Advertisement

Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ

07:15 PM Jan 14, 2025 | Team Udayavani |

ಪಟ್ಟಣಂತಿಟ್ಟ: ಜಿಲ್ಲೆಯಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 44 ಜನರನ್ನು ಬಂಧಿಸಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ (ಜ.14) ತಿಳಿಸಿದ್ದಾರೆ.

Advertisement

ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಡಿಐಜಿ ಅಜೀತಾ ಬೇಗಮ್‌ ಈ ಬಗ್ಗೆ ಮಾಹಿತಿ ನೀಡಿದ್ದು, ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 30 ಎಫ್‌ಐಆರ್‌ಗಳು ದಾಖಲಾಗಿದ್ದು, ಪ್ರಕರಣಗಳಲ್ಲಿ ಉಲ್ಲೇಖಿಸಲಾದ 59 ಆರೋಪಿಗಳಲ್ಲಿ 44 ಜನರನ್ನು ಬಂಧಿಸಲಾಗಿದೆ ಎಂದರು.

“ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಅವರು ಪ್ರಸ್ತುತ ವಿದೇಶದಲ್ಲಿದ್ದಾರೆ. ಅವರಿಗಾಗಿ ಲುಕ್ ಔಟ್ ನೋಟಿಸ್ ಗಳನ್ನು ಹೊರಡಿಸುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಇಂಟರ್‌ಪೋಲ್ ಮೂಲಕ ಅವರಿಗಾಗಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಹ ನಾವು ಯೋಜಿಸುತ್ತಿದ್ದೇವೆ” ಎಂದು ಅಧಿಕಾರಿ ತಿಳಿಸಿದರು.

ಇನ್ನೂ 13 ಜನರನ್ನು ಬಂಧಿಸಬೇಕಾಗಿದೆ ಎಂದು ಅವರು ಹೇಳಿದರು.

“ನಾವು ಅವರ ಸ್ಥಳಗಳನ್ನು ಹುಡುಕುತ್ತಿದ್ದೇವೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಎಸ್‌ಐಟಿಯಿಂದ ಸಂಪೂರ್ಣ ಮತ್ತು ವೈಜ್ಞಾನಿಕ ತನಿಖೆ ನಡೆಸಲಾಗುವುದು. ನಾವು ಯಾವುದೇ ಆರೋಪಿಗಳನ್ನು ಬಿಡುವುದಿಲ್ಲ. ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅವರೆಲ್ಲರನ್ನೂ ಕಾನೂನಿನ ಮುಂದೆ ತರುತ್ತೇವೆ” ಎಂದು ಅಧಿಕಾರಿ ಹೇಳಿದರು.

Advertisement

ಇದುವರೆಗಿನ ತನಿಖೆಯಲ್ಲಿ ಆರೋಪಿಗಳಲ್ಲಿ ಹಲವರು ಪತ್ತನಂತಿಟ್ಟದ ಖಾಸಗಿ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ. ನಂತರ ಆಕೆಯನ್ನು ವಾಹನಗಳಲ್ಲಿ ವಿವಿಧ ಸ್ಥಳಗಳಿಗೆ ಕರೆದೊಯ್ದು ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2024 ರ ಜನವರಿಯಲ್ಲಿ ಕಾರಿನೊಳಗೆ ಮತ್ತು ಪಟ್ಟಣಂತಿಟ್ಟ ಜನರಲ್ ಆಸ್ಪತ್ರೆಯಲ್ಲಿ ನಡೆದ ಘಟನೆಗಳು ಸೇರಿದಂತೆ ಕನಿಷ್ಠ ಐದು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಬಾಲಕಿ ಹನ್ನೆರಡನೇ ತರಗತಿಯಲ್ಲಿ ಓದುತ್ತಿದ್ದಾಗ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕನೊಬ್ಬ ರನ್ನಿಯ ರಬ್ಬರ್ ತೋಟಕ್ಕೆ ಕರೆದೊಯ್ದು, ಅಲ್ಲಿ ಇತರ ಮೂವರೊಂದಿಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತನಿಖೆಯಲ್ಲಿ ಕಂಡುಬಂದಿದೆ.

ಈಗ 18 ವರ್ಷ ವಯಸ್ಸಿನ ಬಾಲಕಿ ತನ್ನ ದೂರಿನಲ್ಲಿ 13 ನೇ ವಯಸ್ಸಿನಿಂದ 62 ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಳೆ ಎಂದು ಆರೋಪಿಸಿದ್ದಾಳೆ.

ಶಿಕ್ಷಣ ಸಂಸ್ಥೆಯಲ್ಲಿ ಸಂತ್ರಸ್ತೆಯ ಶಿಕ್ಷಕರು ಆಕೆಯ ನಡವಳಿಕೆಯಲ್ಲಿನ ಗಮನಾರ್ಹ ಬದಲಾವಣೆಗಳ ಬಗ್ಗೆ ಸಮಿತಿಗೆ ತಿಳಿಸಿದ ನಂತರ, ಮಕ್ಕಳ ಕಲ್ಯಾಣ ಸಮಿತಿ ನಡೆಸಿದ ಕೌನ್ಸೆಲಿಂಗ್ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ನಂತರ ಸಮಿತಿಯು ಪೊಲೀಸರಿಗೆ ಮಾಹಿತಿ ನೀಡಿತು ಮತ್ತು ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.