ಹೊಸದಿಲ್ಲಿ: ಕಲಾಪದ ವೇಳೆ ತಾವು ಮಾಡಿದ್ದ ಭಾಷಣದಿಂದ ತೆಗೆದು ಹಾಕಲಾಗಿರುವ ಭಾಗಗಳನ್ನು ಮತ್ತೆ ಸೇರಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಅವರನ್ನು ಆಗ್ರಹಿಸಿದ್ದಾರೆ. ಫೆ.2ರ ಶೂನ್ಯವೇಳೆಯಲ್ಲಿ ನಾನು ಪ್ರಮುಖ ವಿಚಾರಗಳನ್ನು ಉಲ್ಲೇಖೀಸಿದ್ದೆ. ಆದರೆ ನಾನು ಮಾಡಿದ್ದ ಭಾಷಣದಿಂದ 2 ಪುಟಗಳನ್ನು ತೆಗೆದುಹಾಕಲಾಗಿದೆ. ನಾನು ಭಾಷಣದ ವೇಳೆ ಯಾರದೇ ಹೆಸರನ್ನು ಹೇಳಿಲ್ಲ ಅಥವಾ ನಿಯಮಗಳನ್ನು ಉಲ್ಲಂ ಸಿಲ್ಲ. ಹೀಗಾಗಿ ನನ್ನ ಭಾಷಣದ ಭಾಗವನ್ನು ಮತ್ತೆ ಕಡತಕ್ಕೆ ಸೇರಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಧನ್‌ಕರ್, ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಖರ್ಗೆ ಮುಕ್ತ ಮಾತಿಗೆ ಕಾರಣ ಹೇಳಿ ಕಾಲೆಳೆದ ಮೋದಿ!
ಕಳೆದ ವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದ ಎನ್‌ಡಿಎಗೆ 400+ ಸೀಟು ಹೇಳಿಕೆಯನ್ನು ಪ್ರಸ್ತಾವಿಸಿ, ಅವರ ಕಾಲೆಳೆದ ಪ್ರಧಾನಿ ಮೋದಿ, “ಧನ್ಯವಾದಗಳು ಖರ್ಗೆ ಯವರಿಗೆ. ನೀವು ನಮಗೆ 400+ ಸೀಟುಗಳ ಆಶೀರ್ವಾದ ನೀಡಿ ದ್ದೀರಿ. ಅದು ನಿಜವಾಗಲಿ ಎಂದು ನಾನು ಆಶಿಸುವೆ. ಹಾಗೆಯೇ ಕಳೆದ ವಾರ ನೀವು ಅಷ್ಟು ದೀರ್ಘವಾಗಿ ರಾಜ್ಯಸಭೆಯಲ್ಲಿ ಮಾತ ನಾಡಿದಿರಿ. ಅಷ್ಟೊಂದು ಮಾತನಾಡಲು ನಿಮಗೆ ಸ್ವಾತಂತ್ರ್ಯವಾದರೂ ಎಲ್ಲಿಂದ ಬಂತು ಎಂದು ನಾನು ಯೋಚಿಸುತ್ತಿದ್ದೆ. ಅನಂತರ ನನಗೆ, ಕಾರಣ ತಿಳಿದುಬಂತು: ಅಂದು ನಿಮ್ಮ ಇಬ್ಬರು ವಿಶೇಷ ಕಮಾಂಡರ್‌ಗಳು (ಜೈರಾಂ ರಮೇಶ್, ಕೆ.ಸಿ.ವೇಣುಗೋಪಾಲ್) ಇರಲಿಲ್ಲ. ಖರ್ಗೆ ಅವರು ಇದೇ ಅವಕಾಶ ಸದುಪಯೋಗಪಡಿಸಿ ಕೊಂಡು, ಫೋರ್, ಸಿಕ್ಸ್ ಎಲ್ಲ ಹೊಡೆದುಬಿಟ್ಟರು. ಆ ಸಮಯದಲ್ಲಿ ಖರ್ಗೆಯವರಿಗೆ “ಐಸಾ ಮೌಕಾ ಫಿರ್ ಕಹಾ ಮಿಲೇಗಾ’ ಹಾಡು ನೆನಪಾಗಿರಬಹುದು’ ಎಂದರು.