Advertisement

ಪೋಲೆಂಡ್ ಗಡಿ: 1 ಕಿ.ಮೀ.ಕಾಲ್ನಡಿಗೆಯಿಂದ ಚೆಕ್ ಪಾಯಿಂಟ್‌ಗೆ ತೆರಳಿದ ಬೆಳಗಾವಿ ವಿದ್ಯಾರ್ಥಿಗಳು

09:27 PM Mar 02, 2022 | Team Udayavani |

ಬೆಳಗಾವಿ: ಕರ್ನಾಟಕ ಮೂಲದ 14 ಜನರ ತಂಡ ಖಾರ್ಕಿವ್ ವಿಶ್ವವಿದ್ಯಾಲಯದಿಂದ ಮಂಗಳವಾರದಿಂದ ಪ್ರಯಾಣ ಬೆಳೆಸಿ ಬುಧವಾರ ಸಂಜೆ ಪೋಲೆಂಡ್ ದೇಶದ ಗಡಿಗೆ ಬಂದು ತಲುಪಿದ್ದು, ಒಂದು ಕಿ.ಮೀ. ಕಾಲ್ನಡಿಗೆಯಲ್ಲಿ ಚೆಕ್ ಪಾಯಿಂಟ್‌ಗೆ ಬಂದಿರುವ ಬಗ್ಗೆ ಮಗಳು ಅಮೋಘಾ ಮಾಹಿತಿ ನೀಡಿದ್ದಾಳೆ ಎಂದು ಅಮೋಘಾ ಅವರ ತಂದೆ ಧನಂಜಯ ಚೌಗಲಾ ತಿಳಿಸಿದರು.

Advertisement

‘ಉದಯವಾಣಿ’ಯೊಂದಿಗೆ ಬುಧವಾರ ಮಾತನಾಡಿದ ಅವರು, ಬೇರೆ ಬೇರೆ ತಂಡ ಮಾಡಿಕೊಂಡು ವಿದ್ಯಾರ್ಥಿಗಳು ಬರುತ್ತಿದ್ದಾರೆ. 8 ಹುಡುಗರು ಹಾಗೂ 6 ಜನ ಹುಡುಗಿಯರಿದ್ದಾರೆ. ಬಾಂಬ್ ಹಾಗೂ ಶೆಲ್ ದಾಳಿಗಳ ಸದ್ದು ಬರುತ್ತಿದೆ. ರಿಸ್ಕ್ ತೆಗೆದುಕೊಂಡು ನಮ್ಮ ಮಗಳು ಸೇರಿದಂತೆ ನಾಲ್ಕು ಜನ ಬುಧವಾರ ಬೆಳಗ್ಗೆ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಅದರಲ್ಲಿ ಒಟ್ಟು 14 ಜನರ ತಂಡವಿದ್ದು, ಭಾರತೀಯ ರಾಯಭಾರಿ ಕಚೇರಿಯವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.

ಖಾರ್ಕಿವ್ ನಗರದಿಂದ ಕಿವ್‌ಗೆ ಬಂದು ಅಲ್ಲಿಂದ ಲೀವಿವ್ ನಗರಕ್ಕೆ ಬಂದಿಳಿದ್ದಾರೆ. ಲಿವಿವ್ ನಗರದಿಂದ ಟ್ಯಾಕ್ಸಿ ಮಾಡಿಕೊಂಡು ಪೋಲೆಂಡ್ ಗಡಿವರೆಗೆ ಪ್ರಯಾಣ ಬೆಳೆಸಿ ಭಾರತೀಯ ಕಾಲಮಾನ ಬುಧವಾರ ಸಂಜೆ 7:45ರ ಸುಮಾರಿಗೆ ಗಡಿಗೆ ಬಂದಿದ್ದಾರೆ. 60 70 ಕಿ.ಮೀ.ವರೆಗೆ ಈ ಪ್ರಯಾಣ ಇದ್ದು, ಮೂರು ಟ್ಯಾಕ್ಸಿಗಳಲ್ಲಿ ಈ 14 ಜನರು ಬರುತ್ತಿದ್ದಾರೆ. ಪೋಲೆಂಡ್‌ಗೆ ಸುರಕ್ಷಿತವಾಗಿ ಮರಳಿದ್ದಾರೆ. ಇಲ್ಲಿಂದ 1 ಕಿ.ಮೀ. ವರೆಗೆ ಕಾಲ್ನಡಿಗೆಯಲ್ಲಿ ಚೆಕ್ ಪಾಯಿಂಟ್‌ಗೆ ಬಂದು ಅಲ್ಲಿಂದ ಭಾರತೀಯ ರಾಯಭಾರಿ ಕಚೇರಿಯವರನ್ನು ತಲುಪಲಿದ್ದಾರೆ ಎಂದರು.

ಭಾರತೀಯ ಕಚೇರಿಯವರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಬೇರೆ ದಏಶದವರಿಗಿಂತಲೂ ನಮ್ಮ ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಹೆಮ್ಮೆ ಎನಿಸುತ್ತಿದೆ., ಪ್ರತಿ ಕ್ಷಣ ಕ್ಷಣಕ್ಕೂ ನಮ್ಮೊಂದಿಗೆ ಮತ್ತು ನಮ್ಮ ಮಕ್ಕಳೊಂದಿಗೆ ಸಂಪರ್ಕ ಸಾಧಿಸಿ ಭಾರತಕ್ಕೆ ಕರೆ ತರುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next