಾ ಸುಳ್ಳು ಹೇಳುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಕೇಂದ್ರ ಸರ್ಕಾರ ನೀಡಿದ 3 ಲಕ್ಷ ಕೋಟಿ ರೂ. ಆದೇಶದ ಪ್ರತಿಯನ್ನು ಪ್ರಧಾನಿ ಭಾನುವಾರ ರಾಜ್ಯಕ್ಕೆ ಬಂದಾಗ ಸಾರ್ವಜನಿಕರಿಗೆ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ಅಮಿತ್‌ ಶಾ ಸುಳ್ಳು ಹೇಳಿದ್ದಾರೆ ಎಂದು ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಕನ್ನಡಿಗರು ಕಟ್ಟುವ ತೆರಿಗೆಯಿಂದ ಕೇಂದ್ರ ಸರ್ಕಾರ ನಡೆಯುತ್ತಿದೆ. ಅಲ್ಲದೇ ಬಿಜೆಪಿ ಆಡಳಿತವಿರುವ ಅನೇಕ ಹಿಂದುಳಿದ ರಾಜ್ಯಗಳ ಅಭಿವೃದ್ದಿಗೆ ಕನ್ನಡಿಗರ ತೆರಿಗೆ ಹಣ ಬಳಕೆಯಾಗುತ್ತಿದೆ. ದೇಶದ ಅಭಿವೃದ್ಧಿಗೆ ತೆರಿಗೆ ನೀಡುತ್ತಿರುವ ಕನ್ನಡಿಗರಿಗೆ ಹೆಮ್ಮೆ ಇದೆ. ಅಮಿತ್‌ ಶಾ ಅಜ್ಞಾನದಿಂದ ಹೊರಬರಬೇಕು ಎಂದು ಹೇಳಿದರು.

ಮೊದಲು ಕೇಂದ್ರ ಸರ್ಕಾರದ  ಪುರಸ್ಕೃತ ಯೋಜನೆಗೆ ಶೇ. 60 ರಿಂದ 100 ರ ವರೆಗೂ ಕೇಂದ್ರದಿಂದಲೇ ಅನುದಾನ ಬರುತ್ತಿತ್ತು. ಆದರೆ, ಈಗ ಕೇಂದ್ರದ ಅನುದಾನ ಕಡಿಮೆಯಾಗಿದ್ದು, ಕೇಂದ್ರದ ಯೋಜನೆಗಳಿಗೂ ರಾಜ್ಯ ಸರ್ಕಾರವೇ ಹಣ ಭರಿಸಬೇಕಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಆರ್ಥಿಕ ಸಮೀಕ್ಷೆ ಪ್ರಕಾರ ಕರ್ನಾಟಕ ಶೇ.  9.47 ರಷ್ಟು ತೆರಿಗೆ ನೀಡುತ್ತಿದ್ದು, ಹಣಕಾಸು ಆಯೋಗ ಶೇ. 4.713ರಷ್ಟು ಮಾತ್ರ ರಾಜ್ಯಕ್ಕೆ ನೀಡುತ್ತಿದೆ. ಕನ್ನಡಿಗರು ದೇಶದ ಪ್ರಗತಿಗೆ ಕೈ ಜೋಡಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಿಡುಗಡೆಯಾಗಿರುವ ಹಣ
                2013-14    14-15        15-16        16-17        17-18
ಕೇಂದ್ರದ ಪಾಲು        9099        14619        13929        15703        16082
ರಾಜ್ಯದ ಪಾಲು        7247        15819        15782        17873        27834
ಒಟ್ಟು ಖರ್ಚು        16346        30438        29711        33576        43916

Advertisement

Udayavani is now on Telegram. Click here to join our channel and stay updated with the latest news.

Next