Advertisement

ಅಕ್ರಮ ಕಟ್ಟಡ ಮರು ಸಮೀಕ್ಷೆ ನಡೆಸಿ

12:40 AM Nov 26, 2019 | Team Udayavani |

ಬೆಂಗಳೂರು: “ನಗರ ವ್ಯಾಪ್ತಿಯ ಎಲ್ಲಾ ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳ ಬಗ್ಗೆ ಹೊಸದಾಗಿ ಸಮೀಕ್ಷೆ ನಡೆಸಿ ಹಂತ-ಹಂತವಾಗಿ ತೆರವುಗೊಳಿಸುವ ಸಂಬಂಧ ನಿರ್ದಿಷ್ಟ ಕಾಲಮಿತಿ ಹಾಕಿಹೊಳ್ಳಿ’ ಎಂದು ಬಿಬಿಎಂಪಿಗೆ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

Advertisement

ಈ ಕುರಿತು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ.ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಅಕ್ರಮ ಕಟ್ಟಡಗಳ ಸಮೀಕ್ಷೆ ಹಾಗೂ ತೆರವಿಗೆ ಯೋಜನೆ ರೂಪಿಸಿ ಡಿ.18ರೊಳಗೆ ಕಾಲಮಿತಿ ವೇಳಾಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲದೇ ಈ ಕಾರ್ಯಕ್ಕೆ ಬಿಬಿಎಂಪಿಗೆ ಅಗತ್ಯ ಸಿಬ್ಬಂದಿ ಹಾಗೂ ಪೊಲೀಸ್‌ ನೆರವು ನೀಡುವಂತೆಯೂ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ, ಅನಧಿಕೃತ ಕಟ್ಟಡ ಸಂಖ್ಯೆ ಬಗ್ಗೆ ಪಾಲಿಕೆ ಸಲ್ಲಿಸಿದ್ದ ವರದಿ ತಳ್ಳಿಹಾಕಿದ ನ್ಯಾಯಪೀಠ, ಸಾರ್ವಜನಿಕ ಪ್ರದೇಶ ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡ ಹಾಗೂ ನಕ್ಷೆ ಮಂಜೂರಾತಿ ಪಡೆಯದೆ, ಮಂಜೂರಾತಿ ಪಡೆದ ನಕ್ಷೆ ಉಲ್ಲಂಘಿಸಿದ ಕಟ್ಟಡ ಗುರುತಿಸಲು ಪಾಲಿಕೆ ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು ಹೈಕೋರ್ಟ್‌ ಬಿಬಿಎಂಪಿಗೆ ಆದೇಶಿಸಿತು.

ಅದೇ ರೀತಿ, ಪಾಲಿಕೆ ಮೊದಲನೇ ಹಂತದಲ್ಲಿ ಸಮೀಕ್ಷೆಯಲ್ಲಿ ಅನಧಿಕೃತ ಕಟ್ಟಡ ಗುರುತಿಸಿದ ನಂತರ ಎರಡನೇ ಹಂತದಲ್ಲಿ ಆ ಕಟ್ಟಡಗಳ ಮಾಲಿಕರಿಗೆ ಶೋಕಾಸ್‌ ನೋಟಿಸ್‌ ನೀಡಬೇಕು. ಮೂರನೇ ಹಂತದಲ್ಲಿ ತೆರವುಗೊಳಿಸುವ ಕಾರ್ಯ ಕೈಗೊಳ್ಳಬೇಕು. ಅದಕ್ಕಾಗಿ ಕಾಲಮಿತಿ ಯೋಜನೆ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತು.

ಶೇ.90 ಉಲ್ಲಂಘನೆ: ಬಿಬಿಎಂಪಿ ಪರ ವಾದ ಮಂಡಿಸಿದ ನ್ಯಾಯವಾದಿ ಕೆ.ಎನ್‌. ಪುಟ್ಟೇಗೌಡ, ಬೆಂಗಳೂರು ನಗರದಲ್ಲಿ ಶೇ.90 ಕಟ್ಟಡಗಳು ನಿಯಮಗಳನ್ನು ಉಲ್ಲಂಘಿಸಿವೆ. ಅಂತಹ ಕಟ್ಟಡಗಳನ್ನು ತೆರವುಗೊಳಿಸಲು ಅಥವಾ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಾಲಿಕೆಗೆ ಅಗತ್ಯ ಸಿಬ್ಬಂದಿಯೂ ಇಲ್ಲ, ಹಣಕಾಸು ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

Advertisement

ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ: ಅನಧಿಕೃತ ಕಟ್ಟಡಗಳ ತೆರವು ಕಾರ್ಯಕ್ಕೆ ಸಿಬ್ಬಂದಿ ಮತ್ತು ಹಣಕಾಸಿನ ನೆರವು ಕೋರಿ ಬಿಬಿಎಂಪಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರ 2 ತಿಂಗಳಲ್ಲಿ ಪಾಲಿಕೆ ಕೇಳಿದ ನೆರವು ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ಸ್ವತಂತ್ರವಾಗಿ ಯಾವುದೇ ಗುತ್ತಿಗೆದಾರರನ್ನು ಅಥವಾ ಹೊರಗುತ್ತಿಗೆ ಏಜೆನ್ಸಿಯನ್ನು ತೆರವು ಕಾರ್ಯಕ್ಕೆ ಬಳಸಬಾರದು.

ಸರ್ಕಾರದ ಸಿಬ್ಬಂದಿಯನ್ನೇ ಬಳಸಬೇಕು. ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಅನಧಿಕೃತ ಕಟ್ಟಡಗಳ ಕುರಿತು ಶೂನ್ಯ ತಾಳ್ಮೆ ಹೊಂದಬೇಕು. ಹೀಗಾಗಿ ಪಾಲಿಕೆ ಸುಪ್ರೀಂಕೋರ್ಟ್‌ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು. ಅದಕ್ಕೆ ಬಿಬಿಎಂಪಿ ಬಳಿ ಅಗತ್ಯ ಸಿಬ್ಬಂದಿ ಮತ್ತು ಹಣಕಾಸು ಇಲ್ಲದೇ ಇರುವುದರಿಂದ ಸರ್ಕಾರ ಅವುಗಳನ್ನು ಒದಗಿಸಬೇಕೆಂದು ನ್ಯಾಯಪೀಠ ಹೇಳಿತು.

ಅಲ್ಲದೇ ಪಾಲಿಕೆ ನವೆಂಬರ್‌-ಡಿಸೆಂಬರ್‌ನಲ್ಲಿ ಅನಧಿಕೃತ ಕಟ್ಟಡಗಳ ಬಗ್ಗೆ ಎಷ್ಟು ದೂರು ಬಂದಿವೆ ಎಂಬ ಬಗ್ಗೆ ಮಾಹಿತಿ ನೀಡಬೇಕು, ಆ ದೂರು ಆಧರಿಸಿ ಕ್ರಮ ಕೈಗೊಂಡಿರುವ ವಿವರಣೆಯನ್ನೂ ನೀಡಬೇಕು. ಹಾಗೆಯೇ ಅನಧಿಕೃತ ಕಟ್ಟಡಗಳ ಬಗ್ಗೆ ಯಾವುದೇ ಸಾರ್ವಜನಿಕರು ದೂರು ನೀಡಿದರೂ ಅವರ “ಗೌಪ್ಯತೆ ಕಾಪಾಡಿಕೊಳ್ಳುವುದು ಪಾಲಿಕೆ ಕರ್ತವ್ಯ’ ಎಂದು ಆದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next