ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತಂದಿರುವ ಬೆನ್ನಲ್ಲೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಮಂಗಳವಾರ ವಿಶೇಷ ಸಭೆ ನಡೆಸಿ ಆತನ ವಿರುದ್ಧ ನಗರದಲ್ಲಿ ದಾಖಲಾಗಿರುವ ಎಲ್ಲ 47 ಪ್ರಕರಣಗಳ ಮರು ತನಿಖೆಗೆ ಸಿದ್ಧತೆ ನಡೆಸಿದ್ದಾರೆ.
ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಂಜೆ ನಡೆಸಿದ ಸಭೆಯಲ್ಲಿ ರವಿ ಪೂಜಾರಿ ವಿರುದ್ಧ ದಾಖಲಾಗಿರುವ ಎಲ್ಲ ಠಾಣೆಗಳ ಠಾಣಾಧಿಕಾರಿಗಳು ಹಾಜರಿದ್ದರು. ಈ ವೇಳೆ ಆ ಪ್ರಕರಣಗಳು ಯಾವ ಹಂತ ದಲ್ಲಿವೆ? ಯಾವೆಲ್ಲ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ, ದೂರುದಾರರು ಯಾರು? ಸಾಕ್ಷ್ಯ ಯಾವು ದು? ಸಾಕ್ಷಿಗಳು ಯಾರು? ಯಾವ ಪ್ರಕರಣಗಳಲ್ಲಿ ಬಿ-ರಿಪೋರ್ಟ್ ಸಲ್ಲಿಸ ಲಾಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡರು.
ಪ್ರಕರಣಗಳ ಮರುತನಿಖೆ: ರವಿ ಪೂಜಾರಿ ವಿರುದ್ಧ ದಾಖಲಾಗಿರುವ ಪ್ರಕರಣಗಳು ಯಾವುದೇ ಹಂತದಲ್ಲಿ ರಲಿ, ಆರೋಪಪಟ್ಟಿ ಸಲ್ಲಿಸಿದರೂ ಇದೀಗ ಎಲ್ಲ 47 ಪ್ರಕರಣಗಳ ಮರುತನಿಖೆ ನಡೆಸಬೇಕು. ಈ ಸಂಬಂಧ ಆಯಾ ಠಾಣಾಧಿಕಾರಿಗಳು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಹೆಚ್ಚಿನ ತನಿಖೆಗೆಗೆ ಎಲ್ಲ ಪ್ರಕರಣಗಳ ಮಾಹಿತಿಯನ್ನು ಸಿಸಿಬಿ ಅಧಿಕಾರಿಗಳಿಗೆ ನೀಡ ಬೇಕು. ಅನಂತರ ಪ್ರತಿ ಪ್ರಕರಣದ ಸಂಬಂಧ ಆರೋಪಿಯನ್ನು ಹಂತ- ಹಂತವಾಗಿ ವಿಚಾರಣೆಗೊಳಪಡಿ ಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ನೆರವು: 13 ವರ್ಷಗಳ ಹಿಂದೆ ತಿಲಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆ ಸೇರಿ ಜೋಡಿ ಕೊಲೆಗೆ ಪಾತಕಿ ರವಿ ಪೂಜಾರಿಯೇ ಹಣಕಾಸು ಮತ್ತು ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದ ಎಂಬುದು ಗೊತ್ತಾಗಿದ್ದು, ಈ ಬಗ್ಗೆ ಆರೋಪಿಯೂ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಶಬನಮ್ ಡೆವಲಪರ್ಸ್ ಮಾಲೀಕ ಸಮೀವುಲ್ಲಾಗೆ ಇಂಟರ್‌ನೆಟ್ ಕರೆ ಮಾಡಿ ಪೂಜಾರಿ ಕೋಟ್ಯಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡಲು ನಿರಾಕರಿಸಿದಾಗ ಹತ್ಯೆಗೆ ಸಂಚು ರೂಪಿಸಿದ್ದ. ಪಾತಕಿಯ ಕೆಲ ಸಹಚರರು ಸಮೀವುಲ್ಲಾ ಕಚೇರಿ ಮೇಲೆ ಗುಂಡಿನ ದಾಳಿ ನಡೆಸಿ ಮಹಿಳೆ ಸೇರಿ ಇಬ್ಬರನ್ನು ಬರ್ಬರವಾಗಿ ಕೊಂದು, ಬಳಿಕ ಕಚೇರಿಯ ಗಾಜಿಗೆ ರವಿ ಪೂಜಾರಿಗೆ ಸೇರಿದ ಒಂದು ಭಿತ್ತಿಪತ್ರ ಅಂಟಿಸಿ ಪರಾರಿಯಾಗಿದ್ದರು.
ಅದೃಷ್ಟವಶಾತ್ ಸಮೀವುಲ್ಲ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಎರಡು ವರ್ಷಗಳ ಬಳಿಕ ಇಬ್ರಾಹಿಂ, ಸಂತೋಷ್ ರೈ, ಉದಯ್ ಹೆಗ್ಡೆ ಸೇರಿ ಸುಮಾರು ಆರೇಳು ಮಂದಿಯನ್ನು ಬಂಧಿಸಿದ್ದರು ಎಂದು ಪೊಲೀಸರು ಹೇಳಿದರು.